ದಾವಣಗೆರೆ (Davangere District) : ರಾಜ್ಯಗಳ ಅಸ್ಮಿತೆ, ಹಕ್ಕು, ಪಾಲಿನ ರಕ್ಷಣೆ, ಪ್ರಜಾಸತ್ತೆ, ಸಂವಿಧಾನ ಉಳಿವಿಗಾಗಿ ಸೆ.14 ರಂದು ಬೆಂಗಳೂರಿನ ಆರ್. ವೃತ್ತದಲ್ಲಿರುವ ಯುವಿಸಿಇ ಅಲುಮ್ನಿ ಹಾಲ್ನಲ್ಲಿ ಸಂಚಲನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟ ಉಳಿಸಿ ಆಂದೋಲನದ ಪ್ರೋ .ಎಸ್.ಜಿ. ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಗಳ ಅಸ್ಮಿತೆ, ಹಕ್ಕು, ಪಾಲಿನ ರಕ್ಷಣೆ, ಪ್ರಜಾಸತ್ತೆ, ಸಂವಿಧಾನ ಉಳಿವಿಗಾಗಿ ರಾಷ್ಟ್ರೀಯ ಅಭಿಯಾನ ನಡೆಸಲಾಗುವುದು. ಎಲ್ಲ ಜಿಲ್ಲೆಯಲ್ಲಿ ಸಮಾವೇಶ, ಅಭಿಯಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಂಚಲನಾ ಸಮಾವೇಶದಲ್ಲಿ ಸುಪ್ರೀಂ ಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡರು ಅಧ್ಯಕ್ಷತೆ ವಹಿಸಲಿದ್ದಾರೆ. ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್ದಾಸ್, ಖ್ಯಾತ ಚಿಂತಕ ಮತ್ತು ಸಾಹಿತಿ ದೇವನೂರು ಮಹದೇವ, ಪ್ರೋ ರವಿವರ್ಮಕುಮಾರ್, ಜಿ. ರಾಮಕೃಷ್ಣ ಇತರರು ಭಾಗವಹಿಸುವರು. ಬೆಂಗಳೂರಿನ ಸಮಾವೇಶದ ನಂತರ ದೆಹಲಿಯಲ್ಲಿ ಇದೇ ತಿಂಗಳ ಮೂರನೇ ವಾರದಲ್ಲಿ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
Read also : Davanagere | ಡಾ.ಬಿ.ಆರ್. ಅಂಬೇಡ್ಕರ್ ನಿಗಮ : ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಕಳೆದ ಹತ್ತು ವರ್ಷದಿಂದ ಬಹುತ್ವ ಭಾರತದ ಅಸ್ಮಿತೆಗಳಾಗಿರುವ ಭಾಷೆ, ಸಂಸ್ಕøತಿ, ಧರ್ಮ ವಿನಾಶ ಮಾಡುವ ಕಾರ್ಯ ನಡೆಯುತ್ತಿದೆ. ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಆತಂಕ ಒಡ್ಡುವ ಯತ್ನ ನಡೆದಿದ್ದರೂ ಸಂವಿಧಾನ, ಪ್ರಜಾ ತಂತ್ರ ವ್ಯವಸ್ಥೆ ಬಲವಾಗಿದೆ. ಇದೇ ಸ್ಥಿತಿ ಮುಂದುವರೆದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಗಣತಂತ್ರ ವ್ಯವಸ್ಥೆಗೆ ಧಕ್ಕೆ ಉಂಟಾಗುವುದನ್ನ ತಪ್ಪಿಸುವ ಉದ್ದೇಶದಿಂದ ಪ್ರಜಾಸತ್ತೆ, ಸಂವಿಧಾನ ಉಳಿವಿಗಾಗಿ ರಾಷ್ಟ್ರೀಯ ಅಭಿಯಾನ ನಡೆಸ ಲಾಗುತ್ತಿದೆ ಎಂದು ತಿಳಿಸಿದರು.
ಒಂದು ದೇಶ, ಒಂದು ಭಾಷೆ , ಒಂದು ಸಂಸ್ಕೃತಿ ಎಂಬ ಏಕಾತ್ಮಕತೆಯ ದೃಷ್ಟಿ ಹೊಂದಿರುವ ಕೇಂದ್ರ ಸರ್ಕಾರ ಬಹುತ್ವ ಭಾರತದ ನಾಶ ಮಾಡುವ, ಸಂವಿಧಾನದ ಆಶಯಗಳನ್ನೇ ಹಿಸುಕಿ ಹಾಕುವ ಯತ್ನದಲ್ಲಿದೆ. ರಾಜ್ಯಗಳಲ್ಲಿ ಬೇರೆ ಪಕ್ಷದ ಸರ್ಕಾರವಿದ್ದಲ್ಲಿ ರಾಜ್ಯಪಾಲರ ಮೇಲೆ ಒತ್ತಡ ಹೇರಿ, ಕಚೇರಿಯನ್ನೇ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಜನಬೆಂಬಲ ಹೊಂದಿರುವ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರವನ್ನೇ ಕಿತ್ತು ಹಾಕುವ ಕುತಂತ್ರ ನಡೆಸುತ್ತಿದೆ ಎಂಬುದಕ್ಕೆ ದೆಹಲಿ, ಈಗ ಕರ್ನಾಟಕದಲ್ಲಿನ ವಿದ್ಯಮಾನಗಳೇ ಸಾಕ್ಷಿ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಕಡ್ಡಿಯನ್ನೇ ಗುಡ್ಡ ಮಾಡಲಾಗುತ್ತಿದೆ. ಸುಳ್ಳನ್ನೇ ಪದೆ ಪದೇ ಹೇಳುವ ಮೂಲಕ ಸತ್ಯ ಎಂದು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾಗಿರುವ ಸರ್ಕಾರವನ್ನೇ ಅತಂತ್ರಗೊಳಿಸುವ ಪ್ರಯತ್ನ, ಸಂವಿಧಾನದ ಆಶಯ, ಪ್ರಜಾತಂತ್ರ ನಾಶ, ದುರ್ಬಲಗೊಳಿಸುವ ಮಾಡುವ ಕೆಲಸ ಆತಂಕಕಾರಿ ಎಂದು ತಿಳಿಸಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡು ವಂತೆ ಮಾಡಲಾಗಿದೆ. ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದು ತಪ್ಪಲ್ಲ. ಆದರೆ, ತರಾತುರಿಯ ಬಗ್ಗೆ ಆಕ್ಷೇಪ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆಂದೋಲನದ ಜಾಣಗೆರೆ ವೆಂಕಟರಾಮಯ್ಯ, ರುದ್ರಪ್ಪ ಹನಗವಾಡಿ, ಎಂ.ಟಿ. ಸುಭಾಶ್ಚಂದ್ರ, ಬಿ. ವೀರಣ್ಣ, ಪ್ರೋ. ಎ.ಬಿ. ರಾಮಚಂದ್ರಪ್ಪ, ನಿರಂಜನ್ ಇತರರು ಇದ್ದರು.