Kannada News | Sanduru Stories | Dinamaana.com | 23-06-2024
ಕೆಂಪು ಧೂಳು ಬಿಟ್ಟು ಹೋದವರು.. (Sanduru Stories)
ಕೆಂಪು ಧೂಳು ಬಿಟ್ಟು ಹೋದವರು ಮತ್ತೆ ಊರಿಗೆ ಬರದೇ ಅದೆಷ್ಟೋ ದಿನಗಳಾಗಿ ಹೋಗಿವೆ. ನಿನ್ನೆ ಮೊನ್ನೆಯವರೆಗೂ ಸಂಡೂರಿನ ರಾಜ ಮನೆತನದಲ್ಲಿ ಕೆಲಸಕ್ಕಿದ್ದವರೆಲ್ಲ ಗಣಿ-ಧಣಿಗಳಾಗಿ ಐದೂ ಬೆರಳುಗಳಿಗೆ ಉಂಗುರ ತೊಟ್ಟು , ಚಿತ್ರ ವಿಚಿತ್ರವೆನಿಸುವ ಸೇದೋ ಹಗ್ಗ ನೆನಪಿಸುವ ಕೊರಳಸರ ಹಾಕಿಕೊಂಡು, ಇನ್ನೋವಾ, ಫಾರ್ಚ್ಯೂನ ರ್ಕಾರುಗಳಲ್ಲಿ ಓಡಾಡುವುದನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡವರು ಅದೆಷ್ಟೋ ಮಂದಿಯಿದ್ದರು.
ಆಗ್ಲೇ ಎಲೆಕ್ಸನ್ನು ಬಂದುಬುಡ್ತಾ..? (Sanduru Stories)
ಹೊಲಕ್ಕೋಗನೆಂದರೆ ಹೊಲಗಳಿಲ್ಲ. ಎಲ್ಲ ಹೊಲಗಳು ಮುದುರಿಕೊಂಡು ನೋಟುಗಳಾಗಿ ಕಾರುಗಳಲ್ಲಿ ಅವಿತು ಕುಳಿತಂತೆ ಭಾಸವಾಗುತ್ತಿದೆ. ಕೆಂಪು ಧೂಳಿನಲ್ಲಿ ಬಿಳಿಬಣ್ಣದ ಕಾರುಗಳು ಓಡಾಡುವುದನ್ನು ಕಂಡ ಕಲ್ಲಹಳ್ಳಿಯ ಮಾರಜ್ಜ”ಆಗ್ಲೇ ಎಲೆಕ್ಸನ್ನು ಬಂದುಬುಡ್ತಾ..? ” ಆಸೆ ಗರಿಗೆದರಿ ಕೇಳಿಯೇಬಿಟ್ಟ.
“ಏಯ್.. ತಗಾ, ಇನ್ನೂ ಐದ್ವರ್ಸ ಆಗಿಲ್ಲ.ಬೇನಳ್ಳಿ ದುರುಗಮ್ಮನ ಜಾತ್ರೀಗ್ ಆಗಿದ್ದು. ಮೂರೊರುಸನು ಆಗಿಲ್ಲ ತಗಿ ಮತ್ತೆಂಥ ಎಲೆಕ್ಸನ್ನು?”ಎಂದಳಾಕೆ.
ಒಂದು ಪಾರ್ಟಿಯ ಧಣಿ ಟೀವಿ ಕೊಡಿಸಿದ. ಇನ್ನೊಂದು ಪಾರ್ಟಿಯ ಧಣಿ ಸಿಡಿ ಪ್ಲೇಯರೂ ಕೊಡಿಸಿದ. ಮತ್ತೊಬ್ಬನ್ಯಾರೋ ಇಂಡಿಪೆಂಡಂಟಂತೆ ಅತ್ತೂ ಕರೆದು ತಾನೂ ಪಾರ್ಟಿಗಾಗಿ ದುಡಿದದ್ದು,ಅವರು ಹೊರಗೆ ಹಾಕಿದ್ದನ್ನು ಹೇಳಿ ಕಣ್ಣೀರು ಸುರಿಸಿ ಹೇಳಿದ್ದಲ್ಲದೆ, ತಾನು ಗೆದ್ದು ಬಂದರೆ ಎಲ್ಲರಿಗೂ ‘ಗಾಡಿ’ಕೊಡಿಸುವ ಭರವಸೆಯನ್ನು ನೀಡಿದ. ಹಂಗೇ ಹೋಗಬಾರದೆಂದು ಟಿಫನ್ನು ಕ್ಯಾರಿಯರ್ರುಗಳೆಂದು ಓಟಿಗೊಂದು ಐನೂರರ, ಸಾವಿರದ ರೂಪಾಯಿ ನೋಟಿನ ಗಾಂಧಿ ತಾತನನ್ನು ಕೊಟ್ಟು ಹೋಗಿದ್ದ.
ದಮ್ಮು ಜಾಸ್ತಿಯಾಗಿ ಉಸಿರಾಟ ಕಷ್ಟ …(Sanduru Stories)
ಈಗ ಎಲ್ಲರ ಮನೆಯಲ್ಲೂ ಟೀವಿಗಳು ಮಾತಾಡ್ತಿವೆ. ಹರೆಯದ ಹುಡುಗರಿಗೆ ಪಾರ್ಶ್ವವಾಯು ಹೊಡೆದಿದೆ. “ಅಯ್ಯೋ ಕುಮಾರಸ್ವಾಮಿ…ನಿನಗ ಕಾಯಿ,ಕರ್ಪೂರ ದೀಪ ಹಚ್ಚಿದಿನಲ್ಲೋ ಇಂಥ ಅನ್ಯಾಯ ,ನೀನ ಮಾಡಬಹುದೇನೋ..?” ಎಂದು ಗೂಳಿಯಂತಿದ್ದ ಮಗ ನೆಲಕಚ್ಚಿದ್ದ ಕಂಡು ಎದೆ ಎದೆ ಬಡಕೊಂಡು ಅಳುತ್ತಿದ್ದಾಳೆ. ಆತನಿಗೆ ದಮ್ಮು ಜಾಸ್ತಿಯಾಗಿ ಉಸಿರಾಟ ಕಷ್ಟವಾಗುತ್ತಿದೆ.
READ ALSO : SANDURU STORIES : ಸೊಂಡೂರಿನ ಕಗ್ಗತ್ತಲೆಯ ಕಥನಗಳು : ಮುಂಜಾನೆಯ ಕೊಲೆ-3
ಭೂಮಿ ಬಗಿದ್ರೆ ಅವ್ವನ ಹೊಟ್ಟಿ ಬಗೆದಂಗೆ.. …(Sanduru Stories)
ಯಾರೋ ಪೊಲೀಸರು ಗಣಿಧಣಿಗಳನ್ನು ಹಿಡ್ಕೊಂಡೋದ್ರಂತೆ. ಗುಡ್ಡ-ಕಾಡು ಮೇಡುಗಳನೆಲ್ಲಾ ಇಂಗೆ ಕಡಿಬಾರದಿತ್ತಂತೆ. “ಆ..ಹ್ಞಾ..ಹ್ಞಾ..”ಮುದುಕ ವಿಲಕ್ಷಣವಾಗಿ ನಕ್ಕ. “ನಾನೇಳ್ಲಿಲ್ಲ ಅವತ್ತು,…ಬ್ಯಾಡ್ರಲೇ…ಬ್ಯಾಡ್ರಲೇ ಭೂಮ್ತಾಯಿನ ಬಗೀ ಬೇಡ್ರಲೆ ಅಂತ.ಕೇಳಿದ್ರಾ…ಅವ್ವನ ಹೊಟ್ಟಿ ಬಗೆದಂಗ ಬಗ್ದಾಕಿದ್ರೂ ಈ ಸೂ….ಮಕ್ಕಳು ಥೂ..”
ಕ್ಯಾಕರಿಸಿ ಉಗುಳಿದ. ಉಗುಳಿದ ಸದ್ದು ಬೋಳುಗುಡ್ಡಗಳಲ್ಲಿ ಪ್ರತಿಧ್ವನಿಸಿ ,ಸ್ತಬ್ಧವಾಯಿತು.
ಬಿ.ಶ್ರೀನಿವಾಸ
ದಾವಣಗೆರೆ