Kannada News | Sanduru Stories | Dinamaana.com | 18-06-2024
ದೊಡ್ಡದಾದ ಯಾರ್ಡ್ ಗಳು (Sanduru Stories)
ಅದಿರನ್ನು ಗುಡ್ಡೆಹಾಕಲು ಗಣಿ ಕಂಪೆನಿಗಳು ಅಲ್ಲಲ್ಲಿ ಕೆಲ ಹಳ್ಳಿಗಳನ್ನು ಗುರುತು ಮಾಡಿಕೊಂಡಿದ್ದವು.ಅಂತಹ ಹಳ್ಳಿಗಳಲ್ಲಿ ದೊಡ್ಡದಾದ ಯಾರ್ಡ್ ಗಳನ್ನು ನಿರ್ಮಿಸಲಾಗುತ್ತಿತ್ತು.
ಹಗಲು -ರಾತ್ರಿ ಎನ್ನುವುದೇ ಗೊಂದಲ (Sanduru Stories)
ಟಿಪ್ಪರುಗಳು ಹಗಲು ರಾತ್ರಿಗಳೆನ್ನದೆ ಅದಿರನ್ನು ಸುರಿದ ಪರಿಣಾಮ ಊರುಗಳ ಚಿತ್ರಣವೇ ಬದಲಿಯಾಗಿ ಹೋಯಿತು. ಹಳ್ಳಿಗಳಲ್ಲಿ ಜನರು ಹಗಲು ಯಾವುದೋ ರಾತ್ರಿ ಯಾವುದೋ ಎಂಬ ಗೊಂದಲಕ್ಕೆ ಬಿದ್ದರು.
ರಾತ್ರಿ ಏಳು ಏಳೂವರೆಗೆಲ್ಲ ಉಂಡು ಅಂಗಳಗಳಲ್ಲಿ ಮಲಗಿ ಮುಂಜಾನೆ ನಸುಕಿಗೆ ಹೊಲದ ಕೆಲಸಕ್ಕೆ ಹೋಗುತ್ತಿದ್ದವರಿಗೆ ಹೊಸ ರೀತಿಯ ಜೀವನಶೈಲಿ ಉಸಿರುಕಟ್ಟತೊಡಗಿತು. ಮುದುಕರಂತೂ ಪಿಳಿಪಿಳಿ ಕಣ್ಣು ಬಿಡುವ ಗೊಂಬೆಗಳಾಗಬೇಕಾಯಿತು. ಮನೆ ಮಕ್ಕಳೇ ಮಾತು ಕೇಳದಾದಾಗ ಯಾರಲ್ಲಿ ಹೇಳಿಕೊಳ್ಳುವುದು?
ಸುರಿದ ಅದಿರಿನ ಶಬ್ದಕ್ಕೆ , ಎದ್ದ ಧೂಳಿಗೆ ನೆಮ್ಮದಿ ಉಳಿಯುವುದಾದರೂ ಹೇಗೆ ? ಮೊದಮೊದಲಿಗೆ ರಮ್ಯವಾಗಿ ಕಂಡ ಈ ಬದುಕು ಬರಬರುತ್ತಾ ಹಿಂಸಿಸಲಾರಂಭಿಸಿದಾಗ ಅದೆಷ್ಟೋ ಜನರು ಮಾನಸಿಕ ರೋಗಿಗಳಾಗಿ ಹೋದರು.
ಸಾಯುವ ಕೊನೆ ನಿಮಿಷದಲ್ಲೂ ಕೆಂಪು ಧೂಳು (Sanduru Stories)
ಮುದುಕರು ಸಾಯುವ ಕೊನೆಯ ಎರಡು ನಿಮಿಷಗಳ ದೀರ್ಘ ಉಸಿರುಗಳಲ್ಲೂ ಕೆಂಪು ಧೂಳು ತೂರಿಕೊಂಡಿತು. ತಮ್ಮ ಪಾಡಿಗೆ ತಾನು ಹೊಲ ಮನಿ, ಎತ್ತು ಎಮ್ಮೆಆಕಳುಗಳ ಸಾಕಿಕೊಂಡು ಹೇಗೋ ಬದುಕುತ್ತಿದ್ದ ಹಳ್ಳಿಯ ಕುಟುಂಬಗಳು ಇವೆಲ್ಲವುಗಳಿಂದ ಹೊರಬರುವಂತೆ ಮಾಡಲಾಯಿತು.
Read also : Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 45 : ಮಕ್ಕಳೂ ಅಂತರ್ಮುಖಿಗಳಾಗುವುದು ಎಂದರೆ…
ಅಕ್ರಮ ಸಂಪತ್ತಿನ “ಸಂಗ್ರಹ” (Sanduru Stories)
ಹಳ್ಳಿಗಳ ಗೋಮಾಳಗಳು, ಕೆರೆಕಟ್ಟೆಗಳು, ಖಾಲಿ ಪ್ರದೇಶಗಳೂ ಸಾಲದಾಗಿ ಊರ ಜನರ ಹೊಲಗದ್ದೆಗಳಲ್ಲೂ ಗಣಿಸಂಪತ್ತು ಶೇಖರಣೆಗೊಳ್ಳುತ್ತಾ ನಡೆಯಿತು. ಸ್ವಾಮಿಮಲೈ, ರಾಮನಮಲೈ , ಕಲ್ಲಳ್ಳಿ, ಹೊಸಳ್ಳಿ ,ಕಣಿವೆಹಳ್ಳಿ, ಪಾಪಿನಾಯಕನಹಳ್ಳಿಗಳಂತಹ ಪಾಪದ ಊರುಗಳೆಲ್ಲ ಗಣಿಧಣಿಗಳೆಂಬ ಫಟಿಂಗರ ಅಕ್ರಮ ಸಂಪತ್ತಿನ “ಸಂಗ್ರಹ”ದ ಊರುಗಳಾದವು.
ಈ ಹಳ್ಳಿಗಳಲ್ಲಿದ್ಧ ದನ ಕರು ,ಎಮ್ಮೆ ಎತ್ತುಗಳನ್ನು ಕಣ್ಣಿಬಿಚ್ಚಿ ಓಡಿಸಲಾಯಿತು.ಸದಾ ಹಸಿರಾಗಿರುತ್ತಿದ್ದ ಹೊಲಗಳೆಲ್ಲ ಕೆಂಪು ಕೆಂಪಾದವು.ರೈತರ ಮಕ್ಕಳ ಕೈಗೆ ಅನಾಯಾಸವಾಗಿ ಬಂದ ಹಣಕ್ಕೆ ಹೀರೋ ಹೊಂಡಾ ಬೈಕು, ಹೊಸಮನೆ ಎಲ್ಲ ಮಾಡಿಕೊಳ್ಳಲಾಯ್ತು.ಮನೆ ಮನೆಯ ಅಂಗಳಗಳು, ಹಿತ್ತಿಲುಗಳೂ ಸಾಲದಾಗಿ, ಮನುಷ್ಯರಿಗೇ ಜಾಗವಿಲ್ಲವಾಯಿತು.
ಬಿ.ಶ್ರೀನಿವಾಸ