ಬಳ್ಳಾರಿ ಜಿಲ್ಲೆಯ ತಲಾ ವರಮಾನವು ರೂ.47607/ ಇದ್ದು,ಆಗ ಕರ್ನಾಟಕ ರಾಜ್ಯದ ತಲಾ ವರಮಾನವು ರೂಂ.41902/ ಆಗಿತ್ತು. ಅಂದರೆ ಬಳ್ಳಾರಿ ಜಿಲ್ಲೆ ವರಮಾನದ ದೃಷ್ಟಿಯಿಂದ ಶ್ರೀಮಂತವಾಗಿತ್ತು!
ಜಿಲ್ಲೆಯು ಇಂದಿಗೂ ಸಹ ಅತ್ಯಂತ ದುಸ್ಥಿತಿ
ಸಾಕ್ಷರತೆ ಪ್ರಮಾಣ, ಶಿಕ್ಷಣ, ಆರೋಗ್ಯ, ಆಹಾರ ಭದ್ರತೆಯಂತಹ ಮೂಲಭೂತ ಸಂಗತಿಗಳಲ್ಲಿ ಜಿಲ್ಲೆಯು ಇಂದಿಗೂ ಸಹ ಅತ್ಯಂತ ದುಸ್ಥಿತಿಯಲ್ಲಿದೆ. ಜಿಲ್ಲೆಯಲ್ಲಿನ ಜನಪ್ರತಿನಿಧಿಗಳು ಕಮ್ ಗಣಿಧಣಿಗಳ ಓಡಾಟಗಳಿಗೆ, ಐಲುಗಳಿಗೆ ವಿಮಾನ ನಿಲ್ದಾಣವೇ ಆದ್ಯತೆಯಾಗಿ ಬಿಡುತ್ತದೆ.
ತಮ್ಮದೇ ಊರಿನಲ್ಲಿ ಭಿಕ್ಷುಕ
ಒಂದೊತ್ತಿನ ಊಟಕ್ಕೂ ಗತಿಯಿಲ್ಲದೆ ನಿರ್ಗತಿಕರಾದ ಹಳ್ಳಿ ಮತ್ತು ನಗರದ ಜನರು ತಮ್ಮದೇ ಊರಿನಲ್ಲಿ ತಮ್ಮದೇ ಜಾಗಗಳಲ್ಲಿ ತಲೆ ಎತ್ತಿ ನಿಂತಿರುವ ರೆಸಾರ್ಟುಗಳು , ಹೋಟೆಲುಗಳು ಮುಂದೆ ಭಿಕ್ಷುಕರಾಗಿ ಓಡಾಡುವುದನ್ನು ಕಾಣಬಹುದು.
ಹೊಸಪೇಟೆ ಲೋಲುಪತನಕ್ಕೆ ಸಾಕ್ಷಿ
ಸೊಂಡೂರು ಗಣಿಗಾರಿಕೆಯ ಕರ್ಮಭೂಮಿಯಾದರೆ, ಪಕ್ಕದ ಹೊಸಪೇಟೆ ಎಂಬ ನಗರ ಲೋಲುಪತನಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಒಂದು ಪ್ರತಿಷ್ಟಿತ ಹೋಟೆಲೊಂದರ ಬೆಲೆ ದಿನದ ಕೇವಲ ಹನ್ನೆರೆಡು ತಾಸುಗಳ ವಾಸ್ತವ್ಯಕ್ಕೆ ರೂ.70000 ಗಳಿಂದ ಒಂದು ಲಕ್ಷದವರೆಗೂ ಇದೆ. ಅದ್ದೂರಿ ಮದುವೆಗಳನ್ನು ರೆಸಾರ್ಟುಗಳಲ್ಲಿ ನಡೆಸಲಾಗುತ್ತಿದೆ. ಬಡವ ಬಲ್ಲಿದರ ಅಂತರ ದಿನೇ ದಿನೇ ಹೆಚ್ಚುತ್ತಲೇ ಹೋಯಿತು.ಇಲ್ಲಿನ ಮೂಲನಿವಾಸಿಗಳೇ ಎಲ್ಲಿಂದಲೋ ಬಂದವರಂತೆ ಅಪರಿಚಿತರಾಗಿಬಿಟ್ಟಿದ್ದು ಚರಿತ್ರೆಯ ವ್ಯಂಗ್ಯವೂ ಹೌದು.
ಪುಟ್ಟಿ ಮೈನಿಂಗ್ ಕಲ್ಲಿಗೆ ಮುನ್ನೂರು ರೂಪಾಯಿ
ಶಾಲೆಗೆ ಹೋಗಬೇಕಾಗಿದ್ದ ಎಷ್ಟೊಂದು ಮಕ್ಕಳು ಮೈನಿಂಗ್ ಕೆಲಸಕ್ಕೆ ಹೋಗಿಬಿಟ್ಟರೆಂದರೆ ಊರಶಾಲೆಗಳೆಲ್ಲ ಬಿಕೋ ಎನ್ನತೊಡಗಿದವು.ಒಂದೋ ಎರಡೋ ಪುಟ್ಟಿ ಮೈನಿಂಗ್ ಕಲ್ಲು ಆರಿಸಿದರೆ ಇನ್ನೂರು ಮುನ್ನೂರು ರೂಪಾಯಿ ದೊರೆಯುವಾಗ ಮಕ್ಕಳು ಸಾಲಿಗೆ ಹೋಗುವುದನ್ನೆ ಬಿಟ್ಟುಬಿಟ್ಟರು.
ಕಡ್ಡಾಯ ಶಿಕ್ಷಣದ ಯೋಜನೆಗಳ ಸರ್ವೆಗಳೂ ಸಹ ಸುಳ್ಳು ವರದಿ
ಮಧ್ಯಾಹ್ನದ ಉರಿಬಿಸಿಲಲ್ಲಿ ಕಟ್ಟಿಕೊಂಡು ಬಂದ ಬಿಳಿ ಅನ್ನದಲ್ಲೂ ಕೆಂಪು ಮಣ್ಣು ಸೇರುತ್ತಿತ್ತು. ಹದಿನಾಲ್ಕು ವರುಷದವರೆಗಿನ ಕಡ್ಡಾಯ ಶಿಕ್ಷಣದ ಯೋಜನೆಗಳು ಸರ್ವೆ ಗಳೂ ಸಹ ಸುಳ್ಳು ವರದಿ ನೀಡಿದವು. ಇಂತದ್ದೇ ದಾಳಿಗೆ ತುತ್ತಾದ ಹಳ್ಳಿಯೊಂದರ ಸಾಲಿಯ ಚಿತ್ರಣವಿದು.
ನಾಕೊಂದ್ಲ ನಾಕು ನಾಕೆರೆಡ್ಲ …..? ಹೇಳಲಿಕ್ಕಾಗದೆ ಉತ್ತರ ಬರಲಿಯೆಂದು ಕಣ್ಣುಮುಚ್ಚಿ ಕಾಣದ ರಾಘವೇಂದ್ರಸ್ವಾಮಿ ಯನ್ನೋ, ಗಂಡಿ ನರಸಿಂಹನನ್ನೋ ಧ್ಯಾನಿಸುತ್ತಿರುವಾಗ, ದೇವರು ವರ ಕೊಡದೆ ಲೆಕ್ಕದ ಮೇಷ್ಟರ ಬೆತ್ತದ ರುಚಿ ಮತ್ತು ಪಿ.ಯು.ಟಿ. (Put) ಪುಟ್ ಅಂತೇಳಿ ಸಿ.ಯು.ಟಿ.( cut)ಕುಟ್ ಎಂದು ಹೇಳಿದರೆಂದು ಎಲ್ಲರೂ ಎದುರೇ ಕ್ಲಾಸ್ ಲೀಡರ್ ಹನುಮಂತಮ್ಮ ಎಂಬ ಹುಡುಗಿಯ ಕೈಯಿಂದ ಮೂಗಿಡಿದು ಕಪಾಳಕ್ಕೆ ಬಾರಿಸಿಕೊಳ್ಳುವುದಕ್ಕಿಂತ ಸುಖಾಸುಮ್ಮನೆ ಆಡುತ್ತಾ ಕಲ್ಲು ಮಣ್ಣು ಆರಿಸಿ, ಪುಟ್ಟಿಗಟ್ಟಳೆ ತುಂಬಿ ತುಂಬಿ ಇಟ್ಟರೆ ಸಾಕಿತ್ತು ಎಂದು ಸಾಲಿ ಬಿಟ್ಟವರೆ ಬಹಳ.
ಹೀಗೆ ಅವ್ವಂದಿರ ಹಿಂದೆ ಹೋದರೆ ದಿನವೊಂದಕ್ಕೆ ಇನ್ನೂರೋ ಮುನ್ನೂರೋ ಕೊಡುತ್ತಿದ್ದರು. ಎಳೆ ಕೈಗಳಿಗೆಲ್ಲ ಕೆಂಪು ಕೆಂಪು ಮಣ್ಣು ಮೆತ್ತಿಕೊಳ್ಳುತ್ತಿತ್ತು ಉಸಿರಾಡೋ ಗಾಳಿ ಕೆಂಪು. ದುಡಿದು ತಂದ ನೋಟುಗಳ ಗಾಂಧೀ ತಾತನೂ ಕೆಂಪು. ಲಾರಿಗಳ ಢರ್ ಭರ್ ಸದ್ದು. ಟಿಪ್ಪರುಗಳ ಸಹಿಸಲಸಾಧ್ಯ ಸದ್ದು….ಆಹಾ! ಎಂತಹ ದಿನಗಳು! ಆದರೆ… ಈಗ ಗಣಿ ಸದ್ದು ಅಡಗಿಹೋಗಿದೆ.
‘ಅಯ್ಯೋ ಸಿವನೆ, ಕೂಲಿ ನಾಲಿ ಕೆಲ್ಸದಾಗೆ ನನ್ ಕಂದನನ್ನು ನೋಡ್ಕಳಕೇ ಆಗಲಿಲ್ಲ ‘ ಎಂದು ಮಗುವಿನೆಡೆಗೆ ನೋಡುವ ತಾಯಿಯಂತೆ , ಎಲ್ಲರೂ ತಾವು ಕೂಡಿ ಆಡಿ ಬೆಳೆದ ಊರನ್ನು ಹೊಸದಾಗಿ ಎಂಬಂತೆ ನೋಡುತ್ತಿದ್ದಾರೆ.
ಊರಿಗೆ ಊರನ್ನೇ ಯಾರೋ ದೋಚಿದ್ದಾರೆ. ಹಚ್ಚಹಸಿರಿನ ಗಿಡ ಮರಗಳು ಬೆಟ್ಟದಾ ನೆರಳಲ್ಲಿರೋ ಶಾಲೆ… ಅನಾಥ ಮಗುವಿನಂತೆ ಕಾಣುತ್ತಿದೆ. ತನ್ನ ಮಾತಿಗೆ ಕೇರೇ ಮಾಡದ ಹಳ್ಳಿಯನ್ನು ಕಂಡು ದುಃಖಿತನಾಗಿ, ಕರಗಿ ಹೋದ ಬೆಟ್ಟಗಳನ್ನು ಅಜ್ಜನೊಬ್ಬ ನೋಡುತ್ತಾ ನಿಂತಿದ್ದಾನೆ.
ನಾಕೊಂದ್ಲ ನಾಕು ನಾಕೆರಡ್ಲ……….?
ಉತ್ತರ ಸಿಗದೆ ಲೆಕ್ಕದ ಏಟು ನೆನಪಾಗಿ, ಪಿಯುಟಿ ಪುಟ್ ಅಂತೇಳಿ ಸಿಯುಟಿ ಕುಟ್ ಅಂತೇಳಿ ಕಪಾಳಕ್ಕೆ ಬಾರಿಸಿಕೊಂಡು ಬಂದ ಶಾಲೆ ಒಂಟಿಯಾಗಿ ನಿಂತುಬಿಟ್ಟಿದೆ. ಎಲ್ಲೋ ಅಲ್ಲೊಂದು ಇಲ್ಲೊಂದು ಟಿಪ್ಪರುಗಳಿನ್ನೂ ಓಡಾಡುತ್ತಿವೆ.
ಅಕ್ಷರಗಳನ್ನು,ಪುಟ್ಟಿಗಳಲ್ಲಿ ಲಾರಿಗಳಲ್ಲಿ ಹೊತ್ತೊಯ್ದವರ ನೆನಪಿಸಿಕೊಳ್ಳುತ್ತ ಆ ಸಾಲಿ ಬಿಟ್ಟ ಹುಡುಗ, ಇನ್ನೂ ಅಲ್ಲಿಯೇ ನಿಂತಿದ್ದಾನೆ. ಮಣ್ಣು ತುಂಬುವ ಬದಲು,ಅಕ್ಷರಗಳನ್ನಾದರೂ ಕಲಿತಿದ್ದರೆ…. ಈ ಪರಿಸ್ಥಿತಿ ಬರುತ್ತಿರಲಿಲ್ಲ….ನಾವು ಮೋಸ ಹೋದೆವೆಂದು ದೈನ್ಯದಿಂದ ನೋಡುತ್ತಾರೆ. ಆ ದೈನೇಸಿ ನೋಟಗಳಿಗೆ ಉತ್ತರಿಸುವರಾರು?
ಬಿ.ಶ್ರೀನಿವಾಸ