Kannada News | Sanduru Stories | Dinamaana.com | 17-06-2024
ಬರ ರೈತರ ಪಾಲಿನ ಕ್ರೂರಿ (Sanduru Stories)
ಬಳ್ಳಾರಿ ಜಿಲ್ಲೆಯ ಬಿರುಬಿಸಿಲಿಗೆ ರೈತರ ಬದುಕು ಸದಾ ಅನಿಶ್ಚಿತತೆಯಲಿ ಬೇಯುತ್ತಿರುತ್ತದೆ.ಇಲ್ಲಿ ಎಲ್ಲ ಕಾಲಗಳೂ ಒಂದೇ ರೀತಿಯಾಗಿ ಕಂಡರೆ ಆಶ್ಚರ್ಯವೇನಿಲ್ಲ. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ ಎಂಬ ಬಯಲು ಸೀಮೆಯ ಊರಿನಲ್ಲಿ ಮಳೆ ಬಂದರೆ ಬಂದೀತು ಇಲ್ಲವಾದರೆ ಇಲ್ಲ.ಇಂತಹ ಊರುಗಳ ಪಾಲಿಗೆ ಬರ ಬಂದುಬಿಟ್ಟರಂತೂ ರೈತರ ಪಾಲಿನ ಅದರಷ್ಟು ಕ್ರೂರಿ ಮತ್ತು ನಿರ್ದಯಿ ಬೇರೆ ಯಾವುದೂ ಇರುವುದಕ್ಕೆ ಸಾಧ್ಯವಿಲ್ಲ. ಇಂದಿಗೂ ದಿನವೊಂದರ ಕೂಲಿ ಐವತ್ತು ಅರವತ್ತು ರೂಪಾಯಿಗಳ ಆಸುಪಾಸಿನಲ್ಲಿದೆ. ಅನ್ನಭಾಗ್ಯದ ಅಕ್ಕಿಯನ್ನು ಅಂಗಡಿಗೆ ಮಾರಿ ಬದುಕು ಕಟ್ಟಿಕೊಳ್ಳಬೇಕಿದೆ.
ಭಾರತದ ರಾಜಕಾರಣಿ ಅರ್ಥವಾಗಬೇಕಾದರೆ, ಅವನು ಸಾಮಾನ್ಯರಲ್ಲಿ ಸಾಮಾನ್ಯನಂತೆ ಬದುಕಿ ತೋರಿಸಬೇಕು.ಕನಿಷ್ಟ ಆದಾಯದ ಮಿತಿಯೊಳಗೆ ಬದುಕಿದರೆ ಬಡವರ ಬವಣೆಗಳು ಅರ್ಥವಾದೀತು. ಆದರೆ. ಗಣಿಗಾರಿಕೆಯ ಊರಿಗೆ ಬಂದ ಗಣಿಧಣಿಗಳೆಂಬ ಮಹಾಮಾರಿಗಳು ಎಲ್ಲಿಂದಲೋ ಇಳಿದು ಬಂದವರಲ್ಲ.ಅವರೂ ಇಲ್ಲಿಯೇ ಜನರ ನಡುವೆಯೇ ಇದ್ದವರು.
ಪ್ರಜಾಪ್ರಭುತ್ವ ಒದ್ದಾಡುತಿದೆ (Sanduru Stories)
ಒಂದು ಕಾಲದಲ್ಲಿ ಮಾಮೂಲಿ ಸೈಕಲ್ಲಿನಲ್ಲಿ ಇನ್ಷೂರೆನ್ಸ್ ಮಾಡಿಸಿರೆಂದು ಜನರನ್ನು ದುಂಬಾಲು ಬಿದ್ದವರೆ. ಮತ್ತೊಬ್ಬನಂತೂ ಖಾಸಗಿ ಬಸ್ಸೊಂದರ ಏಜಂಟ್ ಆಗಿದ್ದುದನ್ನು ಮರೆತಿಲ್ಲ. ಇನ್ನು ಕೆಲವರು ಪುಡಿ ರೌಡಿಗಳು,ಬ್ಲ್ಯಾಕ್ ಮೇಲರ್ಗಳೆ . ಇಂಥವರ ಕೈಗೆ ಪ್ರಜಾಪ್ರಭುತ್ವ ಸಿಕ್ಕು ಒದ್ದಾಡುತಿದೆ. ದಿನಕ್ಕೊಂದು ರೀತಿಯ ಹೇರ್ಸ್ಟೈಲು, ಬಣ್ಣಬಣ್ಣದ ಕನ್ನಡಕಗಳ, ಉಡುಪು ಧರಿಸುವ ತರಹೇವಾರಿ ಫ್ಲೆಕ್ಸುಗಳನ್ನೆ ನೋಡುತ್ತ ಜನರು ಕಾಲವನ್ನು ಮರೆತು ನಿಂತರು.
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-17 ಅಂತರಂಗ ಕಳೆದುಕೊಂಡ ನತದೃಷ್ಟ ಊರಿನಲ್ಲಿ…
ಗಾಂಧಿವಾದಿ ಚನ್ನಬಸವನಗೌಡರು (Sanduru Stories)
ಈ ಹಿಂದೆ ಇಂಥದೊಂದು ಊರಿಗೆ ಪಕ್ಕದಲ್ಲಿಯೇ ಇರುವ ಹೊಸಪೇಟೆ ಡ್ಯಾಮಿನಿಂದ ಹಗರಿಬೊಮ್ಮನಹಳ್ಳಿಗೆ ನೀರು ತರಲು ಭಗೀರಥ ಶ್ರಮ ಪಟ್ಟವರೆಂದರೆ ಬಾಚಿಗೊಂಡನಹಳ್ಳಿಯ ಚನ್ನಬಸವನಗೌಡರು. ಅಪ್ಪಟ ಗಾಂಧಿವಾದಿಯಾಗಿದ್ದ ಅವರು ಕಣ್ಮುಚ್ಚಿದ ದಿನ ಸಂಸ್ಕಾರ ಮಾಡಲೂ ಅವರ ಅಕೌಂಟಿನಲ್ಲಿ ಹಣವಿರಲಿಲ್ಲ. ಜನರಿಂದ ಚಂದಾ ಎತ್ತಿ ಸಂಸ್ಕಾರ ಮಾಡಬೇಕಾಯಿತು. ಕೊನೇ ಕಾಲದಲ್ಲಿ ಸೋತುಹೋದ ಗೌಡರ ಆ ಕಂಗಳಲ್ಲಿ ತನ್ನ ಕೈಲಾಗದ್ದಕ್ಕೆ ಊರ ಜನರಲ್ಲಿ ಕ್ಷಮೆಕೇಳುವಂತಿದ್ದ ಅವರ ಕಣ್ಣುಗಳು ನೋಡಿದ ನೋಟವಿನ್ನೂ ಹಾಗೆಯೆ ಇದೆ.
ಪ್ರಾದೇಶಿಕ ಪಕ್ಸಗಳಿಗೆ ಅಭ್ಯರ್ಥಿಗಳ ಕೊರತೆ (Sanduru Stories)
ಇಂತಹದೊಂದು ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿಟ್ಟಾಗ, ಕ್ಯಾಂಡಿಡೇಟುಗಳ ಕೊರತೆ ಎದುರಾಯಿತು. ರಾಷ್ಟ್ರೀಯ ಪಕ್ಷಗಳೇನೇನೋ ಮಾಡಿ ಅಭ್ಯರ್ಥಿಗಳನ್ನು ಹಾಕಿದರೆ, ಪ್ರಾದೇಶಿಕ ಪಕ್ಸಗಳಿಗೆ ಅಭ್ಯರ್ಥಿಗಳ ಕೊರತೆ ಕಾಡಿತು.
ಹೊಸಪೇಟೆಯಿಂದ ಸಂಡೂರಿನ ರಸ್ತೆಯಿಕ್ಕೆಲಗಳಲ್ಲಿ ಎಲ್ಲಿ ನೋಡಿದರಲ್ಲಿ ನೀಲಿಬೆಟ್ಟಗಳ ಸಾಲು. ಅದೋ ಅಲ್ಲಿ ಬೆಟ್ಟಗಳ ಸಾಲು ಕೆಳಗೆ ಹೊಲಗಳಿದ್ದವು. ಬೆಳೆದರೆ ಬೆಳೆಯವು, ಇಲ್ಲವಾದರೆ ಇಲ್ಲ. ಇಂತದ್ದೇ ಒಂದು ಹೊಲ ಬೆಟ್ಟದ ಬುಡಕ್ಕೆ ಇತ್ತು. ಬೆಟ್ಟದ ಮೇಲೆ ಗಣಿಗಾರಿಕೆ ನಡೆಯುತ್ತಿತ್ತು.ಅದೂ ಕೂಡ ಶಾಸಕರೊಬ್ಬರ ಸಂಬಂಧಿಯ ಪ್ರಾಪರ್ಟಿಯಂತೆ.
ಬೆಟ್ಟದ ಮೇಲಿನ ಗಣಿಗಾರಿಕೆಯಿಂದಾಗಿ ತನ್ನ ಹೊಲದ ತುಂಬಾ ಅದಿರಿನ ಧೂಳು ಮಣ್ಣು ಜಾರಿ ಬಿದ್ದು ತನ್ನ ಹೊಲ ಹಾಳಾಗುತ್ತಿದೆಯೆಂದು ಕಂಪೆನಿಗಳ ವಿರುದ್ಧ ಆಗಾಗ ಗಲಾಟೆಗಳಾಗುತ್ತಿದ್ಧವು.ತನ್ನ ಹೊಲದಲ್ಲಿ ಏನನ್ನೂ ಬೆಳೆಯಲು ಸಾಧ್ಯವಾಗುತ್ತಿಲ್ಲವೆಂದು ಆ ಬಡ ಕಾನ್ಸ್ಟೇಬಲ್ ಪ್ರತಿದಿನ ಅಲವತ್ತುಕೊಳ್ಳುತ್ತಿದ್ದ.
ಯಾವಾಗ ಮಣ್ಣಿಗೂ ಬೆಲೆ ಬಂತೋ ಸ್ವತಃ ಆ ಪೊಲೀಸ್ ಕಾನ್ಸಟೇಬಲ್ ನೇ ಮುಂದೆ ನಿಂತು ಟನ್ನುಗಟ್ಟಲೆತುಂಬಿಸಿದ. ನೋಡುನೋಡುತ್ತಲೇ ಕೋಟಿ ಕೋಟಿ ರೊಕ್ಕ ಮನಿಗೆ ಬಂದು ಬೀಳತೊಡಗಿತು. ಸಾಮಾನ್ಯ ನೌಕರಿಯಲ್ಲಿದ್ದಾತ ಇದೀಗ ಮೈನಿಂಗ್ ಧಣಿಯಾಗಿಬಿಡುತ್ತಾನೆಂಬುದೆಲ್ಲ ಇಲ್ದಿ ಕಾಮನ್ ಆಗಿಹೋಗಿತ್ತು.
ಶಾಸಕನಾಗುವ ಆಸೆ (Sanduru Stories)
ಧಣಿಗಳು ಟಿಫನ್ನಿಗೆ ಏರೋಪ್ಲೇನಿನಲ್ಲಿ ಬೆಂಗಳೂರಿನ ಎಂ.ಟಿ.ಆರ್.ಹೋಟೆಲಿಗೆ ಹೋಗಿಬಂದರಂತೆ.ಮಧ್ಯಾಹ್ನ ಹೈದರಾಬಾದಿನಲ್ಲಿ ಊಟವಂತೆ…ರಾತ್ರಿ ಬೊಂಬಾಯಿಗಂತೆ ಇಂಥದ್ದೇ ಕಥೆಗಳು ಜನರ ಬಾಯಲ್ಲಿ ಸದಾ ಇರುತ್ತಿದ್ದವು. ಸಾಮಾನ್ಯರೆಲ್ಲ ಹೀಗೆ ಅಸಾಮಾನ್ಯರಂತಾಗಿ ಎಮ್ಮೆಲ್ಲೆ, ಮಿನಿಷ್ಟ್ರಗಳಾಗಿರುವಾಗ ತಾನೇಕೆ ಶಾಸಕನಾಗಬಾರದು ಎಂಬ ಅಮಿತ ಆಸೆಯೊಂದು ಆ ಕಾನ್ಸ್ಟೇಬಲ್ಗೂ ಹುಟ್ಟೀಬಿಟ್ಟಿತು.
ಟಿಕೆಟ್ ಕೊಡಿಸಿದರೆ ಹತ್ತು ಕೋಟಿ ಅಫರ್ (Sanduru Stories)
ರಾಷ್ಟ್ರೀಯ ಪಕ್ಷವೊಂದರ ಟಿಕೇಟನ್ನು ಯಾರೇ ಕೊಡಿಸಲಿ ಅಂತವರಿಗೆ ಹತ್ತುಕೋಟಿ ನಗದು ನೀಡಲಾಗುವುದೆಃದು ಘೋಷಿಸಲಾಯಿತು!. ಬರೀ ಟಿಕೇಟು ಕೊಡಿಸಿದವರಿಗೆ ಹತ್ತು ಕೋಟಿ! ಚುನಾವಣಾ ಖರ್ಚನ್ನೂ ಪಾರ್ಟಿಫಂಡೂ ಏನೂ ಬೇಡವೆಂದು ತಾನೇ ಸ್ವಂತ ಖರ್ಚು ಮಾಡಿ ಗೆದ್ದು ಬರುವೆನೆಂದು ಹೇಳಿದಾಗ ಆತನಿನ್ನೂ ಪೊಲೀಸ್ ಇಲಾಖೆಯ ಸಾಮಾನ್ಯ ಪೇದೆಯಾಗಿದ್ದ. ಬೇರೆ ಪಕ್ಷಗಳ ಹುನ್ನಾರದಿಂದಾಗಿ ಆತನಿಗೆ ಇಲಾಖೆಯಿಂದ ನೋಟಿಸ್ ನೀಡಿ ಸೇವೆಯಿಂದ ಅಮಾನತು ಮಾಡಿಸಲಾಯಿತು.
ಬಿ.ಶ್ರೀನಿವಾಸ