ದಾವಣಗೆರೆ: ರಜಾ-ಉಲ್-ಮುಸ್ತಫಾ ನಗರ ಸಂಪರ್ಕಿಸುವ ರಿಂಗ್ ರಸ್ತೆ ಗದ್ದೆಯಂತೆ ಭಾಸವಾಗುತ್ತಿದ್ದು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಎಸ್ ಡಿ ಪಿ ಐ ಸದಸ್ಯರು ಪಾಲಿಕೆ ಆಯುಕ್ತರು ಹಾಗೂ ದೂಡ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಕಳೆದ ಒಂದು ವರ್ಷದ ಹಿಂದೆ ರಸ್ತೆ ನಿರ್ಮಿಸುವ ಉದ್ದೇಶದಿಂದ ರಾಮಕೃಷ್ಣ ಹೆಗಡೆ ನಗರ ನಿವಾಸಿ ಗಳ ಮನೆಗಳನ್ನು ತೆರವುಗೊಳಿಸಲಾಯಿತು. ರಜಾ-ಉಲ್ -ಮುಸ್ತಫಾ ನಗರಕ್ಕೆ ಹೋಗಬೇಕಾದರೆ ಇದೇ ರಸ್ತೆ ಉಪಯೋಗಿಸಬೇಕಾಗಿದೆ. ಬೇಸಿಗೆ ಕಾಲದಲ್ಲಿ ದೂಳು ತುಂಬಿದ ಮರಳುಗಾಡಿ ನಂತಾದರೆ. ಈಗ ಮಳೆಗಾಲ ನಾಟಿ ಮಾಡಲು ಸೂಕ್ತವಾದ ಗದ್ದೆಯಂತೆ ಭಾಸವಾಗುತ್ತಿದೆ, ದಿನ ಬೆಳಗಾದರೆ ಶಾಲಾ ಮಕ್ಕಳು ರೋಗಿಗಳು ಮತ್ತು ವೃದ್ಧರು ಇಲ್ಲಿಂದ ಪಾರಾಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಮಳೆ ಬಂದು ನೀರು ತುಂಬಿಕೊಂಡಿದೆ. ಯಾವುದೇ ಬೇರೆ ಸಂಪರ್ಕ ರಸ್ತೆ ಇಲ್ಲದೆ ವಾಹನ ಸವಾರರು ಮತ್ತು ಆಟೋ ಚಾಲಕರು ರಸ್ತೆ ಉಪಯೋಗಿಸುತ್ತಿರುವುದರಿಂದ ಹಲವಾರು ಬಾರಿ ಅಪಘಾತಗಳು ಕೂಡ ಸಂಭವಿಸಿವೆ, ಅದೇ ರೀತಿ ಸೂಕ್ತವಾದ ಸಂಪರ್ಕವಿಲ್ಲದೇ ಕಸದ ಗಾಡಿ ಕೂಡ ಹೋಗದ ಕಾರಣ ಎಲ್ಲಿ ಬೇಕಂದರೆ ಅಲ್ಲಿ ಕಸದ ರಾಶಿ ಬಿದ್ದಿದೆ, ಡೆಂಗ್ಯೂ ಹರಡುವ ಭೀತಿ ಕೂಡ ಹೆಚ್ಚಿದೆ, ಇಲ್ಲಿನ ಜನರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದರು.
ಜನಪ್ರತಿನಿಧಿಗಳು ತಮಗೂ ಮತ್ತು ಇದಕ್ಕೆ ಯಾವುದೇ ಸಂಬಂಧವಿಲ್ಲದಂತೆ ಇದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸದೆ ಇಲ್ಲಿನ ಕಾರ್ಪೊರೇಟರ್ ಆಗಲಿ ಮತ್ತು ಶಾಸಕರಾಗಲಿ ಕಣ್ಣಿದ್ದು ಕುರುಡರಂತಾಗಿದ್ದಾರೆ. ಇದೇ ರಸ್ತೆಯಿಂದಾಗಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಂತೆ ಜೀವನ ನಡೆಸುತ್ತಿರುವರು ಒಂದು ಕಡೆಯಾದರೆ, ತಮ್ಮದಲ್ಲದ ತಪ್ಪಿಗೆ ರಸ್ತೆಯಿಂದ ಪ್ರತಿದಿನ ಸಂಕಷ್ಟ ಎದುಸುತ್ತಿರುವ ವರ್ಗ ಇನ್ನೊಂದು ಕಡೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷ ಮಹಮ್ಮದ್ ಖುಬೈಬ್, ಕಾರ್ಯಕರ್ತರಾದ ಇರ್ಷಾದ್ ಅಹಮದ್ ,ಇಬ್ರಾಹಿಂ ಖಲೀಲ್ಉಲ್ಲ, ಅಬ್ದುಲ್ ಹಫೀಜ್, ಖಾಸೀಂ, ಜಬಿವುಲ್ಲಾ, ಇಮ್ರಾನ್, ಹಾರಿಸ್,ಆದಿಲ್ ಮತ್ತು ಇತರರು ಉಪಸ್ಥಿತರಿದ್ದರು.