ಚಿತ್ರದುರ್ಗ(ಹರ್ತಿಕೋಟೆ)ಮಾ 10:
ಕೆ.ಆರ್.ತಿಪ್ಪೇಸ್ವಾಮಿ ಅವರದ್ದು ಸಾಂಸ್ಕೃತಿಕ ರಾಜಕಾರಣದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡು, ಬಹಳ ಸ್ಪಷ್ಟತೆ ಹೊಂದಿದ್ದ ವ್ಯಕ್ತಿತ್ವ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ವಿಶ್ಲೇಷಿಸಿದರು.
ಮೈಸೂರಿನ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ ಚಿತ್ರದುರ್ಗ ಜಿಲ್ಲೆಯ ಹರ್ತಿಕೋಟಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ , ತಿಪ್ಪೇಸ್ವಾಮಿಯವರ ನವೀಕೃತ ಸ್ಮಾರಕ ಮತ್ತು ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಅಪರೂಪದ ವ್ಯಕ್ತಿತ್ವ
ಪಿ.ಆರ್.ತಿಪ್ಪೇಸ್ವಾಮಿ ಅವರದ್ದು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಅಪರೂಪದ ವ್ಯಕ್ತಿತ್ವ. ತಮ್ಮ ಕಲಾಕೃತಿಗಳನ್ನು ಹಣಕ್ಕೆ ಮಾರಾಟ ಮಾಡದೆ ಇತರೆ ಕಲಾವಿದರಿಗೆ ದಾನ ಮಾಡಿ, ಕಲೆ ಮತ್ತು ಕಲೆಗಾರರನ್ನು ಬೆಳೆಸಲು ನೆರವಾದರು. ಆಚಾರ ಮತ್ತು ವಿಚಾರದಲ್ಲಿ
ಸಮತೋಲನ ಹೊಂದಿದ್ದರು ಎಂದು ಮೆಚ್ಚುಗೆ ಸೂಚಿಸಿದರು.
ಪತ್ರಕರ್ತ ಹರ್ತಿಕೋಟೆ ರುದ್ರಣ್ಣ ಅವರ ಕಾಳಜಿ ಮತ್ತು ಶ್ರಮದಿಂದ ಪ್ರತಿಷ್ಠಾನ ಅರ್ಥಪೂರ್ಣವಾಗಿ ಕೆಲಸ ಮಾಡುತ್ತಿದೆ. ಇಂದು ಲೋಕಾರ್ಪಣೆಗೊಂಡಿದ್ದು ಕೇವಲ ಸ್ಮಾರಕ ಅಲ್ಲ. ಕಲಾವಿದರ ಸ್ಫೂರ್ತಿಯ ತಾಣ ಎಂದು ವಿವರಿಸಿದರು.
ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ
ಬೆಂಗಳೂರು ನಗರದ ರಸ್ತೆ ಅಥವಾ ವೃತ್ತಕ್ಕೆ ಹೆಸರು ನಾಮಕರಣಕ್ಕೆ ಬಿಬಿಎಂಪಿಗೆ ಸಿಎಂ ಮೂಲಕ ಸೂಚನೆ ಕೊಡಿಸಬೇಕು ಎನ್ನುವ ಬೇಡಿಕೆ ಇದೆ. ಮೈಸೂರಿನ ಜಾನಪದ ವಸ್ತು ಸಂಗ್ರಹಾಲಯ ಪಿ.ಆರ್.ತಿಪ್ಪೇಸ್ವಾಮಿಯವರೇ ಕಟ್ಟಿದ್ದರಿಂದ ಅದಕ್ಕೆ ಇವರ ಹೆಸರನ್ನು ನಾಮಕರಣ ಮಾಡಿಸಬೇಕು ಹಾಗೂ ಪ್ರತಿಷ್ಠಾನವನ್ನು ಶಾಶ್ವತ ಅನುದಾನದ ಪಟ್ಟಿಗೆ ಸೇರಿಸಬೇಕು ಎನ್ನುವ ಬೇಡಿಕೆಯೂ ಇದೆ. ಈ ಮೂರೂ ಬೇಡಿಕೆಗಳ ಬಗ್ಗೆ ಸಂಬಂಧ ಪಟ್ಟವರ ಜತೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಕೆ.ವಿ.ಪ್ರಭಾಕರ್ ಅವರು ಭರವಸೆ ನೀಡಿದರು.
ಕಾಗಿನೆಲೆ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮೀಜಿ ಅವರ ದಿವ್ಯ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಕೊಪ್ಪಳ ವಿವಿಯ ಉಪಕುಲಪತಿ ಬಿ.ಕೆ.ರವಿ, ಹಿರಿಯ ಪತ್ರಕರ್ತರಾದ ನಾಗಣ್ಣ, ಪ್ರತಿಷ್ಠಾನದ ಅಧ್ಯಕ್ಷರಾದ ರಾಜಶೇಖರ ಕದಂಬ, ಪ್ರತಿಷ್ಠಾನದ ಕಾರ್ಯದರ್ಶಿ ಪತ್ರಕರ್ತರಾದ ರುದ್ರಣ್ಣ ಹರ್ತಿಕೋಟೆ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.