Kannada News | Sanduru Stories | Dinamaana.com | 12-06-2024
ಯಾವ ಬೀದಿ ಸುತ್ತುತ್ತಿದ್ದಾರೋ (Sanduru Stories)
ನಿನ್ನೆ ಮೊನ್ನೆಯವರೆಗೂ ಕೆಂಪು ಮನುಷ್ಯರಂತೆ , ಯುದ್ಧಕ್ಕೆ ಹೊರಟ ಸೈನಿಕರಂತೆ ತೋರುತ್ತಿದ್ದ ಗಣಿ ಕೆಲಸದ ಕೂಲಿಗಳು ಇದೀಗ ಯಾವ ಬೀದಿ ಸುತ್ತುತ್ತಿದ್ದಾರೋ ಏನೋ.
ಸಾಲಿಯ ರುಚಿ ಹೇಗೆ ಹತ್ತೀತು ? (Sanduru Stories)
ಗುಂಪು ಗುಂಪಾಗಿ ಸಾಲಿಗೆ ಹೋಗುತ್ತಿದ್ದ ಹುಡುಗರು ಒಂದು ಸಗಣಿ ಪುಟ್ಟಿಯಷ್ಟು ಕಲ್ಲು ಮಣ್ಣು ಗುಂಪಿ ಮಾಡಿದರೆ ಸಾಕು , ದಿನವೊಂದಕ್ಕೆ ನೂರಿನ್ನೂರು ರೂಪಾಯಿ ಸಿಗುವಾಗ ಸಾಲಿಯ ರುಚಿ ಹೇಗೆ ಹತ್ತೀತು ?
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-34 ಮಗು, ತಾಯಿ ಮತ್ತು ಸಾವು
ಸಂಡೂರಿನ ಬೀದಿಗಳಿಗೆ ಈಗೀಗ ಮಾಮೂಲಿ (Sanduru Stories)
ತಾನೊಬ್ಬನೇ ಎಂಟುಗಾಲಿಯ ಟಿಪ್ಪರಿಗೆ ಜೆಸಿಬಿ ಯಂತ್ರದಿಂದ ಅರ್ಧಗಂಟೆಯಲ್ಲಿ ಲೋಡು ಮಾಡಿದ್ದು , ಪೊಲೀಸರ ಕಣ್ತಪ್ಪಿಸಿ ಅದಿರು ಸಾಗಿಸಿದ್ದು , ಗಣಿಧಣಿಗಳ ಮನೆಯಲ್ಲಿ ರಾಶಿ ರಾಶಿ ನೋಟುಗಳನ್ನು ಕಣ್ಣು ಕೋರೈಸುವ ಬಂಗಾರದ ಆಭರಣಗಳನ್ನು ನೋಡಿದ್ದು, ಸಾಹಸಗಳೆಂಬಂತೆ ಕನಸೆಂಬಂತೆ ಮಾತನಾಡಿಕೊಳ್ಳುವುದು ಸಂಡೂರಿನ ಬೀದಿಗಳಿಗೆ ಈಗೀಗ ಮಾಮೂಲಿಯಾದ ಸಂಗತಿಯಾಗಿ ಹೋಗಿದೆ.
ಬಂಗಾರದ ಕುರ್ಚಿಯ ಮೋಹಕ್ಕೆ ಬಿದ್ದ ಧಣಿಗಳು ಜೈಲುಪಾಲಾದರೆಂದು ಕೇಳಿ ಸತ್ತುಹೋದ ಬೀದಿ ಮತ್ತೊಮ್ಮೆ ಉಸಿರಾಡುತ್ತಿದೆ. ಬೆಟ್ಟಗಳ ಮೇಲಿಂದ ಬೀಸುವ ತಂಗಾಳಿ, ಪಕ್ಷಿಗಳ ಕಲರವ,ಗಳೇವು ಕಟ್ಟುತ್ತಿದ್ದ ಗಂಡಸರು. ಬಂಡಿ ಹೊಡಕೊಂಡು ಹೊರಟ ಹರೆಯದ ಸ್ನೇಹಿತರು..ಎಲ್ಲಿ ಹೋದರು?
ಅವರೆಲ್ಲ ಎಲ್ಲಿ ಹೋದರು?
ಅಮ್ಮಾ ತಾಯೇ..
ಅಮ್ಮಾ ತಾಯೇ…
ಖಾಲಿ ಬೋಗುಣಿ ಹಿಡಿದು ಕೂಗುತ್ತ
ಎಲ್ಲಿ ಹೋದರೋ..?
ಕಟ್ಟಿಕೊಂಡ ಸೆರಗಿನಲ್ಲಿ
ಅನ್ನವಿತ್ತೋ ಇಲ್ಲವೋ
ಮಗುವಂತೂ ಅಳುತ್ತಿತ್ತು
ಪಾಪ
ಅವರು ಹಸಿದಿದ್ದರು
ಎಲ್ಲಿ ಹೋದರೋ.?
ಬಿ.ಶ್ರೀನಿವಾಸ