ಹೊಲ ಕಳೆದುಕೊಂಡ ಕುಟುಂಬಗಳ ಮನೆಗಳಲ್ಲಿ ಟೀವಿಗಳು ಮಾತಾಡುತಿವೆ. ಕಾಯಿಲೆಗೆ ಸತ್ತ ಹೆಂಡತಿ, ಟಿಪ್ಪರಿನ ಗಾಲಿಗೆ ಸಿಕ್ಕು ಸತ್ತ ಹರೆಯದ ಮಗನ ಫೋಟೋಗಳು ಗೋಡೆಯ ಮೇಲಿವೆ. ದೀಪ ಆರಿದ ಮನೆಗಳಲ್ಲಿ ದೀಪ ಹಚ್ಚುವವರಿಲ್ಲ. ಈಗೀಗ ಕಳ್ಳ ಮತ್ತು ಡಕಾಯಿತರ ವ್ಯತ್ಯಾಸ ಜನರಿಗೆ ತಿಳಿಯುತ್ತಿದೆ. ಡಕಾಯಿತರು ತಡವಾಗಿಯಾದರೂ ಜೈಲು ಪಾಲಾಗಿದ್ದಾರೆ.
ಮುವ್ವರೇ ಮೂವರು ಮಂತ್ರಿಗಳು ಇಬ್ಬರು ಶಾಸಕರು ಬೆಟ್ಟಗುಡ್ಡಗಳನ್ನು, ಹೊಲ ಗದ್ದೆಗಳನ್ನು ಜನರ ಜೀವಗಳನ್ನು ನುಂಗಿ ನೀರು ಕುಡಿದ ಚಿತ್ರಗಳು ಟೀವಿ ಪರದೆಯಲ್ಲಿ ಓಡಾಡಿ ಸ್ತಬ್ದವಾಗಿವೆ. ಎರಡು ಲಕ್ಷ ಸಣ್ಣ ಸಣ್ಣ ಹೊಟ್ಟೆಗಳು, ಒಂದು ಲಕ್ಷ ದೊಡ್ಡ ಹೊಟ್ಟೆಗಳು ಕೆಂಡದಂಥಾ ಹಸಿವು ತಾಳಲಾರದೆ ಕಣಿವೆಗಳ ಕಡೆಗೆ ಯಾಕೆ ನೋಡುತ್ತಿದ್ದಾರೆ? ಸೊಂಡೂರಿನ ಸಾಲಿಗುಡಿಯಲ್ಲಿ ಭೂಗೋಲದ ಮೇಷ್ಟ್ರು ಪಾಠ ಹೇಳುತ್ತಿರುವುದೇಕೆ? ಮತ್ತು ಮಕ್ಕಳೇಕೆ ಬೋಳು ಗುಡ್ಡಗಳೆಡೆಗೆ ಕಣ್ಣು ಹಾಯಿಸುತ್ತಾರೆ? ಅಪ್ಪನ ಪಿಂಚಣಿ,ಅವ್ವನ ತಾಳಿಮಣಿ ಸೇರಿಸಿ ತಂದ ಲಾರಿಗಳ ಚಿತ್ರಗಳೇಕೆ ಸ್ತಬ್ದವಾದವು?
ಸ್ತಬ್ದಗೊಂಡ ಕೆಂಪು ಊರಿನ ಅಂಗಡಿಗಳಲ್ಲಿ ಪಾಲಿಡಾಲು,ಇಲಿಪಾಷಾಣ, ಹತ್ತಿಗೆ ಹೊಡೆಯುವ ಎಣ್ಣೆ,”ಉಚಿತವಾಗಿ ದೊರೆಯುತ್ತದೆ”ಎಂಬ ಬೋರ್ಡನ್ನು ಯಾಕೆ ಹಾಕಲಾಗಿದೆ? ಊರ ಜನರ ಹಸಿವನ್ನು ಯಾವ ಜೈಲಿನಲ್ಲಿ ಇಡಲು ಸಾಧ್ಯ ನೀವೇ ಹೇಳಿ? ಪ್ರಶ್ನೆಗಳಿಗೆ ಉತ್ತರಿಸುವರಾರು?
ಬಿ.ಶ್ರೀನಿವಾಸ