Kannada News | Dinamaana.com | 21-07-2024
ಮಾದರಿ ಪ್ರಜಾಪ್ರಭುತ್ವ ಬೃಹತ್ ರಾಷ್ಟ್ರ ಭಾರತ , ಭವಿಷ್ಯದ ಭಾರತವನ್ನು ಕಟ್ಟಲು ಮಕ್ಕಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಧೈರ್ಯ,ಆತ್ಮವಿಶ್ವಾಸ ಬೆಳಸಲು ಸಹಕಾರಿ (School Parliament)
“ಇಂದಿನ ಮಕ್ಕಳೇ ಮುಂದಿನ ನಾಯಕರು”ಎನ್ನುವಂತೆ , ಭವಿಷ್ಯದ ಭಾರತವನ್ನು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ನಾಯಕತ್ವ, ಧೈರ್ಯ , ಆತ್ಮವಿಶ್ವಾಸದ ಗುಣಗಳನ್ನು ಬೆಳೆಸುವಲ್ಲಿ ಶಾಲಾ ಸಂಸತ್ತಿನ ಪಾತ್ರ ಪ್ರಮುಖವಾಗಿದೆ.
ಶಾಲೆಯನ್ನು ಜವಾಬ್ದಾರಿಯುತವಾಗಿ ನಡೆಸಿಕೊಳ್ಳುವುದು ಹೇಗೆ? ಶಾಲೆಯ ಮೂಲಭೂತ ಅಗತ್ಯಗಳು ಯಾವುವು? ಶಿಕ್ಷಕರ ಪಾತ್ರವೇನು? ಪೋಷಕರ ಪಾತ್ರವೇನು? ಸಮುದಾಯಗಳ ಪಾತ್ರವೇನು? ಸರ್ಕಾರಗಳ ಪಾತ್ರವೇನು? ಎನ್ನುವ ಪ್ರಜ್ಞೆ ಚಿಕ್ಕವಯಸ್ಸಿನಲ್ಲೇ ಶಾಲಾ ಸಂಸತ್ತಿನ ಮೂಲಕ ಜಾಗೃತಗೊಳಿಸಲು ಶಾಲಾ ಸಂಸತ್ತಿನಂತಹ ವೇದಿಕೆ ಪ್ರಮುಖ ಪಾತ್ರ ವಹಿಸುತ್ತವೆ.
ವ್ಯಕ್ತಿತ್ವ ವಿಕಸನಕ್ಕೆ ಪೂರಕ (School Parliament)
ಮಕ್ಕಳ ವಿಕಾಸಕ್ಕೆ , ಕಲಿಕೆ ಒಂದೇ ಮಾನದಂಡ ವಾಗುವುದಿಲ್ಲ ಅದರೊಟ್ಟಿಗೆ ಮಗುವಿನ ನಾಯಕತ್ವದ ಗುಣಗಳು, ವರ್ತನೆ, ಸಹಕಾರ, ಸೇವಾ ಮನೋಭಾವನೆ, ಹೊಂದಾಣಿಕೆ. ಔದಾರ್ಯತೆ, ಅಂತಃಕರಣದ ಮೌಲ್ಯಗಳು, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ,ಇವುಗಳೆಲ್ಲವೂ ಕೂಡ ಮಗುವಿನ ವಿಕಾಸ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದಂತಹ ಅಂಶಗಳಾಗಿವೆ.
ಸತ್ಪ್ರಜೆಗಳನ್ನಾಗಿಸಲು (School Parliament)
ಪ್ರಜಾಪ್ರಭುತ್ವದ ಆಶಯಗಳನ್ನು , ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವಂತಹ ಕರ್ತವ್ಯ ಮತ್ತು ಜವಾಬ್ದಾರಿ ಶಿಕ್ಷಕರದಾಗಿರುತ್ತದೆ. ಇದರಿಂದ ಭವಿಷ್ಯದಲ್ಲಿ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ರಾಷ್ಟ್ರಕ್ಕೆ ಅರ್ಪಿಸಬಹುದಾಗಿದೆ.
ಶಾಲೆಗಳಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ವರ್ಷಪೂರ್ತಿ ಜರುಗುತ್ತವೆ, ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಶಿಕ್ಷಕರ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮದ ಪೂರ್ವ ತಯಾರಿ , ಕಾರ್ಯಕ್ರಮದ ಸಿದ್ಧತೆಗಳನ್ನು ರೂಪಿಸಲು ತೊಡಗಿಕೊಳ್ಳಿಸುವುದು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ.ಈ ಮೂಲಕ ಪ್ರತಿ ಮಕ್ಕಳಿಗೆ ತಮ್ಮ ಜವಾಬ್ದಾರಿಯನ್ನ ನಿರ್ವಹಣಾ ಕಲಿಕೆಗೆ ಶಾಲಾ ಸಂಸತ್ತು ಪೂರಕ.
ಮಕ್ಕಳ ಶಾಲಾ ಸಂಸತ್ತು(School Parliament)
ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಸರ್ಕಾರದ ಮಾದರಿಯಲ್ಲಿ ಇಂದು ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ಇರುವಂತಹ ಶಾಲಾ ಹಂತದ ಮಕ್ಕಳ ಸರ್ಕಾರ. ಇಲ್ಲಿ ಮಕ್ಕಳೇ,ಆಯ್ಕೆದಾರರು ಮತ್ತು ಪ್ರತಿನಿಧಿಗಳಾಗಿರುತ್ತಾರೆ. ಇವರು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಶಾಲಾ ಸಂಸತ್ತಿನ ಮೂಲಕ ಈಡೇರಿಸಿಕೊಳ್ಳುತ್ತಾರೆ.
ಆಯ್ಕೆ ಕ್ರಮ (School Parliament)
ವರ್ಷಕ್ಕೊಮ್ಮೆ ಶಾಲಾ ಸಂಸತ್ತು ಪ್ರತಿ ಶಾಲೆಗಳಲ್ಲಿ ರಚನೆಯಾಗುತ್ತದೆ. ಚುನಾವಣೆಗೆ ಅಧಿಸೂಚನೆ, ವಿದ್ಯಾರ್ಥಿ ಮತದಾರರ ಪ್ರಕಟಣೆ, ನಾಮಪತ್ರ ಸಲ್ಲಿಕೆ,ನಾಮಪತ್ರ ಪರಿಶೀಲನೆ, ನಾಮಪತ್ರ ವಾಪಸ್ ಪಡೆಯುವುದು, ಅವಿರೋಧ ಆಯ್ಕೆ , ಅಂತಿಮ ಚುನಾವಣಾ ಕಣದಲ್ಲಿ ಉಳಿದವರ ಪಟ್ಟಿ ಮತ್ತು ಚಿಹ್ನೆಗಳ ಪ್ರಕಟಣೆ ಬಹಿರಂಗ, ಶಾಲಾ ಹಂತದ ಪ್ರಚಾರ ಕಾರ್ಯ, ಪ್ರಚಾರ ಕಾರ್ಯ ಮುಕ್ತಾಯ, ನಂತರ ಚುನಾವಣೆ (ಮತದಾನ) ಕಾರ್ಯ, ಮತದಾನದ ಎಣಿಕೆ, ಫಲಿತಾಂಶ ಘೋಷಣೆ, ಶಾಲಾ ನೂತನ ಶಾಲಾ ಸಂಸತ್ತಿನ ಮೊದಲ ಸದಸ್ಯರ ಸಭೆ, ಅದರಲ್ಲಿ ಮುಖ್ಯಮಂತ್ರಿ ,ಉಪಮುಖ್ಯಮಂತ್ರಿ, ಶಿಕ್ಷಣ ಮಂತ್ರಿ ,ಹಣಕಾಸು ಮಂತ್ರಿ, ಕ್ರೀಡಾ ಮಂತ್ರಿ, ಪ್ರವಾಸ ಮಂತ್ರಿ, ಆಹಾರ ಮಂತ್ರಿ, ಆರೋಗ್ಯ ಮಂತ್ರಿ, ಹೀಗೆ ಮಂತ್ರಿಗಳ ಆಯ್ಕೆ ನೆಡಸಿ ನಂತರ ಪ್ರಮಾಣವಚನ ಬೋಧನಾ ಕಾರ್ಯ ನಡೆಯುತ್ತದೆ.
ಪ್ರಜಾಪ್ರಭುತ್ವ ಮಾದರಿಯ ದೇಶ ಚುನಾವಣೆಗಳನ್ನು ಹೇಗೆ ನಡೆಸುತ್ತದೆಯೋ ಅದೇ ಪ್ರಕಾರ ಶಾಲಾ ಸಂಸತ್ತು ರಚನೆಯಾಗುತ್ತದೆ. ಇವುಗಳ ಮಧ್ಯೆ ವಿರೋಧ ಪಕ್ಷದ ನಾಯಕನ ಆಯ್ಕೆಯೂ ಕೂಡ ನಡೆಯುತ್ತದೆ. ಶಾಲಾ ಸಂಸತ್ತು ರಚನೆಯ ಉದ್ದೇಶಗಳು. ಮಕ್ಕಳಲ್ಲಿ ನಾಯಕತ್ವ ,ಆತ್ಮವಿಶ್ವಾಸ, ಧೈರ್ಯ ಜವಾಬ್ದಾರಿಗಳ ಗುಣ ಬೆಳೆಸುವುದು.
ಮಕ್ಕಳನ್ನು ಈಗಿನಿಂದಲೇ ಸಜ್ಜುಗೊಳಿಸುವುದು (School Parliament)
ಪ್ರಜ್ಞಾವಂತ ನಾಗರಿಕರಾಗಲು ಮಕ್ಕಳನ್ನು ಈಗಿನಿಂದಲೇ ಸಜ್ಜುಗೊಳಿಸುವುದು. ಶಾಲೆಯ ಸಮಸ್ಯೆಗಳಿಗೆ ಗಟ್ಟಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವುದು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆ ತರಲು ಪ್ರಯತ್ನಿಸುವುದು.
ಪೋಷಕರ ಸಭೆ, ಎಸ್ ಡಿ ಎಂ ಸಿ ಸಭೆ, ಮಕ್ಕಳ ಗ್ರಾಮ ಸಭೆ, ವಾರ್ಡ್ ಸಭೆಗಳಲ್ಲಿ ಭಾಗವಹಿಸಿ ಶಾಲಾ ಸಮಸ್ಯೆಗಳನ್ನು ಚರ್ಚಿಸುವುದು. ಶಾಲೆಯ ಸಮಗ್ರ ಕ್ರಿಯಾ ಯೋಜನೆ ರಚನೆಯಲ್ಲಿ ಪಾಲ್ಗೊಂಡು ಅಗತ್ಯ ಸಹಕಾರ ಸಲಹೆಯನ್ನ ನೀಡುವುದು.ಶಾಲೆ ,ಸಮುದಾಯ, ಸ್ಥಳೀಯ ಸಂಸ್ಥೆಗಳು, ಜನಪ್ರತಿನಿಧಿಗಳ ಜೊತೆ ಕೊಂಡಿಯಾಗಿ ಕಾರ್ಯನಿರ್ವಹಿಸುವುದು.
ವೈಚಾರಿಕತೆಯ ನಾಡನ್ನು ಕಟ್ಟುವ ಕಾರ್ಯ (School Parliament)
ಮಕ್ಕಳಲ್ಲಿ ಇರುವಂತಹ ಕೇಳಿರಿಮೆ,ಹಿಂಜರಿಕೆ, ಅಂಜು ಬುರುಕುತನ ದಂತಹ ಮನೋಭಾವನೆಗಳನ್ನು ಹೋಗಲಾಡಿಸಿ ಅವರಿಗೆ ಪ್ರೇರೇಪಿಸುವುದು. ನಾವೆಲ್ಲರೂ ಜಾತಿ, ಧರ್ಮ, ಪಂಥಗಳ ಸಂಕೋಲೆಗಳನ್ನು ಕಳಚಿ ಸಹೋದರರಂತೆ ಒಟ್ಟಾಗಿ ಬಾಳಬೇಕು ಎಂಬ ಭಾವನೆಯನ್ನು ಮೂಡಿಸುವುದು. ಮಕ್ಕಳಲ್ಲಿ ಈಗಿನಿಂದಲೇ ವೈಚಾರಿಕತೆಯ, ವೈಜ್ಞಾನಿಕತೆಯ, ನಾಡನ್ನು ಕಟ್ಟುವ ಕಾರ್ಯಕ್ಕೆ ಪ್ರೇರೇಪಿಸುವುದು.
ಶಾಲಾ ಸಂಸತ್ತಿನಿಂದ ಆಗುವ ಉಪಯೋಗಗಳು (School Parliament)
ಮಕ್ಕಳಲ್ಲಿ ಅಭಿವ್ಯಕ್ತಿ, ಪರಸ್ಪರ ಗೌರವ, ಮಾತುಗಾರಿಕೆ, ವರ್ತನೆಯಲ್ಲಿ ಬದಲಾವಣೆಯ ಕೌಶಲಗಳು ಅಭಿವೃದ್ಧಿ ಹೊಂದುತ್ತವೆ.ಶಾಲೆಯಲ್ಲಿ ಶಿಸ್ತಿನ ವಾತಾವರಣ ನಿರ್ಮಾಣವಾಗುತ್ತದೆ. ಮಕ್ಕಳಲ್ಲಿ ಆರೋಗ್ಯಕರವಾದ ಕಲಿಕಾ ವಾತಾವರಣ ಕಲ್ಪಿಸುತ್ತದೆ. ಮಾನವೀಯ ಮೌಲ್ಯಗಳ ಗುಣಗಳು ಮಕ್ಕಳಲ್ಲಿ ಜಾಗೃತಗೊಳ್ಳುತ್ತವೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸಹಕಾರ.
ಶಾಲೆಯ ಪಾತ್ರ (School Parliament)
ಶಾಲೆಯ ಎಲ್ಲಾ ಮಕ್ಕಳನ್ನು ಚುನಾವಣಾ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು, ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರ ಜವಾಬ್ದಾರಿ ಆಗಿರುತ್ತದೆ. ಮಕ್ಕಳ ಪ್ರತಿಭೆ ,ಆಸಕ್ತಿ ಅವರ ಸಾಮರ್ಥ್ಯಕ್ಕೆ ಅನುಗುಣವಾದಂತಹ ಖಾತೆಗಳನ್ನು ಹಂಚುವುದು ಮತ್ತು ಪ್ರಮಾಣವಚನ ಬೋಧಿಸುವುದು.
ಶಾಲಾ ಮಂತ್ರಿಮಂಡಲವು ತಿಂಗಳಿಗೊಮ್ಮೆಯಾದರೂ ಸಭೆ ಸೇರಿ ಶಾಲಾ ಹಂತದ ಸಮಸ್ಯೆಗಳನ್ನು ಚರ್ಚಿಸುವುದು. ಪ್ರತಿ ಸಭೆಯ ಚರ್ಚಾಂಶಗಳನ್ನು ದಾಖಲೀಕರಣ ಮಾಡುವುದು. ಶಾಲೆಯ ಕಾರ್ಯಕ್ರಮಗಳಲ್ಲಿ ಮಂತ್ರಿಮಂಡಲವನ್ನು ಬಳಕೆ ಮಾಡುವುದು. ಗ್ರಾಮ ಪಂಚಾಯಿತಿ ,ನಗರಸಭೆ, ಪುರಸಭೆ, ವಾರ್ಡ್ ಸಭೆಗಳಲ್ಲಿ ತಮ್ಮ ಹಕ್ಕುಗಳನ್ನು ಮಂಡಿಸಿ ಮನವಿಗಳನ್ನು ಸಲ್ಲಿಸುವುದು.. ಇತ್ತೀಚಿಗೆ ದೇಶದಲ್ಲಿ ಚುನಾವಣೆಗಳು ನಡೆದು ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯಲು (School Parliament)
ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡಲು ಚುನಾವಣಾ ಆಯೋಗ ಅನೇಕ ರೀತಿಯ ಜಾಗೃತಿ ಕಾರ್ಯಕ್ರಮವನ್ನು ಮಾಡಿದರೂ ಕೂಡ ,ಮತದಾನ ಪ್ರಮಾಣದಲ್ಲಿ ಚೇತರಿಕೆ ಕಾಣಲಿಲ್ಲ . ಆದರೆ ಶಾಲೆಯಲ್ಲಿ ರಚನೆಯಾಗುವ “ಶಾಲಾ ಸಂಸತ್ತು “, ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಳು ಮತದಾನ ಮಾಡುವ ಸಂಭ್ರಮ, ಸಡಗರ, ಉತ್ಸಾಹ, ಹುರುಪು ನಮ್ಮೆಲ್ಲರಿಗೂ ಚುನಾವಣೆಯ ಮಹತ್ವವನ್ನ, ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಮಕ್ಕಳ ಶಾಲಾ ಸಂಸತ್ತು ನಮ್ಮೆಲ್ಲರಿಗೂ ಮಾದರಿಯಾಗಿದೆ. ಭವಿಷ್ಯದ ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಶಾಲಾ ಸಂಸತ್ತು ತಳಹದಿಯಾಗಿದೆ.
ನಾಗರಾಜ್ ಹೆಚ್ , ಶಿಕ್ಷಕರು