Kannada News | Sanduru Stories | Dinamaana.com | 22-06-2024
ದುಷ್ಟತನ ಗಳಿಗೆ ಬಲಿಯಾದ ಸಮಾಜ (Sanduru Stories)
ನನ್ನ ಈ ಪಯಣವನ್ನು ಕೇವಲ ಕಾಲ್ನಡಿಗೆಯಲ್ಲಿ ಮಾಡಲಿಲ್ಲ.ಇದು ನನ್ನ ಮನಸ್ಸಿನ ಪಯಣವಾಗಿತ್ತು. ಮನುಷ್ಯನ ಆಳದ ಲೋಭಿತನ, ದುಷ್ಟತನ ಗಳಿಗೆ ಬಲಿಯಾಗಿ, ಸಾಕ್ಷಿಯೆಂಬಂತೆ ನಿಂತ ಸಮಾಜವನ್ನು ಕಂಡೆ.
ನಾನು ಈ ಬರಹಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಬರೆದಿಲ್ಲ. ನಾನು ವ್ಯವಸ್ಥಿತವಾಗಿ ಬರೆವ ಶಿಸ್ತಿನ ಬರಹಗಾರ ಕೂಡ ಅಲ್ಲ.ಆದರೆ ಬರೆಯುವಾಗ ಪ್ರತಿ ಅಕ್ಷರಗಳಲ್ಲೂ ಲೋಹದ ಅದಿರಿನ ಬೆಟ್ಟ ಗುಡ್ಡಗಳ ನಿಟ್ಟುಸಿರನ್ನೂ,ಅವುಗಳ ದುಃಖ ದ ಧ್ಯಾನದ ಬಿಕ್ಕುಗಳನ್ನೂ ಕೇಳಿಸಿಕೊಂಡಿರುವೆ. ಊರು ಕೇರಿಗಳಿಗೆ ಅರ್ಥವಾಗದೆ ಹೋದ ಕೇಡಿತನವನ್ನು ಸಹ ಕಂಡೆನು.
ಸುಮಾರು ನಲವತ್ತು- ನಲವತ್ತೈದು ವರುಷಗಳ ಹಿಂದೆ ನನ್ನಪ್ಪ ಸೊಂಡೂರಿನ ಬೆಟ್ಟ-ಗುಡ್ಡ ,ಕಾಡು ಮೇಡುಗಳಲ್ಲಿ ಆಗಿನ ಕೆ.ಇ.ಬಿ.ಯ ಲೈಟುಕಂಬಗಳನ್ನು ಹೆಗಲಮೇಲೆ ಹೊತ್ತು ,ಹಳ್ಳಿ ಹಳ್ಳಿಗೂ ಮೈಸೂರು ಲ್ಯಾಂಪಿನ ಹಳದಿ ಕಲರಿನ ಬೆಳಕನ್ನು ಹರಿಸುವುದರಲ್ಲಿ ದುಡಿದವನು.
ಬೆಳಕಿನ ಆ ಕಿರಣಗಳಲ್ಲಿ ತನ್ನಂತಹ ಸಾಮಾನ್ಯ ಕೂಲಿಕಾರನ ಶ್ರಮವೂ ಇತ್ತು ಎಂದು ಹೇಳುವಾಗ ಅಪ್ಪನ ಕಂಗಳಲ್ಲಿ ಅದೆಂತಹ ಬೆಳಕಿತ್ತು ಎಂದರೆ…ಆ ಬೆಳಕಿನಲ್ಲಿ ಜಗತ್ತೇ ಕಾಣಿಸುತ್ತಿತ್ತು. ಖಾಲಿ ಪೀಲಿ ಕುಸ್ತಿ ಆಡುತ್ತಾ ಮೈ ಬೆಳೆಸಿಕೊಂಡು ತಿರುಗುತ್ತಿದ್ದ ತನ್ನ ತಮ್ಮನಿಗೆ ಜೀವನಾಧಾರಕ್ಕೆಂದು ತನ್ನ ಬದಲು ಆತನ ಹೆಸರನ್ನು ಇಲಾಖೆಗೆ ಸೇರಿಸಿ ತಾನು ತಣ್ಣಗೆ ಬಡಬ್ಯಾಸಾಯಕ್ಕೆ ಹಿಂದಿರುಗಿದ್ದ.
ಭೂಮಿಯ ಪಟ್ಟ ಕೊಟ್ಟ ದೇವರಾಜ್ ಅರಸರ ಋಣ (Sanduru Stories)
ಸಾಯುವವರೆಗೂ ತುಂಡು ಭೂಮಿಯ ಪಟ್ಟ ಕೊಟ್ಟ ದೇವರಾಜ್ ಅರಸರ ಋಣ ಮತ್ತು ಆರಾಧನೆಯಲ್ಲಿ , ಆತ ಹರಿಸಿದ ಬೆಳಕಿನಲ್ಲಿ ಸಣ್ಣಪುಟ್ಟ ರಾಜಕಾರಣದ ಕನಸು ಕಂಡರೂ , ಬದಲಾದ ಪರಿಸ್ಥಿತಿಯಲ್ಲಿ ರಾಜಕಾರಣದಿಂದ ನೇಪಥ್ಯದಲ್ಲಿಯೇ ಉಳಿದು ಹೋದರು.
ಇಂತಹ ಅನೇಕ ಚಿತ್ರಗಳು ನನ್ನಪ್ಪನಂತಹ ಬಹುತೇಕ ಬಡವರ ಎದೆಗಳಲ್ಲಿ ಇನ್ನೂ ಇರಬಹುದೇನೋ ಎಂಬ ನಿರೀಕ್ಷೆಯಲ್ಲಿಯೇ ನಾನು ಮುದುಕರನ್ನು ಮತ್ತೆಮತ್ತೆ ನೋಡುತ್ತೇನೆ. ಹಾಗೆ ಮತ್ತೆ ಮತ್ತೆ ಬರೆಯುತ್ತೇನೆ ಕೂಡ.
ಎಮ್ಮೆ ಕಾಯುವುದನ್ನೆ ಕಾಯಕಮಾಡಿಕೊಂಡಿದ್ದ ನನ್ನ ದೊಡ್ಡಪ್ಪ ಎಮ್ಮೆಜ್ಜ ಕೂಡ ತನ್ನ ಬದುಕಿನುದ್ದಕ್ಕೂ ಎಂದೂ ಕೂಡ ಒಂದೇ ಒಂದು ಗಿಡವನ್ನು ಕಡಿದವನಲ್ಲ.ದನಕರುಗಳಿಗೆ ಗದರಿದವನಲ್ಲ. ತನ್ನ ದುಡಿಮೆಗೂ ಮೀರಿದ ತನ್ನದಲ್ಲದ ಅನ್ನವನ್ನು ಉಂಡವನಲ್ಲ. ದಿನನಿತ್ಯವೂ ಜ್ವಾಳದ ಮುದ್ದೆ, ಹುಳ್ಳಿಕಾಳಿನ ಸಾರು,ಇಲ್ಲವೇ ಹೊಲದ ಬದುವಿನಲ್ಲಿ ಬೆಳೆದ ಕೋಲನ್ನೆ, ಬಳೆವಡಕದಂತಹ ಸೊಪ್ಪು ಬೇಯಿಸಿ ತಿಂದವನು.
Read also : Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 56 : ಪ್ರಯೋಗವಸ್ತು
ಕೆರೆಯ ತೂಬಿನ ನೀರಿನಲಿ ಹರಿವ ಮೀನುಗಳಿಗಾಗಿ ತನ್ನ ಹರಿದ ಪಂಚೆಯನ್ನೆ ಅಡ್ಡವಿರಿಸಿ ಹೊತ್ತು ತಂದವನು. ಇಂಥಾ ನಿಸರ್ಗದ ಮನುಷ್ಯನಿಗೆ ಯಾವಾಗಲೊಂದು ದಿನ ತನ್ನ ಸಿಲವಾರದ ಗಂಗಾಳದಲ್ಲಿ ಹೋಳಿಗಿ,ಅನ್ನ ಸಾರು ,ಹಪ್ಪಳ,ಸಂಡಿಗೆ….ಗಳನ್ನು ಕಂಡು ಬೆಚ್ಚಿಬಿದ್ದುದನ್ನೂ ನೋಡಿರುವೆ.ಆಗೆಲ್ಲ ಈ ಎಮ್ಮೆಜ್ಜ ಹೀಗೇಕೆ? ಎಂದು ಕೇಳಬೇಕೆನಿಸುತ್ತಿತ್ತು. ತನ್ನದಲ್ಲದ ಶ್ರಮದ ಭೂರಿ ಭೋಜನ ತನಗೆ ಕೇವಲದ “ಕೂಳು” ಆಗಿ ತೋರಿದ್ದು , ನನಗೆ ಅರಿವಾಗುವ ಹೊತ್ತಿಗೆ ಎಮ್ಮೆಜ್ಜ ಹಣ್ಣುಹಣ್ಣು ಮುದುಕನಾಗಿದ್ದ.ಇಂತಹ ಅರಿವಿನ ಸಂದರ್ಭಗಳಲ್ಲೆಲ್ಲ ನನಗೆ ” ಈಸಕ್ಕಿಯಾಸೆ ನಮಗೇತಕೆ?” ಎಂದು ಕೇಳಿದ ಆಯ್ದಕ್ಕಿ ಮಾರಯ್ಯನ ಹೆಂಡತಿಯ ಪ್ರಶ್ನೆ ನೆನಪಾಗುತ್ತಿತ್ತು.
ಇಲ್ಲಿನ ನನ್ನ ಅಕ್ಷರಗಳ ಕುರಿತು ನನಗೆ ನಾನೆ ನಿರೀಕ್ಷಣಾ ಜಾಮೀನು ಹಾಕಿಕೊಂಡು ಮೊದಲೇ ಹೇಳಿಬಿಡುವೆ.ಇಲ್ಲಿನ ಬರಹಗಳು ಸಾಹಿತ್ಯದ ಸಿದ್ಧ ಮಾದರಿಗಳನ್ನು ಪಕ್ಕಕ್ಕಿಟ್ಟು,ನನ್ನದೇ ಎದೆಯೊಳಗಿನ ಸಂಗತಿಗಳನ್ನು ಗೆಳೆಯರೊಂದಿಗೆ ಸಂಭಾಷಿಸಿದ್ದೇನೆ ಅಷ್ಟೆ.ಇಲ್ಲಿ ವಿಚಾರಗಳ ಜಗತ್ತಿಗಿಂತಲೂ ಬದುಕು ಎಂಬ ಜಗತ್ತಿನಲ್ಲಿ ಮನುಷ್ಯನನ್ನು ಹುಡುಕುವ ನನ್ನ ಬೇಗುದಿಯನ್ನು ಹಂಚಿಕೊಂಡಿರುವೆ.
ಸೊಂಡೂರು
ಅದೊಂದು ಬರೀ ಊರಲ್ಲ. ಲೋಕದ ದುಷ್ಟತನಗಳಿಗೆ ಬಲಿಯಾದ ಮುಗ್ಧನಂತೆ ನಿಂತ ಮನುಷ್ಯ. ಚಿತ್ತವನ್ನು ‘ಡಿಸ್ಟರ್ಬ್’ ಮಾಡಿದ ಇಂತಹ ಊರುಗಳಲ್ಲಿನ ಜನಸಮುದಾಯಗಳ ಆರ್ತನಾದಗಳು ಜಗತ್ತಿನ ಎಲ್ಲ ಭಾಷೆಯ, ಧರ್ಮದ ಜನರಿಗೆ ಸುಲಭವಾಗಿ ಅರ್ಥವಾಗಬಲ್ಲವು. ನಾಳೆಗಳು ತೀರಿಹೋಗಿವೆಯೆಂದು ತಿಳಿದೂ ಬದುಕುವ ವಿಲಕ್ಷಣ ಸ್ಥಿತಿ.
ಪ್ರಭುತ್ವಧ ಕಣ್ಣಿಗೆ ಭೂರಹಿತರ ಕಷ್ಟಗಳು ಅರ್ಥವಾಗಲ್ಲ (Sanduru Stories)
ಈಗೀಗ ಅಧಿಕಾರಕ್ಕಾಗಿ ಚುನಾವಣೆಗಳಲ್ಲಿ ಗೆದ್ದು ಬರಲೇಬೇಕೆಂದೇನಿಲ್ಲ.ರೊಕ್ಕ ವೊಂದಿದ್ದರೆ ಸಾಕು, ಮಿನಿಷ್ಟರುಗಳೂ ಆಗಬಹುದು.ಕೇವಲ ಕೆಲಸಾವಿರ ರೂಪಾಯಿಗಳಿಗೆ ಎಕರೆಯಂತೆ ಸಾವಿರಾರು ಎಕರೆ ಕೃಷಿಯೋಗ್ಯ ಭೂಮಿಯನ್ನು ಕಂಪೆನಿಯೊಂದಕ್ಕೆ ಬೇಷರತ್ತಾಗಿ ನೀಡಬಲ್ಲ ಪ್ರಭುತ್ವಧ ಕಣ್ಣಿಗೆ ಭೂರಹಿತರ ಕಷ್ಟಗಳು ಅರ್ಥವಾಗುವುದಿಲ್ಲ.ಅದೇ ದರದಲ್ಲಿ ಕೊಂಡು ಬೇಸಾಯ ಮಾಡಲು ತಯಾರಿರುವ ರೈತರಿಗೆ ಭೂಮಿ ದೊರಕುವುದಿಲ್ಲ.
ಒಂದು ಊರು ಎಂದರೆ, ಅಲ್ಲಿ ಒಂದಿಷ್ಟು ಮನೆಗಳು, ಜನಗಳು, ಜಾತ್ರೆಗಳು, ಮದುವೆ ಸಂಭ್ರಮಗಳಾದರೂ ಇರುತ್ತವೆ.ಊರಿಗೆ ತಕ್ಕಷ್ಟು ಮರಗಿಡ, ದನಕರು, ನೀರು ನಿಡಿ, ಗೋಮಾಳದ ಜಾಗೆ, ಊರಹೊರಗೆ ತಂಬಿಗಿ ಹಿಡಿದು ಹೊರಗೆ ಹೋಗಿಬರಲು ಜಾಗೆ…ನಗು,ಅಳು,ಚೇಷ್ಟೆ,ಕಷ್ಟ ಸುಖ….ಏನೇನೋ ಇರುತ್ತವೆ. ಆದರೆ ಜಾಗತೀಕರಣದ ಮಹಾಸ್ಫೋಟದ ಪರಿಣಾಮವಾಗಿ ಹತ್ತಿರತ್ತಿರ ನೂರಾರು ಕಂಪೆನಿಗಳ ಸ್ಥಾಪನೆಯಿಂದಾಗಿ ಕೈಗಳಿಗೆ ಕೆಲಸವೇನೋ ಸಿಕ್ಕಿತು.
ಮನುಷ್ಯನಿಗೆ ಬರೀ ರೊಟ್ಟಿಯೊಂದಿದ್ದರೆ ಸಾಲದು.ಅದರಾಚೆಗೆ ಆತ ಮತ್ತೇನನ್ನೋ ಹುಡುಕುತ್ತಾನೆ.ಮನುಷ್ಯನ ಸಂವೇದನೆಗಳು ಜನರೊಂದಿಗೆ,ಆತ ನಂಬಿಕೊಂಡು ಬಂದಂತಹ ದೇವರುಗಳೊಂದಿಗೆ, ಪಶು ಪಕ್ಷಿಗಳೊಂದಿಗೆ , ಮರಗಿಡಗಳೊಂದಿಗಿರುತ್ತವೆ. ಹಸಿರು ಮರಗಳ ತಂಗಾಳಿಯನ್ನು , ಬೆಳದಿಂಗಳ ಚೆಲುವನ್ನು,ಕಾಡಿನ ಸೊಬಗನ್ನು ಆಸ್ವಾದಿಸಲು ಹವಣಿಸುತ್ತಾನೆ. ಇದಕ್ಕೆ ಅಕ್ಷರ ಜ್ಞಾನ ಬೇಕಿಲ್ಲ.
ಮನುಷ್ಯ ಜೀವಿ ಎಷ್ಟೊಂದು ಸೂಕ್ಷ್ಮ ಎಂದರೆ ತಾನು ನಂಬಿದ ಜನರಷ್ಟೆ ತನ್ನ ನೆಲವನ್ನು, ಜಲವನ್ನು, ಸುತ್ತಲಿನ ಪರಿಸರವನ್ನೂ ಪ್ರೀತಿಸಬಲ್ಲ.ಇವುಗಳನ್ನು ಮುದುಕರು, ಹೆಂಗಸರು, ಯುವಕರು, ಮಕ್ಕಳಾದಿಯಾಗಿ ಯಾರೂ ವ್ಯಕ್ತಪಡಿಸಲಿಕ್ಕಿಲ್ಲ.ಆದರೆ ಅನುಭವಿಸುತ್ತಾರೆ. ಯಾವಾಗ ಇವುಗಳ ಮೇಲೆ ದಾಳಿಗಳು ನಡೆದವೋ ಆಗ ಆತ ಯುದ್ಧ ಭೂಮಿಯಲ್ಲಿ ನಿಶಸ್ತ್ರನಾಗಿ ನಿಂತವನಂತೆ ಕಾಣಿಸತೊಡಗಿದ.ಗಾಯಗಳು ಹೊರಗೆ ಕಾಣಿಸಬೇಕೆಂದೇನಿಲ್ಲ.
ಎಷ್ಟೋ ಜನ ಊರುಗಳನ್ನು ತೊರೆದು ಹೋಗುವಾಗ ಅವರ ಮನೆಯ ಮುದುಕರು ವಿಚಿತ್ರವಾಗಿ ವರ್ತಿಸುವುದನ್ನು ಕಂಡಿದ್ದೇನೆ.ಬದುಕಿನಲ್ಲಿ ಸೋತುಹೋದ ಅಸಹಾಯಕತೆ ಅವರನ್ನು ಕುಗ್ಗಿಸಿದಾಗ ಮನೆಯ ಹೆಣ್ಣುಮಕ್ಕಳ ಮೇಲೆ, ಮಕ್ಕಳು ಮೇಲೆ ವಿನಾಕಾರಣ ರೇಗಾಡುವುದನ್ನು ಅನುಭವಿಸಿ ಬಲ್ಲೆ.
ಯಾರೋ ಮಾಡಿದ ತಪ್ಪಿಗೆ ಇನ್ನಾರೋ ಶಿಕ್ಷೆ (Sanduru Stories)
ಯಾರೋ ಮಾಡಿದ ತಪ್ಪಿಗೆ ಇನ್ನಾರೋ ಶಿಕ್ಷೆ ಅನುಭವಿಸುವುದನ್ನು ನೋಡಿಯೂ ನೋಡದಂತಿರುವ ಕಾನೂನುಗಳು,ನ್ಯಾಯಾಲಯಗಳು, ಪೊಲೀಸರು, ಪ್ರಭುತ್ವ, ಯುನಿವರ್ಸಿಟಿಗಳ ಸಂಖ್ಯೆ ದಿನೆ ದಿನೇ ಏರುತ್ತಲೇ ಇರುತ್ತವೆ. ಮನುಷ್ಯ ಮತ್ತಷ್ಟು ಅಂತರ್ಮುಖಿಯಾಗಿ ಕುಸಿಯುತ್ತ ಹೋಗುತ್ತಾನೆ.ದೊಡ್ಡವರು ಅಂತರ್ಮುಖಿಯಾಗುವುದು ಸಹಜ, ಆದರೆ ಮಕ್ಕಳೂ ಅಂತರ್ಮುಖಿಯಾಗುವುದೆಂದರೆ ..ಆ ನೋಟಗಳನ್ನು ನೆನೆಸಿಕೊಂಡರೆ ಎದೆ ಕಲಕಿದಂತಾಗುತ್ತದೆ.
ಮನುಷ್ಯನನ್ನು ಮತ್ತಷ್ಟು ದುಗುಡಗಳಿಗೆ ತಳ್ಳಿದ ಈ ವಿಚಾರಗಳು ಪತ್ರಿಕೆಗಳಲ್ಲಿ, ಟೀವಿಗಳಲ್ಲಿ, ಪರಿಸರವಾದಿಗಳಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿರಬಹುದು. ಆದರೆ, ನನಗೆ ದೊರೆತ ಅನುಭವಗಳ ಪೈಕಿ, ಹೊಟ್ಟೆ,ಬಟ್ಟೆಗೆ ಏನೂ ಕೊರತೆಯಿಲ್ಲದಿದ್ದರೂ ಅನ್ಯಮನಸ್ಕರಾದ ಗಂಡಸರು ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಹೆಂಡತಿಗೆ ಬಡಿದು ಬಂದು,ಬಸ್ ಸ್ಟ್ಯಾಂಡಿನ ಹೋಟೆಲಿನ ಆ ಕತ್ತಲ ಕೋಣೆಯಲ್ಲಿ ‘ವಿನಾಕಾರಣ ಹೆಂಡತಿಗೆ ಬಡಿದು ಬಂದೆನಲ್ಲ’ ಎಂದು ದುಃಖಿಸುವ ಆತನಂತಹ ಮನುಷ್ಯರ ವಿಕ್ಷಿಪ್ತ ನಡವಳಿಕೆಗಳಿಗೆ ಕಾರಣವಾದರೂ ಏನಿರಬಹುದು ? ಅಳು ಮರೆತ, ನಗು ಮರೆತ, ಜಾತ್ರೆ, ನಾಟಕ, ಭಜನೆಗಳಿಲ್ಲದ ನಿರ್ಭಾವುಕ ಜಗತ್ತು ಕಾರಣವಾಗಿರಬಹುದೆ?
ಸೊಂಡೂರಿನಲ್ಲೀಗ ಭಾರಿ ಮಳೆ ಸುರಿಯುತ್ತಿದೆ. ಕೆಂಪು ಮಣ್ಣಿನ ಗಾಯಗೊಂಡ ಗುಡ್ಡಗಳ ಮೇಲಿಂದ ನೀರು ಹರಿದು ಬರುತ್ತಿದೆ.
ಅದಿರು
ಅಗೆದವರ ಬೆವರು
ಆಗಿರಬಹುದೆ
ನೆತ್ತರು?
ಎಂಬ ಪ್ರಶ್ನೆ ನನ್ನೆದೆಯಾಳದಲ್ಲಿ ಹಾಗೆಯೇ ಉಳಿದುಬಿಟ್ಟಿದೆ
ಬಿ.ಶ್ರೀನಿವಾಸ