ದೇಶದ ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.25 ರಷ್ಟಿದೆ. ಅದರಲ್ಲೂ ಬಳ್ಳಾರಿ ಜಿಲ್ಲೆಯದು ಸಿಂಹಪಾಲು.
ಜಿಲ್ಲೆಯೊಂದರಲ್ಲಿಯೆ 124 ಅಧಿಕೃತ ಗಣಿಗಾರಿಕಾ ಪ್ರದೇಶಗಳಿವೆ. ನಾಲ್ಕುನೂರಕ್ಕೂ ಹೆಚ್ಚು ಕಂಪೆನಿಗಳು, ಏಳು ನೂರಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳನ್ನು ಅಕ್ರಮ ಗಣಿಗಾರಿಕೆಯ ಭಾಗೀದಾರರೆಂದು ಜಸ್ಟೀಸ್ ಸಂತೋಷ್ ಹೆಗ್ಡೆಯವರ ವರದಿಯಲ್ಲಿ ಹೆಸರಿಸಲಾಗಿದೆ.
ಆ ವರದಿಯಲ್ಲಿ,
- 1.ಮೈನ್ಸ್ ಅಂಡ್ ಮಿನರಲ್ಸ್ ಡೆವಲಪ್ಮೆಂಟ್ ಅಂಡ್ ರೆಗ್ಯುಲೇಷನ್ ಆಕ್ಟ್- 1957
- 2.ಅರಣ್ಯ ಸಂರಕ್ಷಣಾ ಕಾಯಿದೆ- 1980
- 3.ಪರಿಸರ ಸಂರಕ್ಷಣಾ ಕಾಯಿದೆ- 1984
- ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ- 2006
- ಪಂಚಾಯತ್ ರಾಜ್ ಆಕ್ಟ್..
ಮುಂತಾದ ಕಾಯಿದೆಗಳ ಸ್ಪಷ್ಟ ಉಲ್ಲಂಘನೆಯಾಗಿರುವುದನ್ನು ಹೇಳಿದೆ.
ಕೆಲ ಡಿಪಾರ್ಟುಮೆಂಟುಗಳು ಈ ಭಾಗದಲ್ಲಿ ಇದ್ದುವೆನ್ನುವುದೇ ಬಹಳಷ್ಟು ಜನರಿಗೆ ಗೊತ್ತಾಗಲಿಲ್ಲ. ಎಲ್ಲ ಕಾಯಿದೆಗಳಿದ್ದೂ ಇಲ್ಲದಂತಹ ಕಾಲವೊಂದನ್ನು ಅಪವಿತ್ರ ಸಹೋದರರು ಮತ್ತಿತರ ಧಣಿಗಳು ಸೃಷ್ಟಿಮಾಡಿಬಿಟ್ಟರು.
ಇಲಾಖೆಗಳು ಭ್ರಷ್ಟಾಚಾರದ ಕೂಪದೊಳಗೆ
ಇಷ್ಟಲ್ಲದೆ, ಪೊಲೀಸು, ಗಣಿ ವಿಜ್ಞಾನ ,ಅರಣ್ಯ, ಶಿಕ್ಷಣ, ಕಂದಾಯ, ಕೃಷಿ, ನೀರಾವರಿ, ತೂಕ ಮತ್ತು ಅಳತೆ ಮಾಪನ ಇಲಾಖೆ, ಕಮರ್ಷಿಯಲ್ ಟ್ಯಾಕ್ಸ್, ಕಾರ್ಮಿಕ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳಂತಹ ಅನೇಕ ಇಲಾಖೆಗಳು ಭ್ರಷ್ಟಾಚಾರದ ಕೂಪದೊಳಗೆ ಬಿದ್ದುಬಿಟ್ಟವು.
2003ನೇ ಇಸವಿಯಲ್ಲಿ ಸರ್ಕಾರವೇ ಜಾರಿಗೆ ತಂದ ಕರ್ನಾಟಕ ರಾಜ್ಯ ಮೈನಿಂಗ್ ಪಾಲಿಸಿ -2003 ರಡಿಯಲ್ಲಿ 11620 ಚದರ ಕಿಲೋಮೀಟರಿನಷ್ಟು ವಿಸ್ತಾರದ ಭೂಮಿಯನ್ನು ಖಾಸಗಿಯವರ ಗಣಿ ಆಟಗಳಿಗೆಂದು ರಿ-ಡಿಸರ್ವ್ ಮಾಡಲಾಯಿತು.ಇದಕ್ಕಾಗಿ ಪಕ್ಷಾತೀತ ಬೆಂಬಲವೂ ದೊರೆತಿತ್ತು. ಶ್ರೀಮಂತ ರೈತರು ಕೃಷಿಯಿಂದ ವಿಮುಖರಾಗಿ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡರು.
ಆ ಹತ್ತು ವರುಷಗಳ ಅವಧಿಯೊಂದರಲ್ಲಿಯೇ ಕರ್ನಾಟಕದ ಜನತೆಯ ಬೆವರಿನ ಶ್ರಮದ ನಾಲ್ಕು ಸಾವಿರ ಕೋಟಿ ರೂಪಾಯಿಗಳ ಮೊತ್ತವು ಸರ್ಕಾರದ ಖಜಾನೆಗೆ ಸೇರದೆ ,ಕೆಲವೇ ಕೆಲವು ಗಣಿ ಸಹೋದರರ ಪಾಲಾಯಿತು.
ಬೀದಿಗೆ ಬಿದ್ದರು
ಕೃಷಿಯಿಂದ ವಿಮುಖರಾಗಿದ್ದ ಬಹುತೇಕರಿಂದಾಗಿ ಬೇಸಾಯದ ಕೆಲಸಗಳನ್ನೆ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದ , ಕೃಷಿ ಕೂಲಿಕಾರರು , ಬಡಗಿ ,ಕಮ್ಮಾರ, ಕುಂಬಾರರಿಗೆ ಕೆಲಸವಿಲ್ಲದೆ ಬೀದಿಗೆ ಬಿದ್ದರು.
ಈ ಅಪಾಯಕ್ಕೆ ಬಲಿಯಾದವರ ಸಂಖ್ಯೆ 15 ಸಾವಿರ !
ಹೀಗೆ ಧುತ್ತನೆ ಬಂದೆರಗಿದ ಅಪಾಯಕ್ಕೆ ಬಲಿಯಾದವರ ಪೈಕಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ-ಸೊಂಡೂರು ಸುತ್ತಲಿನ ಹಳ್ಳಿಗರ ಸಂಖ್ಯೆಯೇ ಹದಿನೈದು ಸಾವಿರ ದಾಟಿತ್ತು.ಇವರನ್ನು ನಂಬಿದ ಮಕ್ಕಳು, ಮಹಿಳೆಯರನ್ನು ಲೆಕ್ಕ ಹಾಕಿದರೆ ಭೀಕರತೆಯ ಪ್ರಮಾಣವನ್ನು ಗ್ರಹಿಸಬಹುದು.
ಮಳೆ ಬೀಳುವ ಕಾಲಮಾನಗಳೇ ಬದಲಾದವು
ಮಳೆ ಬೀಳುವ ಕಾಲಮಾನಗಳೇ ಬದಲಾದವು.ಕೃಷಿ ಮಾಡಲಾಗದ ಸ್ಥಿತಿಗೆ ಭೂಮಿಯನ್ನು ಬಂಜರುಗೊಳಿಸಲಾಯಿತು. ಅಳಿದುಳಿದ ಪ್ರದೇಶವನ್ನೂ ಹಸಿರು ವಲಯದಿಂದ ಮುಕ್ತಗೊಳಿಸಲಾಯಿತು.
ಮಣ್ಣು ತನ್ನ ಸತ್ವ ಕಳೆದುಕೊಂಡಿತು
ಮಣ್ಣು ತನ್ನ ಸತ್ವವನ್ನು ಕಳೆದುಕೊಂಡಿತು ತುಂಗಭದ್ರಾ ನದಿಯ ಅಣೆಕಟ್ಟಿನ ನೀರು ಸಂಗ್ರಹದ ಸಾಮರ್ಥ್ಯ 133 ಟಿ.ಎಂ.ಸಿ ಯಿಂದ ಇದ್ದುದು ಗಣಿಗಾರಿಕೆಯ ಪರಿಣಾಮದಿಂದಾಗಿ 99 ಟಿ.ಎಂ.ಸಿ.ಗೆ ಇಳಿಯಿತು. ಅಧ್ಯಯನವೊಂದರ ಪ್ರಕಾರ ಜಿಲ್ಲೆಯ ಮಾನವ ಅಭಿವೃದ್ಧಿ ಸೂಚ್ಯಂಕ ಪಾತಾಳಕ್ಕೆ ಕುಸಿಯಿತು. ಲೋಹದದಿರಿನ ಮಣ್ಣಿಂದಾಗಿ ಕುಡಿಯುವ ನೀರು ಸಹ ಮಲಿನವಾಯಿತು.
ರೋಗಗಳು ಬಾದಿಸಿದವು
ಉಸಿರಾಟದ ಸಮಸ್ಯೆಗಳು , ರಕ್ತಹೀನತೆ , ಶ್ವಾಸಕೋಶದ ನಂಜು , ಹೃದಯ ಸಂಬಂಧಿ ಕಾಯಿಲೆಗಳು , ಚರ್ಮರೋಗಗಳು , ಕ್ಯಾನ್ಸರ್ , ಟೀಬಿಯಂತಹ ಮಾರಣಾಂತಿಕ ರೋಗಗಳೆಲ್ಲ ಜಿಲ್ಲೆಯ ಜನರಿಗೆ ತುಂಬಾ ಸಹಜ ರೋಗಗಳಾಗಿ ಹೋದವು,!
ಮಕ್ಕಳಿಲ್ಲದೆ ಎಷ್ಟೋ ಶಾಲೆಗಳು ಮುಚ್ಚಲ್ಪಟ್ಟವು
ಕಡಿಮೆ ಕೂಲಿಗೆ ಹೆಚ್ಚು ಕೆಲಸ ಮಾಡುವ ಮಹಿಳೆಯರನ್ನು ಗಣಿಗಾರಿಕೆಯ ಕೆಲಸಗಳಲ್ಲಿ ತೊಡಗಿಸಲಾಯಿತು. ಇದರಿಂದಾಗಿ ಕೌಟುಂಬಿಕ , ಸಾಮಾಜಿಕ ವ್ಯವಸ್ಥೆ ಅಸ್ತವ್ಯಸ್ಥಗೊಳಿಸಲಾಯಿತು. ಮನೆಯೇ ಮೊದಲ ಪಾಠಶಾಲೆ , ತಾಯಿಯೇ ಮೊದಲ ಗುರು ಎಂಬ ಮಾತುಗಳೂ ಅಬ್ಬರದ ಧೂಳಿನಲ್ಲಿ ಕಾಣದಂತಾಗಿ , ಕೇಳಿಸದಂತಾಗಿ ಹೋದವು. ಹದಿನಾಲ್ಕು ವರುಷದೊಳಗಿನ ಮಕ್ಕಳದೂ ಇದೇ ಕಥೆಯಾಯಿತು. ಮಕ್ಕಳಿಲ್ಲದೆ ಎಷ್ಟೋ ಶಾಲೆಗಳು ಮುಚ್ಚಲ್ಪಟ್ಟವು.
ಕೃಷಿಯೋಗ್ಯ ಭೂಮಿ ಹಾಳು
2005-06ರಲ್ಲಿ 479188 (ನಾಲ್ಕು ಲಕ್ಷದ ತೊಂಭತ್ತೊಂದು ಸಾವಿರದ ಒಂದು ನೂರಾ ಎಂಭತ್ತೆಂಟು ) ಹೆಕ್ಟೇರ್ ನಷ್ಟಿದ್ದ ಕೃಷಿ ಭೂಮಿ, 2009-10 ರಷ್ಟೊತ್ತಿಗೆ 436067 (ನಾಲ್ಕು ಲಕ್ಷದ ಮೂವತ್ತಾರು ಸಾವಿರದ ಅರವತ್ತೇಳು ) ಹೆಕ್ಟೇರಿಗೆ ಇಳಿದಿತ್ತು. ಅಂದರೆ, ಕೇವಲ ನಾಲ್ಕೈದು ವರ್ಷಗಳ ಅವಧಿಯೊಂದರಲ್ಲಿ 43121 (ನಲವತ್ಮೂರು ಸಾವಿರದ ಒಂದು ನೂರಾ ಇಪ್ಪತ್ತೊಂದು ) ಹೆಕ್ಟೇರಿನಷ್ಟು ಕೃಷಿಯೋಗ್ಯ ಭೂಮಿಯನ್ನು ಹಾಳುಮಾಡಲಾಗಿತ್ತು! ಅದೇ ಅವಧಿಯಲ್ಲಿ 2324.80 ಹೆಕ್ಟೇರ್ ನೀರಾವರಿ ಪ್ರದೇಶವಾಗಿದ್ದ ಭೂಮಿಯು, 2010-11 ರ ಅವಧಿಯಷ್ಟೊತ್ತಿಗಾಗಲೆ 2192.51ಹೆಕ್ಟೇರಿಗೆ ಇಳಿದಿತ್ತು.
ಈ ಭಾಗದ ಸೋಷಿಯೋ-ಇಕಾನಮಿಕ್- ಅಂಡ್ ಕಲ್ಚರಲ್ ವ್ಯಾಲ್ಯೂಸ್….ಅಂತ ಏನು ನಾವು ಮಾತನಾಡುತ್ತಿದ್ದೆವೋ ಅವೆಲ್ಲವುಗಳೂ ಒಂದು ರೀತಿಯ ಸೈಕಾಲಜಿ ಕಲ್,ಕಲ್ಚರಲ್ ಶಾಕ್ ಗೆ ಒಳಗಾಗಿದ್ದಂತೂ ಅಕ್ಷರಶಃ ಸತ್ಯ. ಅಗೆದಷ್ಟೂ….ನಮ್ಮ ಹೃದಯವನ್ನು , ನಮಗೆ ನಾವೇ ಬಗೆದುಕೊಂಡಷ್ಟು ನೋವು ಉಂಟಾಗುತ್ತಿದೆ.
ಬಿ.ಶ್ರೀನಿವಾಸ