ದಾವಣಗೆರೆ (Davanagere ): ನಕಲಿ ದಾಖಲೆ ಸೃಷ್ಟಿಸಿ 5 ಲಕ್ಷ ರೂ.ಗೆ ಶಿಶು ಮಾರಾಟ ಮಾಡಿರುವ ಜಾಲ ಭೇದಿಸಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಮಹಿಳಾ ಠಾಣೆಯ ಪೊಲೀಸರು ವೈದ್ಯ ಸೇರಿದಂತೆ ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಎಂ.ಕೆ.ಮೆಮೋರಿಯಲ್ ಆಸ್ಪತ್ರೆಯ ವೈದ್ಯೆ ಭಾರತಿ, ಶಿಶುವಿನ ತಾಯಿ ಕಾವ್ಯಾ, ಶಿಶು ಖರೀದಿಸಿದ್ದ ಜಯಾ ಮತ್ತು ಪ್ರಶಾಂತ್‌ಕುಮಾರ್ ದಂಪತಿ, ಮಧ್ಯವರ್ತಿಗಳಾದ ವಾದಿರಾಜ್, ಮಂಜಮ್ಮ, ಸುರೇಶ್ ಮತ್ತು ರಮೇಶ್ ಬಂಧಿತ ಆರೋಪಿಗಳು. ವಿಚಾರಣೆ ನಡೆಸಿದ ಪೊಲೀಸರು ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಾರಾಟವಾಗಿದ್ದ ಎರಡೂವರೆ ತಿಂಗಳ ಗಂಡು ಶಿಶುವಿಗೆ ಮಕ್ಕಳ ಆರೈಕೆ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ವ್ಯಕ್ತಿಯೊಬ್ಬರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಈ ದಂಪತಿಯು ಶಿಶುವನ್ನು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಕರೆಯ ಜಾಡು ಹಿಡಿದು ಬೆನ್ನತ್ತಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್.ಕವಿತಾ ನೇತೃತ್ವದ ತಂಡ ವಿನೋಬನಗರದ ಜಯಾ ಪ್ರಶಾಂತ್ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದೆ. ದಂಪತಿ ಒದಗಿಸಿದ ಶಿಶು ಜನನ ಪ್ರಮಾಣ ಪತ್ರವನ್ನು ಆಧರಿಸಿ ಎಂ.ಕೆ.ಮೆಮೋರಿಯಲ್ ಆಸ್ಪತ್ರೆಗೆ ಭೇಟಿ ನೀಡಿದಾಗ ಶಿಶು ಮಾರಾಟದ ವಿಚಾರ ಬಹಿರಂಗಗೊಂಡಿದೆ.
‘ವಿಚ್ಛೇದಿತ ಮಹಿಳೆ ಕಾವ್ಯಾ ಎರಡೂವರೆ ತಿಂಗಳ ಹಿಂದೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಶಿಶುವಿಗೆ ಜನ್ಮ ನೀಡಿದ್ದರು. ದಾವಣಗೆರೆಗೆ ಮರಳಿದ ನಂತರ ಶಿಶು ಮಾರಾಟಕ್ಕೆ ನಿರ್ಧರಿಸಿದ್ದರು. ಎಂಟು ವರ್ಷಗಳಿಂದ ಮಕ್ಕಳಾಗದ ಕೊರಗಿನಲ್ಲಿದ್ದ ದಂಪತಿಯನ್ನು ಮಧ್ಯವರ್ತಿ ವಾದಿರಾಜ್ ಸಂಪರ್ಕಿಸಿದ್ದ. 5 ಲಕ್ಷಕ್ಕೆ ಶಿಶು ಖರೀದಿಸಲು ದಂಪತಿ ಒಪ್ಪಿದ್ದರು. ಎಂ.ಕೆ.ಮೆಮೋರಿಯಲ್ ಆಸ್ಪತ್ರೆಯ ವೈದ್ಯೆ ಭಾರತಿ ಹಾಗೂ ಸಿಬ್ಬಂದಿ ಮಂಜುಳಾ, ನಕಲಿ ಜನನ ಪ್ರಮಾಣ ಪತ್ರಕ್ಕೆ ಸಹಕಾರ ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
Read also : Davanagere | ಶ್ರೀ ಬನ್ನಿ ಮಹಾಂಕಾಳಿ , ವರದಾಂಜನೇಯ ದೇವಸ್ಥಾನದಲ್ಲಿ 11ರಂದು ವಿಶೇಷ ಪೂಜೆ , ಅನ್ನ ಸಂತರ್ಪಣೆ
‘ಜಯಾ ಹಾಗೂ ಪ್ರಶಾಂತ್ ದಂಪತಿಗೆ ಆ.26ರಂದು ಶಿಶು ಜನನವಾಗಿದೆ ಎಂಬುದಾಗಿ ಡಾ.ಭಾರತಿ ದಾಖಲೆ ಸೃಷ್ಟಿಸಿದ್ದರು. ಆಸ್ಪತ್ರೆಯ ದಾಖಲೆಗಳನ್ನು ಆಧರಿಸಿ ಮಹಾನಗರ ಪಾಲಿಕೆಯಲ್ಲಿ ಶಿಶುವಿನ ಜನನ ಪ್ರಮಾಣ ಪತ್ರ ಪಡೆಯಲಾಗಿತ್ತು. ಆರೋಪಿಗಳ ವಿರುದ್ಧ ಬಾಲ ನ್ಯಾಯ ಕಾಯ್ದೆ 2015, ಮಕ್ಕಳ ರಕ್ಷಣಾ ಕಾಯ್ದೆ 2004 ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಾಗಿದೆ’ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.