ಹೊಸಪೇಟೆಯಿಂದ ಜಿಂದಾಲ್ ಕಾರ್ಖಾನೆಗೆ ಹೋಗುವ ಹೆದ್ದಾರಿಯಲ್ಲಿ ಕೆಂಪನೆಯ ಊರೊಂದು ನಿಮಗೆ ಕಾಣಿಸುತ್ತದೆ. ಇಲ್ಲಿನ ರಸ್ತೆ, ಮನೆಗಳು, ಮರ ಗಿಡಗಳು, ಮುದುಕರು , ಹುಡುಗರು, ದನಕರುಗಳು ಹಾಗೂ ನಿಂತು ಹೋದ ಗಣಿಗಾರಿಕೆಯಿಂದ ಅರ್ಧಕ್ಕರ್ಧ ಕೆಟ್ಟು ನಿಂತ ಲಾರಿಗಳು ಕೂಡ ಕೆಂಪು ಕೆಂಪು ಕೆಂಪು.ಯಾರಾದರೂ ಇಸ್ತ್ರಿ ಮಾಡಿದ ದಿರಿಸಿನವರು ಕಂಡರೆ ಅವರು ಈ ಊರಿನವರಲ್ಲ ಎಂದುಕೊಳ್ಳಬೇಕು.
ಪ್ರತಿ ಮನೆಯ ಒಳಗೂ ಕತ್ತಲು
ಕೈಯ್ಯಲ್ಲಿ ಕೆಲಸವಿಲ್ಲದೆ ಏನು ಮಾಡಬೇಕೆಂದು ತೋಚದೆ ಸುಮ್ಮಸುಮ್ಮನೆ ಓಡಾಡುವ ಯುವಕರು,ಒಂದು ಕಾಲದಲ್ಲಿ ಲಾರಿ ಟಿಪ್ಪರುಗಳಿಗೆ ತುಂಬಿದ ಅದಿರಿನ ಸಾಹಸಗಳನ್ನು ಮೆಲುಕು ಹಾಕುತ್ತಾ ಕಾಲ ಕಳೆಯುತ್ತಾರೆ. ಹೆಂಗಸರು ಮುಂಜಾನೆಯ ಹೊಟ್ಟೆಗಳನು ಹೇಗೋ ತುಂಬಿಸಿದ್ಧಾಯಿತು.ಇನ್ನು ಮಧ್ಯಾಹ್ನಕ್ಕೇನು ಮಾಡಬೇಕೆಂಬ ಚಿಂತೆಯಲ್ಲಿರುತ್ತಾರೆ. ನಡುವಯಸ್ಸಿನ ಗಂಡಸರು ಧಣಿಗಳ ಮನೆ ಮನೆಗಳಿಗೆ ಕೆಲಸಕೊಡಿರೆಂದು ಕೇಳುತ್ತ ತಿರುಗುತ್ತಾರೆ. ಆಡಲು ಆಟಿಕೆಗಳಿಲ್ಲದೆ ಮಕ್ಕಳು “ಮಣ್ಣು ತೂರುವ ಆಟ” ಆಡಿಕೊಂಡಿದ್ದಾರೆ.ಪ್ರತಿ ಮನೆಯ ಒಳಗೂ ಕತ್ತಲು ಆವರಿಸಿದೆ.
ಆ ಊರಿನ ಹೆಸರು ಕಾರಿಗನೂರು!
ಬಹಳ ದೊಡ್ಡ ದೊಡ್ಡ ಕಂಪೆನಿಗಳ ಗಣಿಗಾರಿಕೆಗೆ, ಮೈನಿಂಗು ಡಿಪ್ಪಿಂಗುಗಳಿಗೆ ಹೋಗಿ- ಬರುವವರಿಗೆ ಸ್ವಾಗತ ಕೋರುವ ಮತ್ತು ಸಂಜೆ,ರಾತ್ರಿಗಳಲಿ ವಾಪಾಸು ಹೋಗುವಾಗ ವಿದಾಯ ಹೇಳಲು ನಿಂತಿರುವ ಮುಗ್ಧ ಹುಡುಗನಂತೆ ಊರು ನಿಂತುಬಿಟ್ಟಿದೆ. ದಶಕಗಳಿಂದಲೂ ಅನೂಚಾನವಾಗಿ ಮತ್ತು ಕಾನೂನಾತ್ಮಕವಾಗಿ “ಸರಿ”ಎಂದುಕೊಂಡ ಗಣಿಗಾರಿಕೆಗೆ ದ್ವಾರಬಾಗಿಲಂತಿದ್ದ ಈ ಊರಿನಲ್ಲಿ ಅಷ್ಟೊಂದು ಬೃಹತ್ ಪ್ರಮಾಣದ ಮೈನಿಂಗ್ ನಲ್ಲಿ ಬಹುಕಾಲದಿಂದಲೂ ದೂರದ ರಾಜ್ಯಗಳಿಂದ ಬಂದ ಮತ್ತು ಲೋಕಲ್ ಜನರೇ ಇಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ.
ಅಕ್ರಮ ಗಣಿಗಾರಿಕೆಯನ್ನು ನಂಬಿ ಬದುಕಿದ ಮತ್ತು ಆ ಭರವಸೆಯಲ್ಲಿಯೇ ನೂರಾರು ವೋಲ್ವೋ ಟಿಪ್ಪರುಗಳನ್ನು ಖರೀದಿಸಿದ ಒಂದು ಕಾಲದ ಸೌಕಾರ್ರು ….ಈಗ ಸಾಲಗಾರ್ರು.ಇದ್ದಕ್ಕಿದ್ದಂತೆಯೇ ನಿಂತು ಹೋದ ಅಕ್ರಮ ಗಣಿಗಾರಿಕೆಯಂತೆಯೇ ಊರಿನ ಬದುಕೂ ನಿಂತುಬಿಟ್ಟಿದೆ.
ಇಂಥಾ ಊರಿನಲ್ಲಿ ಮಣ್ಣೆಂಬುದು ರೊಕ್ಕದ ಕಣ್ಣು! ಆಗಿಬಿಟ್ಟಿತು.
ಗಣಿ ಬೆಟ್ಟಗಳ ತಪ್ಪಲಲ್ಲಿರುವ ಈ ಊರಿಗೆ ಜಾತ್ರೆಗಳಿಲ್ಲ.ಹಬ್ಬ ಪರಿಷೆಗಳಿದ್ದರೂ ನಾಮಕಾವಸ್ಥೆ ಆಗಿಬಿಟ್ಟಿವೆ. ಕಾರಿಗನೂರಿನ ಒಣ ಕಲ್ಲು ಮಣ್ಣು ಮಿಶ್ರಿತ ಭೂಮಿ ಅತ್ಯಂತ ಫಲವತ್ತಾದುದು.ಈಗ ಹುಡುಕಿದರೂ ಕಾಣಲು ಸಿಗದ ಹೊಲಗಳು ಕೆಂಪು ಅಂಗಳಗಳಂತೆ ತೋರುತ್ತಿವೆ.ಬ್ಯಾಸಾಯದ ಮಂದಿ ಹುಡುಕಾಡಿದರೂ ಸಿಗುವುದಿಲ್ಲ.ಕುಡಿಯುವ ನೀರು,ಉಸಿರಾಡೋ ಗಾಳಿಯೂ ಧೂಳಿನಂತೆ ಸಹಜವಾಗಿ ಹೋಗಿದ್ದು ದುರಂತ. ಇಂಥದೊಂದು ಊರಿನಲ್ಲಿ ಅವಿಭಕ್ತ ಕುಟುಂಬದ ಅಣ್ಣತಮ್ಮಂದಿರು ಗಟ್ಟಿಮುಟ್ಟಾದ ಮನೆಯನ್ನು ಬೀಳಿಸುತ್ತಿದ್ದರು. ಹೌದು,ಮನೆ…ಹನ್ನೆರೆಡು ಅಂಕಣದ ಮನೆ,ಅಜ್ಜ ಅಜ್ಜಿ,ಅಪ್ಪ ಅವ್ವ ಬಾಳಿ ಬದುಕಿದ ಮನೆ. ಪ್ರಸ್ತದ ಕೋಣೆ.ಬಾಣಂತನದ ಕೋಣೆ.ಚೀಲಗಟ್ಟಲೆ ಧಾನ್ಯ ಒಟ್ಟಿದ ಕೋಣೆ.ಮನೆ ಗಟ್ಟಿಯಾಗಿಯೇ ಇತ್ತು.
“ಮನೆಯನ್ನೇಕೆ ಕೆಡವುತ್ತಿದ್ದೀರಿ?”
ಯಾರೋ ಕೇಳಿದರು.
“…………….”
ಆತ ಮತ್ತವನ ಸಹೋದರ ಮೌನಕ್ಕೆ ಶರಣಾಗಿದ್ದರು. ಮಮನೆಯ ಹೆಂಗಸರು,ಮುದುಕರು ಮಕ್ಕಳೆಲ್ಲ ಅಷ್ಟು ದೂರದ ಬಯಲಿನಲ್ಲಿ ಹುಂಚೀಮರದ ಕೆಳಗೆ ಗುಡಾರ ಹಾಕಿಕೊಂಡು ಬೀಳುತ್ತಿದ್ದ ಮನೆಯನ್ನೆ ನೋಡುತ್ತಿದ್ದರು. ಬಾಳಿ ಬದುಕಿದ ಮನೆಯನ್ನು ಆಡಿ ಬೆಳೆದ ಮಕ್ಕಳೇ ಕೆಡುವುತ್ತಿರುವುದನ್ನು ನೋಡುವ ಆ ನೋಟದಲ್ಲಿ ದುಃಖವಿತ್ತೋ…ವಿಷಾದವಿತ್ತೋ…ಇಲ್ಲವೋ ಗುರುತಿಸಲು ಸಾಧ್ಯವಾಗಲಿಲ್ಲ. “ಅಸಲಿಗೆ, ಅಂತಹ ಗಟ್ಟಿಮುಟ್ಟಾದ ಮನೇನ ಸುಮ್ ಸುಮ್ಕೆ ಕೆಡುವುತೀರಲ್ಲೋ ಮಾರಾಯ..ತಲಿಗಿಲಿ ಸರಿಗೈತೋ ಇಲ್ಲೋ..?”
ಯಾರೋ ಪಾಪ!ಕೆಲಸ ಹುಡುಕುತ್ತಾ ಬಂದ ಉತ್ತರ ಕರ್ನಾಟಕದ ಕಡೆಯವನಂತೆ ಕೇಳಿಯೇಬಿಟ್ಟ. “ಹೌದಲ್ವಾ..ಇಂಥಾ ಮನೇನ ಯಾಕೆ ಕೆಡುವುತಿರಿ..? “ಜೊತೆಗಾರನೂ ಕೇಳಿದ. “ಮಗಳ ಮದುವೆ ಬಂತಪೋ..ಕೈಯಾಗ ರೊಕ್ಕನು ಇಲ್ಲ.ಕೆಲಸವೂ ಇಲ್ಲ.ಈ ಮನೆ ಬುನಾದೇಗ ಹೈಗ್ರೇಡ್ ಅದಿರೈತೆ.ಅದನ್ನ ಮಾರಿದರೆ ವೋಟು ರೊಕ್ಕ ನರ ಆಗ್ತಾವು. ಮಗಳ ಮದುವ್ಯಾಗಿ, ಟಿಪ್ಪರಿನ ಬ್ಯಾಂಕಿನ ಸಾಲನಾದ್ರೂ ತೀರಿದರೆ ಅಷ್ಟೇ ಸಾಕು ..ಗಂಡುಡ್ರದಾವು ಹೆಂಗೋ ಜೀವನ ನಡೀತೈತೆ”ಎಂದು ಬೀಳಲಿದ್ದ ಜಂತಿಯನ್ನು ಅಣ್ಣತಮ್ಮಂದಿರಿಬ್ಬರೂ ಎತ್ತಿ ಆ ಕಡೆಗೆ ಎಸೆದರು!.
ಮನುಷ್ಯ ಹೇಗೋ ಬದುಕಿ ,ಹೇಗೋ ಒಂದು ದಿನ ಸಾಯುವುದು ಮುಖ್ಯವಲ್ಲ.ಆದರೆ ಬದುಕಿನ ಕ್ಷಣಗಳು ಸಹ್ಯವಾಗಿರಬೇಕು. ಆತ್ಮಗೌರವಕ್ಕೆ ಧಕ್ಕೆ ಬಂದಿರುವ, ಸಾವಿಗೆ ಎರವಾಗುವ ಈ ಹಿರಿ ಜೀವಗಳ ನೋವಿನ ಕಾರಣಗಳ ಹುಡುಕುವರಾರು? ಸ್ವತಃ ಆಡಿ ಬೆಳೆದ ತಮ್ಮ ಮನೆಯನ್ನೆ ಬೀಳಿಸುತ್ತಿರುವ ಇಂಥಾ ಮುಗ್ಧ ಜನರ ಕಣ್ಣ ಮುಂದಿರುವುದು ಮಗಳ ಮದುವೆಯ ಚಿಂತೆಯೊಂದೆ. ಮುಂದಿನ ಗಮ್ಯವೋ …ತೀರವೋ…ಯಾವುದರ ಬಗ್ಗೆಯು ಚಿಂತೆಯಿಲ್ಲ.
ಮನುಷ್ಯರನ್ನು ನಿರ್ಭಾವುಕರನ್ನಾಗಿಸುತ್ತ ಸಾಗಿರುವ ಇಂತಹವುಗಳ ಕುರಿತು ಯಾವ ವಿಧಾನಸಭೆಗಳೂ, ನ್ಯಾಯಾಲಯಗಳೂ ಎಂದಿಗೂ ಚಿಂತಿಸುವುದಿಲ್ಲ.ಯಾಕೆಂದರೆ ಮನುಷ್ಯನ ಆತ್ಮಗೌರವವನ್ನು ಯಾರೂ ಅಕ್ಷರಗಳಲ್ಲಿ,ಕಾನೂನಿನ ಸೆಕ್ಷನ್ನುಗಳಾಗಿ ಬರೆದಿಟ್ಟಿರುವುದಿಲ್ಲವಲ್ಲ!.
ಬಿ.ಶ್ರೀನಿವಾಸ