Kannada News | Dinamaana.com | 21-05-2024
ಈ ಊರಿನ ದುರಂತ ಇಡೀ ಪ್ರಪಂಚವನ್ನೆ ಪ್ರತಿನಿಧಿಸುವುದರ ಸಂಕೇತ. ಗಣಿಗಾರಿಕೆ ಆರಂಭವಾದಾಗಲೇ ಮನುಷ್ಯರ ಅವನತಿ ಆರಂಭವಾಯಿತು. ಎಗ್ಗಿಲ್ಲದೆ ನಡೆದ ಅಕ್ರಮ ಮೈನಿಂಗ್ ಹಾವಳಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಪ್ರತಿ ಊರಿಗೂ ಇರುವಂತೆ ಈ ಊರಿಗೂ ಸಂಸ್ಕೃತಿ ಎಂಬುದೊಂದಿತ್ತು. ಸಂಸ್ಕೃತಿ ಎಂದರೆ ಅದೊಂದು ಜನಸಮುದಾಯವು ಬದುಕುವ ರೀತಿಯಾಗಿತ್ತು.ಈ ಮೊದಲು ಇದ್ದ ಕಂಪೆನಿಗಳು ಸುತ್ತಲಿನ ಸುಬ್ರಾಯನಹಳ್ಳಿ,ದೇವಗಿರಿ,ಕುಮಾರಸ್ವಾಮಿ ಬೆಟ್ಟಗಳ ತಪ್ಪಲಿನಲ್ಲಿ ಕಾರ್ಮಿಕರಿಗಾಗಿಯೆ ಇಂತಹ ಪುಟ್ಟ ಊರುಗಳನ್ನು ನಿರ್ಮಾಣ ಮಾಡಿದ್ದವು.
ಮನೆಗಳೆಂದರೆ ಹದಿನೈದು×ಇಪ್ಪತ್ತು ಅಡಿ ವಿಸ್ತೀರ್ಣದವಾಗಿದ್ದವು.ಆ ಪುಟ್ಟ ಮನೆಗಳಲ್ಲಿಯೇ ಇಡೀ ಸಂಸಾರವಂದಿಗರೆಲ್ಲರೂ ಕೂಡಿ ಕಾಲ ಕಳೆಯಬೇಕಾಗಿತ್ತು.ಹೀಗೆ ಗಣಿ ಕೂಲಿಗಾಗಿ ದುಡಿಯುವವರಿಗೆ ಖಾಕಿ ಯುನಿಫಾರ್ಮ್ ಕೊಡಲಾಗಿತ್ತು.ಸಂಬಳ ಅಂತೇನು ಇರಲಿಲ್ಲ. ಗೌರವಧನ ಎಂದು ತಿಂಗಳಿಗೆ ಆರುನೂರು ರೂಪಾಯಿಗಳಂತೆ ನೀಡುತ್ತಿದ್ದರು. ರೇಷನ್ನು ಕೊಡುತ್ತಿದ್ದರು.ಬರಪೀಡಿತ ಹೊಲಗಳನ್ನು ನೆಚ್ಚಿಕೊಂಡು ತೀವ್ರ ಬಡತನವನ್ನು ಅನುಭವಿಸುವ ಬ್ಯಾಸಾಯಕ್ಕಿಂತ ಇದೇ ವಾಸಿಯೆಂದು ಸುಮ್ಮನೆ ಕೆಲಸ ಮಾಡುತ್ತಿದ್ದರು.
ಮ್ಯೂಜಿಯಮ್ಮಿನಲ್ಲಿಟ್ಟ ವಸ್ತು
ತಮ್ಮ ಅಜ್ಜ ಮುತ್ತಜ್ಜರ ಕಾಲದಿಂದಲೂ ಇದ್ದ ಜಂತಿನ ತೊಲೆ ಕಂಬಗಳ ಮನೆಯ ನೆನಪುಗಳೆಲ್ಲ ಅಳಿಸಿಹೋದವು. ಅನಿಯಮಿತ,ಅನಿಯಂತ್ರಿತ ,ಅಕ್ರಮ ಗಣಿಗಾರಿಕೆ ಆರಂಭವಾದ ನಂತರವಂತೂ ಜನರ ಬದುಕು ಮತ್ತಷ್ಟು ದುಸ್ತರಗೊಂಡಿತು. ಹೊಲವಿಲ್ಲ ,ಮನೆಯಿಲ್ಲ, ಆರೋಗ್ಯವಾಗಿದ್ದರೂ, ಸಂಬಂಧಿಕರಿಲ್ಲದ , ಹಬ್ಬ ಹರಿದಿನಗಳಿಲ್ಲದ ಯಂತ್ರಗಳ ಜೊತೆಗೆ ಮನುಷ್ಯರೂ ಸಹ ಭಾವರಹಿತ ಯಂತ್ರಗಳೇ ಆಗಿಹೋದರು.ಅಕ್ಷರಶ “ಮ್ಯೂಜಿಯಮ್ಮಿನಲ್ಲಿಟ್ಟ ವಸ್ತು”ಗಳಾಗಿಹೋದರು.
ಗಾಯಗೊಂಡ ಸಾಂಸ್ಕೃತಿಕ ಶರೀರ
ಹೌದು, ನವಯಾಂತ್ರಿಕ ವ್ಯವಸ್ಥೆಯೊಂದು ಜನಸಮುದಾಯಗಳ ಬದುಕುವ ರೀತಿಯನ್ನೆ ಬದಲಾಯಿಸಿ ಬಿಟ್ಟಿತು.ರೋಗಪೀಡಿತ ಜೀವನಕ್ರಮ, ದಿನನಿತ್ಯದ ಬದುಕುವ ಜಗತ್ತಾಗಿಹೋಯಿತು. ನೆಲ ಸಂಸ್ಕೃತಿಗಳು ನೆಲಕಚ್ಚಿದರೂ ಬಿಡದೆ, ಟಿಪ್ಪರುಗಳಲ್ಲಿ ದೇಶವಿದೇಶಗಳಿಗೆ ಅದಿರಿನೊಂದಿಗೆ ರಫ್ತಾದವು. ಸೊಂಡೂರು ಸುತ್ತಮುತ್ತಲಿನ ಸಾಂಸ್ಕೃತಿಕ ಶರೀರ ಗಾಯಗೊಂಡಿತು.
ನೈತಿಕ ವ್ಯವಸ್ಥೆಯೇ ಕುಸಿದಿದೆ
ಮನುಷ್ಯರ ನೈತಿಕ ವ್ಯವಸ್ಥೆಯೇ ಕುಸಿದುಹೋದ ಅಥವಾ ಇಲ್ಲವಾಗಿ ಹೋದ ಇಂತಹ ಊರುಗಳಲ್ಲಿ ಬಹು ಸಂಕೀರ್ಣವಾದ ಅನಿಶ್ಚಿತತೆಯಲ್ಲಿ ಬದುಕುತ್ತಿರುವ ಜೀವಗಳ ಮರುಶೋಧನೆಗಿಳಿಯಬೇಕಿದೆ.
ಸಂತ್ರಸ್ಥರಿಗೆ ಸಮಾಧಾನವಿಲ್ಲ
ಎರಡನೇ ಜಾಗತಿಕ ಮಹಾಯುದ್ಧದ ಬಾಂಬು ದಾಳಿಯ ಪರಿಣಾಮದಿಂದಾಗಿ ಹಿರೋಶಿಮಾ -ನಾಗಸಾಕಿ ನಗರಗಳು ಅಳಿದುಳಿದ ಜನರನ್ನು, ಸಾಮ್ರಾಜ್ಯ ಶಾಹಿ ಒಂದೆಡೆ ಸೇರಿಸಿ ಹೊಸ ಊರೊಂದನ್ನು ನಿರ್ಮಾಣ ಮಾಡಿ ಇರಿಸಿತು.ಮಿರಿಮಿರಿ ಮಿಂಚುವ ರಸ್ತೆಗಳು,ಪ್ರತಿಯೊಬ್ಬರಿಗೂ ಮನೆ,ನೀರು,ಆಹಾರ,ಉದ್ಯೋಗ ಎಲ್ಲವನ್ನು ವ್ಯವಸ್ಥಿತವಾಗಿ ಮಾಡಲಾಯಿತು. ಆದರೆ ಆ ಸಂತ್ರಸ್ಥರಿಗೆ ಸಮಾಧಾನವಿರಲಿಲ್ಲ. ದಿನವಿಡೀ ಯಾರೊಂದಿಗೂ ಮಾತನಾಡದೆ ಮೌನಿಯಾದರು!ಊಟವನ್ನೂ ಕಡಿಮೆ ಮಾಡತೊಡಗಿದರು.
Read Also: ಸೊಂಡೂರಿನ ಕಗ್ಗತ್ತಲೆಯ ಕಥನಗಳು-21 ಹರಿಶಂಕರ !
ತಮ್ಮ ಸಂಪ್ರದಾಯಗಳು,ಆಚರಣೆಗಳಿಲ್ಲದ, ಹಿರೀಕರಿಲ್ಲದ, ಅಂಗಳದಲ್ಲಿ ಆಡುತ್ತಿದ್ದ ಮಕ್ಕಳು ಬಾಂಬು ದಾಳಿಗೆ ನರಳಿ ಸತ್ತ ನೆನಪುಗಳ ಹೊತ್ತ ಅವರಿಗೆ, ಹೊತ್ತು ದೀರ್ಘವೆನಿಸತೊಡಗಿತು. ಆ ಮನುಷ್ಯರಿಗೆ ತಮಗೆ ತಾವೇ ಎಲ್ಲಿಂದಲೋ ತಂದಿಟ್ಟ ಮ್ಯೂಜಿಯಮ್ಮಿನ ವಸ್ತುಗಳು ತಾವು ಎಂಬ ಭಾವನೆ ಬಲವಾಗಿಬಿಟ್ಟಿತು. ಇಂಥ ಊರುಗಳಲ್ಲಿನ ಮನುಷ್ಯರನ್ನು ಯಾವುದೋ ಜಗತ್ತಿನಿಂದ ತಂದ ಪ್ರಾಣಿಗಳ ಹಾಗೆ,ವಸ್ತುಗಳ ಹಾಗೆ ಚಿತ್ರಿಸುವ ನಿರ್ಭಾವುಕ ಸಮಾಜ ಈ ಜನರ ಮುಂದೆ ಕುಬ್ಜ ವಾಗಿದ್ದು ಸತ್ಯ.ಚೈತನ್ಯ ಶೀಲ, ಸಂವೇದನಾಶೀಲ ಸಮಾಜ ಮಾತ್ರವೇ ಮನುಷ್ಯನಿಗಿರುವ ಅಗಾಧ ಸಾಧ್ಯತೆಗಳನ್ನು ರೂಪಿಸಬಲ್ಲುದು.
ಎಷ್ಟೋ ಜನರು ತಮ್ಮ ಹಳೆಯ ಜನಪದ ಹಾಡುಗಳನ್ನು,ಕತೆಗಳನ್ನು,ನೆನಪಿಗೆ ತಂದುಕೊಂಡು ತಮ್ಮಷ್ಟಕ್ಕೆ ತಾವೇ ಗುನುಗಲು ಶುರುವಿಟ್ಟುಕೊಂಡರಂತೆ.ಕೆಲವರಿಗಂತೂ ನೆನಪುಗಳೂ ಬರದೆ, ಹೊಂದಿಕೊಳ್ಳದೆ ಬದುಕುವುದು ಕಷ್ಟವಾಗತೊಡಗಿತು. ಇಂತಹದೊಂದು ವಿಚಿತ್ರ ಸನ್ನಿವೇಶದಲ್ಲಿ ಎಷ್ಟೋ ಮನುಷ್ಯರು ಹುಚ್ಚರಾಗಿಬಿಟ್ಟರಂತೆ.ಎಷ್ಟೋ ಜನ ಆತ್ಮಹತ್ಯೆಗೂ ಶರಣಾದರಂತೆ.ಇನ್ನು ಕೆಲವರಿಗೆ ಇಂತಹ ಸ್ಥಿತಿಗೆ ತಮ್ಮನ್ನು ತಂದಿಟ್ಟ ಪ್ರಭುತ್ವದ ವಿರುದ್ಧ ಪ್ರತಿರೋಧಿಸಲೂ ಆಗದೆ,ಬದುಕಲಿಕ್ಕೂ ಆಗದೆ ಸಾಯಲೂ ಆಗದಂತಹ ಸ್ಥಿತಿಯಲ್ಲಿ ಅವರಿದ್ದರು.
ಸೊಂಡೂರಿಗೂ ಹಿರೋಶಿಮಾ – ನಾಗಸಾಕಿಯ ಊರುಗಳಿಗೂ ವ್ಯತ್ಯಾಸ ಗಳಿದೆಯಾ?
ಕಣ್ಣಿಗೆ ಕಾಣದ ಇಂತಹ ಹಿಂಸೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದದ್ದು ಸಂವೇದನಾಶೀಲ, ಸೂಕ್ಷ್ಮತೆಗಳ ಅರಿವಿರುವ ಪ್ರಭುತ್ವದ ಜವಾಬ್ದಾರಿ ಎಂಬುದೇನೊ ನಿಜ. ಆದರೆ… ನಿರ್ಭಾವುಕ ವೋಟಿಂಗ್ ಮೇಷೀನುಗಳ ಮೂಲಕವೆ ಆಯ್ಕೆಯಾಗುವ ಪ್ರಭುತ್ವಕ್ಕೆ ಕಣ್ಣು,ಕಿವಿ,ಮೂಗು ಬಾಯಿಗಳಿಗಿಂತಲೂ , ಹೃದಯು ಇರಬೇಕಾದುದು ಅಗತ್ಯ. ಈಗ ಹೇಳಿ, ಸೊಂಡೂರಿಗೂ ಹಿರೋಶಿಮಾ – ನಾಗಸಾಕಿಯ ಊರುಗಳಿಗೂ ವ್ಯತ್ಯಾಸ ಗಳಿದೆಯಾ? ನನಗೇನೂ ಹಾಗನ್ನಿಸುವುದಿಲ್ಲ.
-ಬಿ.ಶ್ರೀನಿವಾಸ