Kannada News | Sanduru Stories | Dinamaana.com | 20-06-2024
ಮೈನಿಂಗ್ ಎಂಬ ಅನ್ಯಾಯದ ಪರಮಾವಧಿ (Sanduru Stories)
ಗಣಿಬಾಧಿತ ಜನರೆಂಬ ನತದೃಷ್ಟರ ಅಗೋಚರ ನೋವು ಮತ್ತು ಅವರ ಬದುಕಿನಲ್ಲಿ ಮೈನಿಂಗ್ ಎಂಬ ಅನ್ಯಾಯದ ಪರಮಾವಧಿಗೆ ಆಹುತಿಯಾದವರು ಯಾರನ್ನು ದೂರಬೇಕು? ಇಂತಹ ಸಂಕಟಗಳಲ್ಲು ಕಣ್ಣಗಲಿಸಿ ಉತ್ಸಾಹದಿಂದ ಕತೆಗಳ ಗಣಿಯನ್ನೆ ಹೇಳಲು ತಯಾರಾಗುತ್ತಾರೆ.
ನಾನೂ ಕೆಲಸ ಮಾಡಿದೆ’ಹೆಮ್ಮೆ (Sanduru Stories)
ಆತನೊಬ್ಬ ಮನೆ ಕಟ್ಟುವ ಸಾಮಾನ್ಯ ಮೇಸ್ತ್ರಿ.ಇದ್ದುದರಲ್ಲಿಯೇ ಸ್ವಲ್ಪ ಸ್ಥಿತಿವಂತನಂತೆ ಕಾಣುತ್ತಿದ್ದ.ಧಣಿಗಳ ಮನೆ ಕಟ್ಟುವ ತಂಡದಲ್ಲಿದ್ದನಂತೆ. ‘ಅದೋ ನೋಡಿ ಸಾರ್,ಆ ಬಂಗಲೆ ಐತಲ್ಲ,ಇದನ್ನು ಕಟ್ಟುವಾಗ ನಾನೂ ಕೆಲಸ ಮಾಡಿದೆ’ಹೆಮ್ಮೆಯಿಂದ ಹೇಳುತ್ತಿದ್ದ.
‘ಅದು ಕಾರಪುಡಿ ಅಣ್ಣಂದು (Sanduru Stories)
‘ಅದು ಕಾರಪುಡಿ ಅಣ್ಣಂದು ಸರ್’ಎಂದ ‘ಕಾರಪುಡಿ…?’ ‘ಹೌದು, ಕಾರಪುಡಿ ಅಣ್ಣ! ಕಾರಪುಡಿ ಅಡ್ಡಹೆಸರು,ಮೊದಲು ಕಾರಪುಡಿ ಮಾರುತ್ತಿದ್ದರಂತೆ. ಹಂಗಾಗಿ ಈ ಹೆಸ್ರು ಬಂದೈತೆ’
ಆತನ ಮನೆಯನ್ನು ಕಟ್ಟುವಾಗಲೂ ತಾನಿದ್ದುದಾಗಿಯೂ,ಅಂತವರ ಮನೆ ಕಟ್ಟುವಾಗ ಭಲೇ ನಂಬಿಕಸ್ಥರು ಬೇಕು ಮತ್ತು ಹಗಲು ಎಂದರೆ ಹಗಲು,ರಾತ್ರಿ ಎಂದರೆ ರಾತ್ರಿ ಕೆಲಸ ಮಾಡಬೇಕಾಗಿತ್ತು.ಗುಟ್ಟು ಕಾಪಾಡಿಕೊಳ್ಳುವ ಮಂದಿ ಬೇಕಿತ್ತು.ಹಂಗಾಗಿ ತಾನು ಕೆಲಸ ಮಾಡಿರುವುದಾಗಿ ಹೆಮ್ಮೆಯಿಂದ ಹೇಳಿದ. ‘ಆತನೇನು ಗಣಿಧಣೀನಾ..?’ ಕೇಳಿದೆ.
‘ಹೇ ಅಲ್ಲ ಸಾರ್, ಧಣಿಗಳ ಹತ್ರ ಸಂಬಳಕ್ಕಿದ್ದ ಕಾರಪುಡಿ’ ಎಂದ. ‘ಏನು ಕೆಲಸ…..?’ ಕೆಲಸಾ,ಇಷ್ಟ ನೋಡ್ರಿ…ರಾತ್ರಿ ಸಂಡೂರು , ತೋರಣಗಲ್ಲು, ಪಾಪಿನಾಯಕನಹಳ್ಳಿ, ವ್ಯಾಸನಕೆರೆ, ಅಂಕಮ್ಮನಹಾಳು ಮುಂತಾದ ಸ್ಟಾಕ್ ಯಾರ್ಡಗಳಿಂದ ಹೊರಟ ಅದಿರು ಹೊತ್ತ ಟಿಪ್ಪರುಗಳು ಕಾರವಾರದ ಸಮುದ್ರದ ಬಂದರಿನವರೆಗೂ ದಾರಿಯಲ್ಲಿ ಸಿಗುವ ಎಲ್ಲ ಸ್ಟೇಷನ್ಗಳಿಗೂ ಮಾಮೂಲು ಹಂಚುವ ಕೆಲಸ ಕಾರಪುಡಿ ಅಣ್ಣಂದು’. ಬರೀ ಮಾಮೂಲಿ ಹಂಚುವ ಸಾಮಾನ್ಯ ವ್ಯಕ್ತಿ! ‘ಎಷ್ಟು ಕೋಟಿಗಳ ಒಡೆಯ..?’ಕೇಳಿದೆ.
‘ಹೇ…ಹೆಂಗೇಳ್ತೀರಿ ಸರ್, ನಾವು ರಾತ್ರಿ ಅವರ ಮನೆಯೊಳಗೆ ನೀರಿನ ಟ್ಯಾಂಕಿಗೆಂದು ಸಂಪು ಗುಂಡಿ ತೆಗೆದಿದ್ದೆವು. ಆಮ್ಯಾಲೆ ಅದರೊಳಗೆ ಕಬ್ಬಿಣದ ಟ್ರಜರಿ ಕುಂದ್ರಿಸಿದರು. ಆ ಮ್ಯಾಲೆ ಎರಡು ದಿನ ಬಿಟ್ಟು ಬನ್ನಿ ಎಂದರು.
Read also : Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 44 : ಜಾತ್ರೆ ಮುಗೀತಲ್ಲ ಸಾರ್…!
ನಾವು ಎರಡು ದಿನಗಳ ನಂತರ ಹೋದಾಗ ಅದರ ಮೇಲೆ ಟೈಲ್ಸ್ ಕೂಡಿಸಿ ಎಂದರು. ಕೂಡಿಸಿದೆವು.ಈ ಕೆಲಸಗಳೆಲ್ಲ ರಾತ್ರಿಯೇ ನಡೆದವು. ನಮಗೆ ಕೈ ತುಂಬ ರೊಕ್ಕ ಕೊಟ್ಟರು……ಹೇಳಿಕೆಂತಾ ಹೋದರೆ ಬೆಳಕು ಹರಿಯುವತಂಕನೂ ಮುಗಿಯಂಗಿಲ್ಲ ಬಿಡ್ರಿ ಸರ್,’ ಎಂದು ಹೇಳಿ ಕತ್ತಲಲ್ಲಿ ಇಳಿದು ಹೋದ.
ಬಿ.ಶ್ರೀನಿವಾಸ