Kannada News | Sanduru Stories | Dinamaana.com | 04-06-2024
ಎದೆಯಲ್ಲಿ ದಟ್ಟ ವಿಷಾದ (Sanduru Stories)
ಒಂದು ಕಾಲದಲ್ಲಿ ಲವಲವಿಕೆಯಿಂದ ಇದ್ದ ಸೊಂಡೂರೆಂಬೋ ಸೊಂಡೂರು ಇದೀಗ ಹೆಚ್ಚೂಕಡಿಮೆ ಮೌನಕ್ಕೆ ಜಾರಿದೆ. ಇಲ್ಲಿ ಯಾರನ್ನೇ ನೋಡಿದರೂ ಅವರು ಎದೆಯಲ್ಲಿ ದಟ್ಟ ವಿಷಾದ ಮಡುಗಟ್ಟಿದವರಂತೆ ಕಾಣಿಸುತ್ತಾರೆ.
ಆದರೂ ಕೆಲವು ಯುವಕರಿಗೆ ಸುಮ್ಮನೆ ಕೂಡಲಾಗುತ್ತಿಲ್ಲ. ಒಂದುಕಾಲದಲ್ಲಿ ಟಿಪ್ಫರು, ಜೀಪು, ಮೈನ್ಸು… ಎಂದು ಉಣ್ಣಾಕ ಟೈಮ್ ಇಲ್ಲದಂತೆ ದುಡಿದವರು. ಇಂದಿನ ಊರಿನ ಮೌನ ಅವರನ್ನು ಕೊಲ್ಲುತ್ತಿರುವಂತೆ ಭಾಸವಾಗುತ್ತದೇನೋ. ಊರ ಮುಂದಿನ ಕಟ್ಟೆಗೋ ಬಸ್ ಸ್ಟ್ಯಾಂಡಿನಲ್ಲೋ ಯಾರನ್ನೋ ಕಾಯುತ್ತಾ ಕುಳಿತಿರುವ ಹಾಗೆ ತೋರುತ್ತಾರೆ. ಯಾವ ಊರಿಂದಾದರೂ ಒಂದು ಬಸ್ಸು ಬಂದಿತೆನ್ನಿ. “ಬನ್ನಿ,ಬನ್ನಿ…ನಿಮಗೆ ಕೆಲವು ಇಂಪಾರ್ಟೆಂಟ್ ಆಟಿಕೆಗಳನ್ನು ತೋರಿಸುವೆ”ಎಂದು ಕರೆಯುವರು.
ಮೈನ್ಸಿನ ಮೇಸ್ತ್ರಿ (Sanduru Stories)
ಪಾರ್ಶ್ವವಾಯುವಿಗೆ ತುತ್ತಾದವನ ತೋರಿಸಿ,”ಈತ ಒಂದು ಕಾಲದ ಟಿಪ್ಪರಿನ ಡ್ರೈವರ್ರು”ಎಂದ. ಗೂರಲು ಕೆಮ್ಮುವ ಮುದುಕನ ತೋರಿಸಿ,”ಮೈನ್ಸಿನ ಮೇಸ್ತ್ರಿ”ಎಂದ. ಟಿಬಿ ಆಸ್ಪತ್ರೆ ಮುಂದಿನ ಕ್ಯೂ ತೋರಿಸಿದ. ಅಲ್ಲಿ ತೋರಿಸಿದ. ಮತ್ತೊಂದು ಕಡೆ ಮತ್ತೇನನ್ನೋ ತೋರಿಸಿದ.
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-32 ವಾಯುಪುತ್ರನ ಊರಿನಲ್ಲಿ ವಾಯುಮಾಲಿನ್ಯ
ಬಿಸಾಕಿದ ಆಟಿಕೆಗಳಿವು (Sanduru Stories)
ಹೀಗೆ ತೋರಿಸುತ್ತಲೇ ನಡೆದ. ಸಾಕಾಗಿ ಹೋಯಿತು. ‘ಹೌದು,ಇವರೆಲ್ಲ ಯಾಕೆ ಹೀಗೆ?”ತಡೆಯಲಾರದೆ ಕೇಳಿದರೆನ್ನಿ. “ಸಂಪತ್ತನ್ನು, ಸಂಸ್ಕೃತಿಯನ್ನೂ ಲೂಟಿ ಮಾಡಿದ ಬಳಿಕ ಬದಿಗೆ ಬಿಸಾಕಿದ ಆಟಿಕೆಗಳಿವು”.ವಿದ್ವಾಂಸನಂತೆ ನಿರುಮ್ಮಳವಾಗಿ ಉತ್ತರಿಸುವನು. ಅಷ್ಟೇ ಅಲ್ಲ….”ಜಾತ್ರೆ…ಮುಗ್ದುಹೋಗಿದೆ ಸಾರ್…” ಕ್ಷೀಣ ದನಿಯಲ್ಲಿ ಹೇಳಿದ.
ಬಿ.ಶ್ರೀನಿವಾಸ