Kannada News | Sanduru Stories | Dinamaana.com | 08-06-2024
ಮಸಣದಲ್ಲಿ ಅಳಬಾರದಂತೆ (Sanduru Stories)
ಸಂಡೂರು
ಕಣಿವೆಹಳ್ಳಿ
ಹೊಸಳ್ಳಿ
ಕಲ್ಲಳ್ಳಿ…
ಊರು ಕೇರಿಗಳು,ಗಣಿಧಣಿಗಳ ಸಮೇತ ಸೆರೆಗೆ ತಳ್ಳಲ್ಪಟ್ಟ ಆರೋಪಿಗಳ ಹಾಗೆ ಮ್ಲಾನತೆಗೆ ಶರಣಾಗಿಬಿಟ್ಟಿವೆ.ಮೊದಲಿನಂತೆ ಹಬ್ಬಗಳಿಲ್ಲ. ಜಾತ್ರೆಗಳಿಲ್ಲ. ದಿನಕ್ಕೊಬ್ಬರು ದಮ್ಮು ರೋಗವೋ , ಪಾರ್ಶ್ವರೋಗಕೋ ಬಲಿಯಾದರೂ ಕೇಳುವವರಿಲ್ಲ. ಮಸಣದಲ್ಲಿ ಅಳಬಾರದಂತೆ …ಮುದುಕ ನಗುತ್ತಲೇ ವಿಷಯಗಳನ್ನು ಹೇಳುತ್ತಿದ್ದ.
ಹೋದವಾರ ಸ್ವಾದ್ರಮಾವ ತೀರಿಕೊಂಡ, ಹೋಗಾಕಲಿಲ್ಲ, ಮೊನ್ನೆ ಮೊನ್ನೆ ಹರೇದ ಹುಡುಗ ಏನಾಗಿತ್ತೋ ಏನೋ…ಸತ್ತೋದ. ಏನು ಮಾಡೋಕಾಗುತ್ತೆ ಎಂಬಂತೆ ನಿರ್ಭಾವುಕನಾಗಿ ಒಂದೇ ಸಮನೆ ಮಾತಾಡುತ್ತಿದ್ದ.
‘ಗಲ್ಲಿಗೇರಿಸಿ ಕೊಲ್ತಾರಂತಲ್ಲ ಅದು ಭಾಳ ಬೇಸಿ (Sanduru Stories)
‘ಗಲ್ಲಿಗೇರಿಸಿ ಕೊಲ್ತಾರಂತಲ್ಲ ಅದು ಭಾಳ ಬೇಸಿ…ಇದು ಐತಲ್ಲ ಸಾಯಂಗಿಲ್ಲ ಬದುಕಂಗಿಲ್ಲ.. ಜೀವನ ಕಷ್ಟ ಐತರಿ ಸಾಹೇಬರೆ’ ಆಕಾಶ ನೋಡುತ್ತಲೇ ಮಾತಾಡುತ್ತಿದ್ದ. ರಾತ್ರಿಕಿ ಮಾತಾಡ್ಯನ..ಮುಂಜಾಲಿಗೆ ಅಲೆ ಇಲ್ಲ…ಸತ್ನೊಪೋ…ಅಂದರೂ ಅಳೋರು ಯಾರೂ ಇಲ್ಲ.
ಸಾವು…ಎದೆ ಕಲಕುತ್ತಿತ್ತು. ಈಗ ಇಲ್ಲ(Sanduru Stories)
ಅವಾಗ ಒಂದು ಕಾಲದಾಗ ಹೊಲದಾಗಿಂದನೇ ಎದಿ ಬಡಕೊಂಡು ಹೋಗಾರನ ನೋಡುತ್ತಿದ್ವಿ. ಅದೂ ಸಂಬಂಧಿಕರಿರಲಿ, ಅಲ್ಲದಿರಲಿ..ಮನುಷ್ಯನೊಬ್ಬನ ಸಾವು…ಎದೆ ಕಲಕುತ್ತಿತ್ತು. ಈಗ ಏನಿಲ್ಲ ಹಾ..ಹೌದಾ ಸರಿ! ಎನ್ನುವಂತೆ ಇದ್ದುಬಿಡುತಾರೆ ಎಂದ. ಬಂಡ್ರಿ ಹತ್ತಿರ ಕಾಟ್ನಿಕಂಬ ಎಂಬ ಪುಟ್ಟ ಗ್ರಾಮವಿದೆ. ಅಲ್ಲಿಂದ ಹೆಣ್ಣುಗಳನ್ನು ಸೊಂಡೂರಿನ ವರನಿಗೆ ಕೊಟ್ಟಾನೆಂದ್ರೆ ಬಹು ಮರ್ಯಾದೆ ಇರುತ್ತಿತ್ತು.
ಈಗ್ಗೆ ಇಪ್ಪತ್ತು ವರುಷಗಳ ಹಿಂದೆ ಗಣಿಧಣಿಗಳ ಹಾರಾಟವೂ ಈಗಿನಂತಿರಲಿಲ್ಲ. “ಯೇ ಸಂಣಪೋ..ಮಗಳ್ನ ಎಲ್ಲೀಗ್ ಕೊಟ್ಟ್ಯಪೋ…?” ತೂರಿಬಂದ ಪ್ರಶ್ನೆಗೆ “ಸೊಂಡ್ರಿಗೆ ಕೊಟ್ಟಿನವ್ವಾ.. ಅಳಿಯ ಮೇನ್ಸಿಗೋಗ್ತಾನೆ ಬೇಸದಾರ” ಅವನದೇನು ಚಿಂತಿಲ್ಲ ಎಂಬಂತೆ ತೃಪ್ತಿಯ ನಗೆ ಹೊತ್ತಿದ್ದವನಿಗೀಗ ಎಪ್ಪತ್ತರ ವಯಸ್ಸು. ಕಾಲ ಬದಲಾಗಿದೆ. ಲಾರಿ ,ಟಿಪ್ಪರುಗಳ ಚಕ್ರಗಳು ಸ್ತಬ್ಧವಾಗಿವೆ.
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-21 ಹರಿಶಂಕರ !
ಟೀಬಿಗೆ ಸತ್ತ ಗಂಡನ ನೆನೆದು ಅಳುತ್ತಿದ್ದಾಳೆ (Sanduru Stories)
ಅದೇ ಹೊಸಳ್ಳಿ, ಕಣವೇಹಳ್ಳಿಗಳ ಸತ್ತೋದ ಗುಡ್ಡಗಳ ನಡುವಿನಿಂದ ರಣರಣ ಬಿಸಲಿನಲ್ಲಿ ಆತ ನಡೆದುಕೊಂಡು ಬರುತ್ತಿದ್ದಾನೆ. ಆತನ ಹಿಂದೆ ಮಗಳಿದ್ದಾಳೆ. ಆಕೆಯ ಕೈ ಹಿಡಿದು ನಡೆವ ಪುಟ್ಟ ಹುಡುಗಿ ಟೀಬಿಗೆ ಸತ್ತ ಗಂಡನ ನೆನೆದು ಅಳುತ್ತಿದ್ದಾಳೆ.
ಆಕೆಯ ಪುಟ್ಟ ಮಗಳು ಅವ್ವನ ಹೊರಹಾಕಿದ ಅಪ್ಪನ ಮನೆಯವರ ನೆನೆದು ಅಳುತ್ತಿದ್ದಾಳೆ. ಗತಿಯಿಲ್ಲದೆ ತವರು ಮನೆಗೆ ಬಂದೆನೆಂದು ತಿಳಿದು ನೋಡುವ ಊರು ಜನಗಳ ನೆನೆದು ಅವಳ ಕಪಾಳಗಳಿಂದಲೂ ನೀರು ಸುರಿಯುತ್ತಿದೆ. ಊರಿಗೆ ಊರೇ ಟೀಬಿ ಬಡಿದಿರುವಾಗ ,ಬದುಕಲು ಅಸಾಧ್ಯವೆಂದು ತಿಳಿದೂ ಮತ್ತೇಕೆ ಅಳುವುದೆಂದು ಆತ ಅಳುತ್ತಿಲ್ಲ.
ಬಿ.ಶ್ರೀನಿವಾಸ