ಹರಿಹರ: ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣಾದಾಯಕವಾಗಿದ್ದ ವಂದೇ ಮಾತರಂ ಗೀತೆ ರಚನೆ ಯಾಗಿ 150ನೇ ವರ್ಷದ ಸಂಭ್ರಮಾಚರಣೆ ಮಾಡುತ್ತಿರುವ ಸಂಘ ಪರಿವಾರ ಹಾಗೂ ಬಿಜೆಪಿಯವರು ದೇಶದಲ್ಲಿ ಇನ್ನೂ ಜೀವಂತವಾಗಿರುವ ಅಸ್ಪøಶ್ಯತೆ ನಿವಾರಣೆಗೂ ಆಧ್ಯತೆ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆಗ್ರಹಿಸಿದ್ದಾರೆ.
ವಂದೇ ಮಾತರಂ ಗೀತೆ ಸಂಭ್ರಮಾಚರಣೆಗಾಗಿ ಇಡೀ ದೇಶದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಯವರು ಆಂದೋಲನದ ರೀತಿಯಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿ ಶಕ್ತಿ ಮೀರಿ ಶ್ರಮಿಸುತ್ತಿರುವುದು ಸಂತಸದ ವಿಷಯವೇ ಆಗಿದೆ ಎಂದು ಅವರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ ಇಂದಿಗೂ ಹರಿಹರ ಸೇರಿದಂತೆ ದೇಶದ ಬಹುತೇಕ ಗ್ರಾಮೀಣ ಭಾಗದಲ್ಲಿ ದಲಿತರಿಗೆ ಕ್ಷೌರ ಮಾಡಲು, ದೇವಸ್ಥಾನಗಳಲ್ಲಿ, ಹೋಟಲ್ ಗಳಲ್ಲಿ ಪ್ರವೇಶಿಸಲು ಅವಕಾಶ ಸಿಗುತ್ತಿಲ್ಲ. ಗ್ರಾಮೀಣ ಭಾಗದ ಜನತೆ ಕ್ಷೌರ ಮಾಡಿಸಲು ಅಕ್ಕಪಕ್ಕದ ದೊಡ್ಡ ಗ್ರಾಮ ಅಥವಾ ಪಟ್ಟಣ, ನಗರಗಳಿಗೆ ತೆರಳಬೇಕಿರುವುದು ಸಂಘ ಪರಿವಾರದವರಿಗೆ ಕಾಣುತ್ತಿಲ್ಲವೆ? ಎಂದು ಅವರು ಪ್ರಶ್ನಿಸಿದ್ದಾರೆ.
ಧರ್ಮ, ಜಾತಿ, ವರ್ಣ, ಪ್ರಾಂತ್ಯ, ಲಿಂಗಾಧಾರಿತವಾಗಿ ದೇಶದಲ್ಲಿ ಈಗಲೂ ದಲಿತರು, ದುರ್ಬಲರ ಮೇಲೆ ಸವರ್ಣೀಯರು ಅತ್ಯಾಚಾರ, ದೌರ್ಜನ್ಯ, ಕೊಲೆ, ಸುಲಿಗೆ ಮಾಡುತ್ತಾ ಅಟ್ಟಾಹಾಸ ಮೆರೆಯುತ್ತಿದ್ದಾರೆ. ಇಂತಹ ಮನುಷ್ಯ ವಿರೋಧಿ, ದೇಶದ ಪ್ರಗತಿಗೆ ಕಂಟಕಮಯವಾಗಿರುವ ಜ್ವಲಂತ ಸಮಸ್ಯೆ ನಿವಾರಣೆಗೆ ಸಂಘ ಪರಿವಾರದವರು ಏನು ಮಾಡಿದ್ದಾರೆಂಬುದು ಬಯಲಾಗಬೇಕಿದೆ.
Read also : ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ
ಮರ್ಯಾದೆ ಹತ್ಯೆ ತಡೆಗೆ ಕಾನೂನು ಸ್ವಾಗತ: ಮರ್ಯಾದೆ ಹತ್ಯೆ ತಡೆಯಲಯ ರಾಜ್ಯ ಸರ್ಕಾರ ಕರ್ನಾಟಕ ವಿವಾಹ ಆಯ್ಕೆಯ ಸ್ವಾತಂತ್ರ್ಯ ಮತ್ತು ಗೌರವ ಹಾಗೂ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧಗಳ ತಡೆ ಮತ್ತು ನಿಷೇಧ ವಿಧೇಯಕ, 2026 (ಇವ ನಮ್ಮವ, ಇವ ನಮ್ಮವ ಕಾನೂನು-2026) ಮಂಡಿಸುತ್ತಿರುವುದನ್ನು ಅವರು ಸ್ವಾಗತಿಸಿದ್ದಾರೆ.
