Kannada News | Sanduru Stories | Dinamaana.com | 01-06-2024
ಆಗ್ಲೇ ಎಲೆಕ್ಸನ್ನು ಬಂದ್ಬುಡ್ತ? (Sanduru Stories)
ಹೊಲಕ್ಕೋಗನಂದ್ರೆ ಹೊಲ ಇಲ್ಲ.ಇದ್ದ ಬದ್ದ ಹೊಲಗಳು ನೋಟುಗಳಾಗಿ ಕಾರುಗಳಲ್ಲಿ ಮುದುರಿಕೊಂಡು ಕುಂತಿರುವ ಹಾಗೆ ತೋರುತ್ತಿವೆ. ಕೆಂಪು ಧೂಳಿನಲ್ಲಿ ಬಿಳಿ ಬಣ್ಣದ ಕಾರುಗಳು ಓಡಾಡುವುದನ್ನು ಕಂಡು, “ಆಗ್ಲೇ ಎಲೆಕ್ಸನ್ನು ಬಂದ್ಬುಡ್ತ?” ಆಸೆ ಗರಿಗೆದರಿ ಆತ ಕೇಳಿಯೇ ಬಿಟ್ಟ. “ಏಯ್, ಇಲ್ಲ ತಗಾ, ಇನ್ನೂ ಐದ್ವರ್ಸ ಸೈತ ಆಗಿಲ್ಲ ಮತ್ತೆಂದೂ ಎಲೆಕ್ಸನ್ನು?”ಎಂದಳಾಕೆ.
ಹರೆಯದ ಹುಡುಗರಿಗೆ ‘ಪಾರ್ಚಿ’ಹೊಡೆದಿದೆ (Sanduru Stories)
ಒಂದು ಪಾರ್ಟಿಯ ಧಣಿ ಟೀವಿ ಕೊಡಿಸಿದ. ಮತ್ತೊಂದು ಪಾರ್ಟಿಯ ಧಣಿ, ಕುಕ್ಕರ್ರು, ಸೀರೆಗಳನ್ನು ಹಂಚಿದ. ಗೆದ್ದು ಬಂದರೆ ಹುಡುಗರಿಗೆ ಒಂದೊಂದು ಗಾಡಿ ಕೊಡುವುದಾಗಿ ಇಂಡಿಪೆಂಡೆಂಟ್ ಕ್ಯಾಂಡಿಡೇಟ್ ಹೇಳುತ್ತಿದ್ದಾನೆ. ಈಗ ಎಲ್ಲರ ಮನೆಯಲ್ಲೂ ಟಿವಿಗಳು ಮಾತಾಡುತ್ತಿವೆ. ಹರೆಯದ ಹುಡುಗರಿಗೆ ‘ಪಾರ್ಚಿ’ಹೊಡೆದಿದೆ.ಗೋಲಿ ಗುಂಡು ಕೊಡಿಸುವವರಿಲ್ಲದೆ ಮಕ್ಕಳು ಮಣ್ಣು ತೂರುವ ಆಟ ಆಡಿಕೊಂಡಿದ್ದಾರೆ.
ಆತನಿಗೆ ದಮ್ಮು ಜಾಸ್ತಿಯಾಗಿ ಉಸಿರಾಟ ಕಷ್ಟ (Sanduru Stories)
“ಒಬ್ಬೊಬ್ಬರಿಗೆ ಒಂದೊಂದು ಗಾಂಧಿ ನೋಟು! ಎಂದರೂ ಲೆಕ್ಕ ಹಾಕಿಕೊಳ್ಳಿ. ವೋಟು ಹಾಕಿಸ್ಕೊಂಡೋನು ಅತ್ಲಾಗೋದ.ಹಾಕಿದವ್ರು ನನಗಿಂತ ಸಣ್ಣವರು ಸತ್ತೋದ್ರು…!ರೊಕ್ಕ ಇಸಕಂಡು ತೆಪ್ ಮಾಡ್ಬಿಟ್ಟೆ,ಮನಷಾರಿಲ್ಲದಂಗಾತು ಊರಾಗ!” ಆತನಿಗೆ ದಮ್ಮು ಜಾಸ್ತಿಯಾಗಿ ಉಸಿರಾಟ ಕಷ್ಟವಾಗುತ್ತಿದೆ.
ಊರುಗಳಲ್ಲೀಗ ಸ್ಮಶಾನ ಮೌನ (Sanduru Stories)
ಇನ್ನು, ಗಣಿಗಾರಿಕೆಯ ಉತ್ತುಂಗದಲ್ಲಿ ಸಿರಿವಂತಿಕೆಯಿಂದ ತೇಲಾಡಿದ ಊರುಗಳಲ್ಲೀಗ ಸ್ಮಶಾನ ಮೌನ ಆವರಿಸಿದೆ.ಅಭಿವೃದ್ಧಿ ಎಂಬ ವ್ಯಾಖ್ಯಾನವನ್ನೆ ಬದಲಿಸುವಂಥ ಕಣ್ಕಟ್ಟಿನ ಪ್ರಸಂಗಗಳು ಜನರ ಮುಂದೆಯೇ ನಡೆದು ಹೋದವು.ನಡೆದದ್ದು ಕನಸೋ…ನನಸೋ…ಇನ್ನೂ ಕೂಡ ಅರ್ಥವಾಗಿಲ್ಲ. ಭಾರತಕ್ಕಾಗಲೀ, ಕರ್ನಾಟಕ್ಕಾಗಲೀ ಎಂತಹ ಅಭಿವೃದ್ಧಿಯಾಗುತ್ತಿದೆ ಎಂಬುದರ ಅರಿವು ಜನತೆಗೆ ಇಲ್ಲ. ಪಾಪದ ಜನ ಅವರಾದರೂ ಏನು ಮಾಡಿಯಾರು?
Reard also : ಸೊಂಡೂರಿನ ಕಗ್ಗತ್ತಲೆಯ ಕಥನಗಳು 38 : ಎದೆ ಕಲಕುವ ಆ ನೋಟಗಳು!
“A man can be said to be in a state of equilibrium when his one leg is in fire and the other is in a freezer”
ಒಬ್ಬ ಮನುಷ್ಯನ ಒಂದು ಕಾಲು ಬೆಂಕಿಯಲ್ಲೂ,ಇನ್ನೊಂದು ಕಾಲು ಮಂಜುಗಡ್ಡೆಯಲ್ಲೂ ಇದ್ದಾಗಲೂ ಆತ ಸಮತೋಲನದಲ್ಲಿ ದ್ದಾನೆ ಎನ್ನಲು ಸಾಧ್ಯ-ಎಂಬರ್ಥದ ಗಾದೆಯಂತೆ, ಒಂದು ದೇಶದ ಶೇ.೯೦ ರಷ್ಟು ಭಾಗದ ಜನತೆ ಕಡು ಬಡತನದಲ್ಲೂ,ಮಿಕ್ಕ ಶೇ೧೦ ರಷ್ಟು ಜನರು ಅಗಾಧ ಶ್ರೀಮಂತಿಕೆಯಲ್ಲೂ ಇದ್ದಾಗಲೂ,ಅಲ್ಲಿನ ಜನರ ಸರಾಸರಿ ಜೀವನಮಟ್ಟ ಸಾಕಷ್ಟು ಉತ್ತಮವಾಗಿದೆ ಎಂದು ಹೇಳಲು ಹೇಗೆ ತಾನೇ ಸಾಧ್ಯ.
“ನಮ್ಮ ಮಕ್ಕಳು ಪ್ರವಾಸಿ ಹೋಟೆಲ್ಲುಗಳಲ್ಲಿ ಕೂಲಿಯಾಳುಗಳಾಗಿ ದುಡಿಯುವುದು,ನಮ್ಮ ಮನೆಯ ಹೆಣ್ಮಕ್ಕಳು ವೇಶ್ಯೆಯರಾಗುವುದು ನಮಗೆ ಬೇಕಿಲ್ಲ.ಇಲ್ಲಿಗೆ ಪೊಲೀಸರನ್ನು ಕಳುಹಿಸಿದ್ದು ಕಾನೂನು ಸುವ್ಯವಸ್ಥೆ ಕಾಪಾಡಲೋ ಅಥವಾ ನಮ್ಮಲ್ಲಿ ಭಯ ಹುಟ್ಟಿಸಿ ನಾವೇನೂ ಮಾತಾಡದಂತೆ ಮಾಡಲೋ?ಏನೇ ಆದರೂ ನಮ್ಮ ನೆಲ-ಜಲ,ಅರಣ್ಯಗಳನ್ನು ಸುತರಾಂ ಬಿಟ್ಟುಕೊಡಲಾರೆವು.
-ಈ ಮಾತುಗಳನ್ನು ನರ್ಮದಾ ಅಣೆಕಟ್ಟಿಗೆ ಸಮೀಪದ ಐವತ್ತಕ್ಕೂ ಹೆಚ್ಚು ಹಳ್ಳಿಗಳನ್ನು ಒಳಗೊಂಡ ಪ್ರದೇಶದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರ 182 ಮೀಟರ್ ಎತ್ತರದ ಪ್ರತಿಮೆಯನ್ನು ಸ್ಥಾಪಿಸುವ ಮತ್ತು ಅದನ್ನೊಂದು ಪ್ರವಾಸಿ ತಾಣವಾಗಿಸುವ ಪ್ರಭುತ್ವದ ನಿರ್ಣಯದ ವಿರುದ್ಧ ಅಲ್ಲಿನ ರೈತರು ಹೇಳಿದ ಮಾತುಗಳಿವು.
ಇದು ಒಂದು ನಿದರ್ಶನವಷ್ಟೆ.ಪ್ರಭುತ್ವದ ಇಂತಹ ದುಷ್ಟ ಯೋಜನೆಗಳಿಗೆ ರೈತರು ಪ್ರತಿರೋಧವನ್ನು ಒಡ್ಡುತ್ತಲೇ ಬರುತ್ತಿದ್ದಾರೆ. ಪ್ರಕೃತಿದತ್ತ ಕೊಡುಗೆಗಳಾದ ಮಣ್ಣು,ನೀರು ಮತ್ತು ಲೋಹದಿರು … ಇವೆಲ್ಲವುಗಳು ಸಾಮುದಾಯಿಕ ಒಡೆತನಕ್ಕೆ ಸೇರಬೇಕಾದವು.ಆದರೆ,ದುರಂತವೆಂದರೆ ಇವುಗಳನ್ನು ಏಕಪಕ್ಷೀಯವಾಗಿ ಖಾಸಗಿ ಒಡೆತನದ ಪಾದಾರವಿಂದಗಳಿಗೆ ಪ್ರಭುತ್ವವೇ ಒಪ್ಪಿಸಿದೆ.
ಸಮಗ್ರ ಪರಿಸರ ಅಧ್ಯಯನ ನಡೆಯಲಿ (Sanduru Stories)
ಈ ಇಳಿವಯಸ್ಸಿನಲ್ಲೂ ಸಹ ಹೋರಾಟಗಾರ ಎಸ್.ಆರ್.ಹಿರೇಮಠರು ಸೊಂಡೂರು ಸುತ್ತಮುತ್ತಲಿನ ಏರಿಯಾದಲ್ಲಿ ವಾಸಿಸುತ್ತಿರುವ ಜನರಿಗೆ ಅಲ್ಪಸ್ವಲ್ಪವಾದರೂ ಅವರ ಆಯಸ್ಸನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ.ಅಷ್ಟೇ ಅಲ್ಲದೆ,ಈ ಭಾಗದಲ್ಲಿ ಉಂಟಾಗಿರಬಹುದಾದ ಪರಿಸರ ಹಾನಿಯ ಕುರಿತಂತೆ,ಸಾಮಾಜಿಕ ಹಾನಿಯ ಕುರಿತಂತೆ ಸಮಗ್ರ ಪರಿಸರ ಅಧ್ಯಯನ ಕೈಗೊಳ್ಳಲು ಕ್ರಮ ವಹಿಸಲು ತಮ್ಮ ಜನಸಂಗ್ರಾಮ ಪರಿಷತ್ ವತಿಯಿಂದ ಸರ್ಕಾರವನ್ನು ಆಗ್ರಹಿಸುತ್ತಲೇ ಇದ್ದಾರೆ.
ಮನಷಾರಿಲ್ಲದಂಗಾತು ಊರಾಗ ! ಎನ್ನುವ ಪಾಪದ ಜನರ ಪಿಸುಗುಟ್ಟುವಿಕೆ ಮಾತ್ರ ಬಹು ದೂರದವರೆಗೂ ಕೇಳಿಸುತ್ತಿದೆ.
ಬಿ.ಶ್ರೀನಿವಾಸ