Kannada News | Sanduru Stories | Dinamaana.com | 03-06-2024
ಮುದುಕರು ಈಗೀಗ ಮೌನ…(Sanduru Stories)
ಮುದುಕರು ಈಗೀಗ ಯಾರೊಂದಿಗೂ ಮಾತನಾಡದೆಯೂ ದಿನ ಕಳೆಯುತ್ತಾರೆ. ಏನನ್ನೂ ಉತ್ಪಾದನೆ ಮಾಡಲಾರದವರು, ಗಳಿಕೆ ಮಾಡಲಾಗದವರು, ಕೈಲಾಗದ ವ್ಯಕ್ತಿಗಳು ಎಂದು ಸಮಾಜವೇ ನಿರ್ಧರಿಸಿರುವಾಗ ಮಾತಾಡುವುದು ಆದರೂ ಹೇಗೆ? ಅರೆ, ಭೂಮಿಯನ್ನು ಕರೆಯುವಾಗ,ಭೂಮಿಯ ಗರ್ಭ ಸೀಳುವಾಗ ಸುಮ್ಮನಿದ್ದವರು ಈಗ ಮಾತಾಡಿಯಾದರೂ ಏನು ಪ್ರಯೋಜನ ಎಂಬ ಭಾವ.
ಅಂದವಾದ ಶವಪೆಟ್ಟಿಗೆ ತಯಾರಿಸಿ (Sanduru Stories)
ಅಂದವಾದ ಶವಪೆಟ್ಟಿಗೆ ತಯಾರಿಸಿ, ಎಲ್ಲಾ ಮರದ ಕೆಲಸ ಮುಗಿಸಿದ ನಂತರ ಒಂದು ಕ್ಷಣ ಸಂತೋಷದಿಂದ ಶವ ಪೆಟ್ಟಿಗೆಯನ್ನು ಸವರಿದ ಬಡಗಿ ಅದೇ ಶವಪೆಟ್ಟಿಗೆಯಲ್ಲಿ ಜೀವದ ಗೆಳೆಯನನ್ನು ಹೊತ್ತು ನಡೆಯುವಾಗ ಅನುಭವಿಸಿದ ಸ್ಥಿತಿ ಸೊಂಡೂರಿನ ಜನರದ್ದು.
ಹೆಂಡತಿ ಉಪವಾಸ ಬಿದ್ದು ಹೊಲ ಮಾರುವುದು ಬೇಡವೆಂದರೂ,ತಾಯಾಣೆ,ಮಕ್ಕಳಾಣೇ ಹೊಲ ಮಾರುವುದಿಲ್ಲವೆಂದು ಆಣೆಪ್ರಮಾಣ ಮಾಡಿಸಿಕೊಂಡರೂ ಕೇಳದೆ ಬೆಳೆವ ಹೊಲ ಮಾರಿ ತಪ್ಪು ಮಾಡಿದೆ ಎಂಬ ಭಾವದಲ್ಲಿರುವ ಒಂದು ಕಾಲದ ಎಷ್ಟೊಂದು ಹೊಲದೊಡೆಯರನ್ನು ಕಂಡೆವು!
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-33 ಊರು ನಮ್ಮದಲ್ಲವೋ…ನಾವೇ ಈ ಊರಿನವರಲ್ಲವೋ ಹೇಗೆ ಹೇಳುವುದು?
ಒಂದು ಕಾಲದ ಹೊಲದೊಡೆಯ
ಮಾಲೀಕನ ಮನೆಯ ಗುಲಾಬಿ ತೋಟಕೆ ನೀರು ಹನಿಸುತ
ಭಿಕ್ಷೆ ಬೇಡುತ
ತನ್ನವರ ಸಮಾಧಿ ಹುಡುಕುತ್ತಾ ನಿಂತ
ಎಷ್ಟೊಂದು ಹೊಲದೊಡೆಯರನ್ನು ಕಂಡೆ!
ಮಕ್ಕಳಅಕಾಲಿಕ ಮರಣ (Sanduru Stories)
ಗಣಿಗಾರಿಕೆಯ ವಿಪರೀತ ದಿಂದಾಗಿ ಕಳೆದುಕೊಂಡ ಬದುಕನ್ನು ಕೆಲ ದಿನಗಳ ಕಾಲ ಡಬ್ಬಿ ಅಂಗಡಿಯಲ್ಲಿ ಗುಟ್ಕಾ ಚೀಟಿ,ಎಲೆ ಅಡಿಕೆ, ನಿಂಬೆಹುಳಿ ಪೆಪ್ಪರಮಿಂಟು,ಬೀಡಿ ಸಿಗರೇಟು ಗಳಂತಹವುಗಳನ್ನು ಮಾರಿಯೇ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಕುಟುಂಬಗಳ ಮಕ್ಕಳು ಅಕಾಲಿಕ ಮರಣದಿಂದಾಗಿ ಎಲ್ಲಿಗೆ ಹೋದರೆಂದು ಹೇಳಲು ಊರಲ್ಲಿ ಉಳಿದ ಶಾಪಗ್ರಸ್ಥರಂತೆ ತೋರುವ ಜನ ತಯಾರಿಲ್ಲ.
ಸಾವಿಗೆ ಎಷ್ಟೂಂತ ದುಃಖಿಸುವುದು?
ಅತ್ತೂ ಅತ್ತೂ ಮನುಷ್ಯ ಏನಾಗಬೇಡ?
ಯಾರದ್ದೋ ಹೆಣ
ಹೊತ್ತು ನಡೆದಿದ್ದಾರೆ ಊರವರೆಲ್ಲ ಸೇರಿ
ಹತ್ತಿರ ಹೋಗಿ ನೋಡಿದೆ
ಊರಿನದ್ದೇ ಹೆಣ!
ಯಾರೂ ಕಂಗಳಲ್ಲೂ ನೀರಿಲ್ಲ
ಪರದೇಸಿಗಳಾದ ಭೀತಿಯಿದೆ.
ಬಿ.ಶ್ರೀನಿವಾಸ