Kannada News | Sanduru Stories | Dinamaana.com | 13-06-2024
ಜನರೇಟರು ಸದ್ದಿಗೆ ರಾತ್ರಿಯೆಲ್ಲ ನಿದ್ದೆಯಿಲ್ಲ (Sanduru Stories)
ಒಂದು ಮಳೆಗಾಲದ ಮುಂಜಾವು. ಬೆಳಕಿನ್ನೂ ಸರಿಯಾಗಿ ಹರಿದಿರಲಿಲ್ಲ. ಬೆಟ್ಟದ ತುದಿಗಳಲ್ಲಿನ ಜನರೇಟರು ಸದ್ದಿಗೆ ರಾತ್ರಿಯೆಲ್ಲ ನಿದ್ದೆ ಕೂಡ ಬಂದಿರಲಿಲ್ಲ.
ತುತ್ತ ತುದಿಯಲ್ಲಿ ಗಣಿಗಾರಿಕೆ ಮಾಡುವುದಕ್ಕೆ ಹಗಲು ರಾತ್ರಿಗಳ ಭೇದವೆಂಬುದು ಇರುವುದಿಲ್ಲ. ಅಲ್ಲಿರುವ ಲಾರಿಗಳ ಕಂಟೇನರುಗಳಿಗೇ ಏರ್ ಕಂಡೀಷನರ್ ಕೂಡಿಸಲಾಗಿರುತ್ತದೆ. ವಿದ್ಯುತ್ತಿಗಾಗಿ ರಕ್ಕಸ ಗಾತ್ರದ ಜನರೇಟರುಗಳು ನೋವಿನಿಂದ ಚೀರುತ್ತಿರುವ ಹಾಗೆ ತೋರುತ್ತವೆ.
ಇಂಥದ್ದೇ ಒಂದು ಬೆಳಗಾ ಮುಂಜಾನೆ, ಪೊಲೀಸರು ಧಣಿಗಳನ್ನು ಹಿಡ್ಕೊಂಡು ಹೋದರಂತೆ, ನೀವಿನ್ನು ಕೆಲಸಕ್ಕೆ ಬರಬಾರದಂತೆ ಎಂದು ಹೇಳಿದ ದಿನದಿಂದ ಅವರು ಹೀಗೆ ಮನೆಯಲ್ಲಿ ಕುಳಿತಿದ್ದಾರೆ.
ಊರ ತುಂಬಾ ಈಗ ಮೌನದ್ದೇ ಮಾತು (Sanduru Stories)
ಎಲ್ಲವೂ ಮುಗಿದಿದ್ದರೂ, ಮಸಣದ ಗುದ್ದಿನ ಮೇಲೆ ನಿಂತು ಯಾರಾದರೂ ತಿಥಿ ಸಮಾರಾಧನೆಯ ದಿನಾಂಕವನ್ನು ಹೇಳುವರೇನೋ ಎಂಬ ನಿರೀಕ್ಷೆಯಲ್ಲಿ ಕಾಯುತ್ತ ಕುಳಿತವರ ಹಾಗೆ. ಊರ ತುಂಬಾ ಈಗ ಮೌನದ್ದೇ ಮಾತು.
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-15 ಬದಲಾದ ರಾಜಕಾರಣದ ವರಸೆಗಳು
ಹಸಿವಿನ ಹದ್ದು ಹಾರಾಡುತಿದೆ.. (Sanduru Stories)
ಇಷ್ಟು ದಿನ ಕೂಗಿದರೂ ಕೇಳಿಸಿಕೊಳ್ಳದಂತೆ ಟೇಮಿಲ್ಲವೋ ಎಂದು ಕೈಯಾಡಿಸುತ್ತ ತಿರುಗಿ ನೋಡದೆ ಹೋದ ಲಾರಿಗಳು, ಟಿಪ್ಪರುಗಳು, ಬೇವಿನ ಮರಗಳ ಸಾಲುಗಳ ಕೆಳಗೆ ಸಾಲಾಗಿ ಮೈಮುರಿಯುತ್ತ , ನರಳುತ್ತ ಕಾಲು ಮುರಿದುಕೊಂಡು ಬಿದ್ದುಕೊಂಡಿವೆ. ಗಣಿಯ ಸದ್ದು ಅಡಗಿದರೇನಾಯ್ತು.. ಹಸಿವಿನ ಹದ್ದು ಹಾರಾಡುತಿದೆ.
ಎಲ್ಲಿಗೋ ಹೊರಟು ನಿಂತಿದ್ದಾರೆ .. (Sanduru Stories)
ಸಂಡೂರಿನ ಅದೇ ಹಳೆಯ ಬಸ್ ಸ್ಟ್ಯಾಂಡಿನಲ್ಲಿ ನೂರು , ಐನೂರು, ಸಾವಿರದ ನೋಟುಗಳನ್ನು ಎಣಿಸಿದ ಜನರು ಹಳೆಯ ಚಾದರು, ಪಾತ್ರೆ , ಈಚಲು ಚಾಪೆಗಳೊಂದಿಗೆ ಎಲ್ಲಿಗೋ ಹೊರಟು ನಿಂತಿದ್ದಾರೆ.
ಸಿಂಬಳ ಸುರಿಸುವ ಕೂಸುಗಳ ಮೂಗು ಒರೆಸುವುದ ಮರೆತ ಅವ್ವಂದಿರು, ಬೋಳಾದ ಗುಡ್ಡ ಅದರ ಕೆಳಗಿನ ಒಂದು ಕಾಲದ ಹೊಲಗಳೆಡೆಗೆ ನೋಡಿ ನಿಟ್ಟುಸಿರುಗೈಯ್ಯುತ್ತಿದ್ದಾರೆ.
ಸಾಲಿ ಬಿಟ್ಟು ಲೋಡು ಮಾಡುವುದನ್ನು ಕಲಿತ ಹುಡುಗರಿಗೆ ಅಕ್ಷರಗಳು ಮರೆತು ಹೋಗಿವೆಯಾದರೂ ಬರುವ ಬಳ್ಳಾರಿ-ಧರ್ಮಸ್ಥಳದ ಬಸ್ಸಿನಲ್ಲಿ ಎಲ್ಲೆಲ್ಲಿ ಹೇಗೆ ಸೀಟು ಹಿಡಿಯಬೇಕೆಂಬುದರ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ.
ಈಗ ಬರೀ ನೆನಪು ಮಾತ್ರ (Sanduru Stories)
ಗಣಿಧಣಿಗಳ ಹಣವನ್ನು ಗೋಣಿಚೀಲದಲ್ಲಿ ತುಂಬುತ್ತಿದ್ದ ಸುದ್ದಿ ಎಲ್ಲವೂ ಈಗ ಬರೀ ನೆನಪು ಮಾತ್ರ. ಹೌದು, ಗಣಿಕಳ್ಳರನ್ನು ಹೊತ್ತೊಯ್ದ ಪೊಲೀಸ್ ಜೀಪುಗಳು , ಹುಡುಗರ ತಲೆಯಲ್ಲಿ ನೂರೆಂಟು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಗಣಿ ಕಳ್ಳರನ್ನು ಬಂಧಿಸಿದರು ನಿಜ. ಆದರೆ… ಜನರ ಹಸಿವನ್ನೇಕೆ ಬಂಧಿಸದೆ ಬಿಟ್ಟು ಹೋದರು? ಎಂಬಂಥ ನಾನಾ ಪ್ರಶ್ನೆಗಳಿವೆ.
ಊರಿನ ಕತೆಗಳು ಒಂದಾ..ಎರಡಾ..? (Sanduru Stories)
ವಯಸ್ಸಿದ್ದಾಗ ಉರಿದಾಡಿ, ಜಿಗಿದಾಡಿ ಮೆರೆದ ಕಟ್ಟುಮಸ್ತಾದ ಆಳೊಬ್ಬ ವಯಸ್ಸಾಗಿ ಗಾಯಗೊಂಡ ತನ್ನ ಕೈಕಾಲುಗಳಿಗೆ ಉಗುಳು ಹಚ್ಚಿ ಸವರಿಕೊಳ್ಳುತ್ತ ನಿಟ್ಟುಸಿರು ಬಿಡುತ್ತಿದ್ದಾನೆ.ಯುದ್ಧ ಮುಗಿದ ನಂತರದ ಸ್ಥಿತಿಯ ಊರಿನ ಕತೆಗಳು ಒಂದಾ..ಎರಡಾ..?
ಬಿ.ಶ್ರೀನಿವಾಸ