Kannada News | Sanduru Stories | Dinamaana.com | 27-05-2024
ಮೌನ ಕೂಡ ಮಾತಾಡುತ್ತಿದೆ (Sanduru Stories)
ಸೊಂಡೂರು ಸುತ್ತಮುತ್ತಲಿನ ಹಳ್ಳಿಗಳ ಪಾಲಿಗೆ ಬದುಕು ಅದೆಷ್ಟು ಕ್ರೂರಿ ಎಂದರೆ… ಮೌನ ಕೂಡ ಮಾತಾಡುತ್ತಿದೆ ಕೊಲೆಗಡುಕರ ಹಾಗೆ!
ಅವ್ವನ ಪೀಡಿಸುವ ಮಕ್ಕಳ ಸದ್ದಿಲ್ಲ (Sanduru Stories)
ಗಣಿ ಉದ್ಯಮಿ ಸ್ಥಗಿತಗೊಂಡು ಎಷ್ಟೋ ವರ್ಷಗಳಾದರೂ ಹಲವಾರು ಪ್ರಶ್ನೆಗಳು ಅವರ ಮನಸ್ಸನ್ನು ಹೃದಯವನ್ನು ಕಾಡುತ್ತಲೇ ಇರುತ್ತವೆ. ಮೂರು ವರುಷಕ್ಕೊಮ್ಮೆ ಜರುಗುವ ಕುಮಾರಸ್ವಾಮಿ ಜಾತ್ರೆಯಲ್ಲಿ ಪೀಂಯ್ ..ಪೀಂಯ್ ಎನ್ನುವ ಪೀಪಿ ಕೊಡಿಸೆಂದು ಅವ್ವನ ಪೀಡಿಸುವ ಮಕ್ಕಳ ಸದ್ದಿಲ್ಲ.ಚಿಪ್ಪು,ಕಸಬರಿಗೆ ಕಟ್ಟಿಕೊಂಡು ಮೆರವಣಿಗೆ ಹೊಂಟ ಆಕಳು ಹಾಕಿದ ಗಂಜಲದ ನೆಲವೂ ಕಾಣಿಸುತ್ತಿಲ್ಲ.
ಜಾತ್ರೆಗೆಂದು ನಾಟಕದ ಮೇಷ್ಟ್ರು ಹೇಳಿಕೊಟ್ಟ ಡೈಲಾಗುಗಳು,ಹಾರ್ಮೋನಿಯಮ್ ಸವುಂಡು,ಮಾಸ್ತರರ ಗದರಿಕೆಯ ಸದ್ದೂ ಇಲ್ಲ. ಹಸಿರು ಬಳೆಗಳ ಮದುವಣಗಿತ್ತಿ ಮೊಟ್ಟಮೊದಲ ಬಾರಿಗೆ ಊರಿಗೆ ಬಂದಾಗಿನ ಕ್ಷಣಕ್ಕೆ ಕಣ್ಣು ತುಂಬಿಕೊಂಡು ನಿಂತ ಮರಗಿಡವೂ ಇಲ್ಲ.
ಬಣ್ಣ ಮಾಸಿದ ರಿಬ್ಬನ್ನು,ಸವೆದುಹೋದ ಹೇರ್ ಪಿನ್ನು ನೋಡುತ್ತಾ ಜಾತ್ರೆಗಳ ನೆನಪಿನಲ್ಲಿ ನಿಂತ ಹುಡುಗಿ, ಗಿಜಿಗಿಡುತ್ತಿದ್ದ ಕೈಯಿಂದ ಕೈಯ್ಯಿಗೆ ವಿನಿಮಯಗೊಳ್ಳುತ್ತಿದ್ದ ನೂರು, ಐನೂರು, ಸಾವಿರದ ನೋಟಿನೊಳಗಿನ ನಗುವ ಗಾಂಧಿ, ಕೈಯೊಳಗಿನ ಸಿಗರೇಟು, ವಿದೇಶಿ ಮದ್ಯದ ಬಾಟಲಿಗಳು ಇತ್ಯಾದಿ…..ಒಂದೂ ಕಾಣಿಸುತ್ತಿಲ್ಲ.
ನಿಂತು ಹೋದ ಸಿನಿಮಾದ ಚಿತ್ರದಂತೆ ಸ್ತಬ್ದ (Sanduru Stories)
ಸೊಂಡೂರಿನ ಬೀದಿಯಲ್ಲೀಗ ಕರೆಂಟು ಹೋಯಿತೆಂದು ನಿಂತು ಹೋದ ಸಿನಿಮಾದ ಚಿತ್ರದಂತೆ ಸ್ತಬ್ದ.ಅದುವರೆಗೂ ಬಣ್ಣ ಬಣ್ಣದ ಚಿತ್ರಗಳ ತೋರಿಸಿ ಸಿನಿಮಾ ಮುಗಿದು ಹೋಯಿತೆಂದು ಪ್ರೊಜೆಕ್ಟರ್ ರೂಮಿನಿಂದ ಹೊರಬರುವ ಆತನ ಮ್ಲಾನವದನದಂತೆ ತೋರುತ್ತಿದೆ.
ಅಲ್ಲಲ್ಲಿ ಬುಲ್ಡೋಜರುಗಳುಂಟು ಮಾಡಿದ ರಣಗಾಯ.
ಒಸರುವ ಕೀವು
ಕೂಗಿದರೂ ಕೇಳಿಸದ ನೋವು.
ಕ್ಷಮಿಸಿ ಸತ್ತ ಅಪ್ಪ ಅವ್ವನ.
ಮಣ್ಣು ಮಾಡಿ, ಅಳುತ ಕುಂತ ಅನಾಥ ಹುಡುಗನ ಬೋಳುತಲೆ
ಪ್ರತಿಫಲಿಸುತಿದೆ ಪಳಪಳನೆ
ಊರಮಸಣಕೊಂದು ಭದ್ರಕೋಟೆ
ಮೇಲೆ ಹೆಸರು ಕೆತ್ತಿಸಿದ ಭೂಪರು
ಮಣ್ಣು ಕದ್ದ ಅವರು
ಸರಳು ಹಿಂದೆ ಸರಳ ನಿಂತರು
ಚಿಂದಿಯಾದ ನನ್ನ ಜನರು
ಅರ್ಧ ಮಸಣ ಸೇರಿ
ಇನ್ನರ್ಧ ಬದುಕನರಿಸಿ ಎಲ್ಲಿಗೋ ಹೋದರು.
ಬಿ.ಶ್ರೀನಿವಾಸ