ಕ್ಷಯರೋಗ! ….. ಹೀಗೆ ಕೇಳಿದರೆ ಜನರಿಗೆ ಬೇಗ ಅರ್ಥವಾಗುವುದಿಲ್ಲ. ಟೀಬಿ ರೋಗ ಎನ್ನಿ , ಬಾಯ್ತುಂಬಾ ನಕ್ಕು ಪ್ರತಿಕ್ರಿಯಿಸುತ್ತಾರೆ! ಈ ಟೀಬಿ, ಆತನ ಹೆಂಡತಿಯನ್ನು ಕರೆದುಕೊಂಡು ಹೋಯಿತಂತೆ.
ಮಗನೂ ಕೆಮ್ಮುತ್ತಲೆ ಯಾವ ರೋಗವೆಂದು ಗೊತ್ತಾಗುವ ಮುಂಚೆಯೇ ಉಸಿರು ನಿಲ್ಲಿಸಿದನಂತೆ. ಅವರಿಬ್ಬರನ್ನು ಹೂತಿಟ್ಟ ಹೊಲ ಕೂಡ ಮೈನಿಂಗ್ ದಾಳಿಗೆ ತುತ್ತಾಯಿತು. ಗುದ್ದುಗಳಲಿ ಮಲಗಿದವರು ಯಾವ ಬಂದರಿನ ಹಡಗಿನ ಮೂಲಕ ಯಾವ ದೇಶ ಸೇರಿದರೋ….ಬಲ್ಲವರಾರು?
ಸೊಂಡೂರಿನ ಆ ಕೆಂಪು ಗುಡ್ಡಗಳ ಮೇಲೆ ಬಿದ್ದ ಸಂಜೆಯ ಹೊಂಗಿರಣಗಳು ಊರನ್ನು ಮತ್ತಷ್ಟು ಕೆಂಪಾಗಿಸುತ್ತಿತ್ತು. ಊರ ಮುಂದಿನ ಪಣುವು ಮೇಲೆ ಕುಂತು ಆ ಬೋಳಾದ ಗುಡ್ಡಗಳನ್ನೆ ನೋಡುತ್ತಾ ಕುಳಿತ ಆ ಮುದುಕನಿಗೆ ಏನನ್ನಿಸಿತೋ ಮೌನವಾಗಿ ಕಣ್ಣೊರೆಸಿಕೊಳ್ಳುತ್ತಿದ್ದಾನೆ. ತಾವುಂಡು ಆಡಿ ಬೆಳೆದ ಊರನ್ನೆ ಹೊಸದಾಗಿಯೆಂಬಂತೆ ನೋಡುವ ನೋಟ.
“ಅಯ್ಯೋ ಸಿವನೆ.. ಕೆಲಸದಾಗೆ ನಾನು ಕಂದನಿಗೆ ಹಾಲುಣಿಸೋದೆ ಮರೆತ್ ಬಿಟ್ಟೆ ” ಎಂದು ಮಗುವಿನೆಡೆಗೆ ನೋಡುವ ತಾಯಿಯ ಗಾಢ ನೋಟವಿತ್ತು.ಆ ನೋಟದಲ್ಲಿ ಬಹುಕಾಲದವರೆಗೂ ಹಲವಾರು ಪ್ರಶ್ನೆಗಳು, ಮನುಷ್ಯ ಹೃದಯವನ್ನು ಮತ್ತೆ ಮತ್ತೆ ಕೇಳುತ್ತಲೇ ಇರುತ್ತೇವೆ.ಕಾಡುತ್ತಲೆ ಇರಬಲ್ಲವು.
ಸೊಂಡೂರಿನ ಅತಿರೇಕದ ಹವಾಮಾನದಲ್ಲಿ ಕಳೆದುಕೊಂಡ ಬದುಕಿಗಾಗಿ ಈಗ ಯಾರೂ ದುಃಖಿಸುವುದಿಲ್ಲ. ಆ…ದ…ರೆ.. ಮೌನವಾಗಿದ್ದುಬಿಡುತ್ತಾರೆ!
ಬಿ.ಶ್ರೀನಿವಾಸ