ದಾವಣಗೆರೆ: ಹೆಗಡೆ ನಗರದಿಂದ ಸ್ಥಳಾಂತರಗೊಳಿಸಿರುವ ಸಂತ್ರಸ್ತರಿಗೆ ಮನೆಕೊಡುವವರೆಗೂ ಬಾಡಿಗೆ ಮನೆ ಮಾಡಿ, ಪಾಲಿಕೆಯಿಂದಲೇ ಬಾಡಿಗೆಯ ಹಣ ಭರಿಸಬೇಕು. ಸಂತ್ರಸ್ತರಿಗೆ ತಕ್ಷಣವೇ ಜಾಗ. ಮನೆಗಳ ಹಕ್ಕುಪತ್ರವನ್ನು ಒದಗಿಬೇಕು ಎಂಬಿತ್ಯಾದಿ ಬೇಡಿಕೆಗಳಿಗೆ ಒತ್ತಾಯಿಸಿ ಎತ್ತಂಗಡಿಗೊಂಡ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳ ಸಮಿತಿ, ದಾವಣಗೆರೆ ಸ್ಲಂ ಜನರ ಸಂಘಟನೆ, ಕರ್ನಾಟಕ, ಸ್ಲಂ ಮಹಿಳೆಯರ ಸಂಘಟನೆ-ಬೆಂಗಳೂರು. ದಾವಣಗೆರೆ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ-ದಾವಣಗೆರೆ ಹಾಗೂ ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಪಾಲಿಕೆ ಉಪ ಆಯುಕ್ತರ ಮೂಲಕ ವಸತಿ ಸಚಿವ ಜಮೀರ್ ಅಹಮದ್ ಅವರಿಗೆ ಮನವಿ ಸಲ್ಲಿಸಲಾಯಿತು.
ಹೆಗಡೆ ನಗರದ 500 ಕುಟುಂಬಗಳ ಸಂತ್ರಸ್ತರಿಗೆ ಮನೆ ಕಟ್ಟಿಕೊಡಬೇಕು. ರಸ್ತೆ, ಚರಂಡಿ, ಒಳಚರಂಡಿ, ನೀರು, ನ್ಯಾಯಬೆಲೆ ಅಂಗಡಿ, ಆಸ್ಪತ್ರೆಗಳ ಶಾಲೆ, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಎಷ್ಟು ದಿನಗಳಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಡುತ್ತೇವೆಂಬ ಬಗ್ಗೆ ಲಿಖಿತ ರೂಪದಲ್ಲಿ ಪಾಲಿಕೆ ನೀಡಬೇಕು. ಪ್ರತಿ 3 ತಿಂಳಿಗೊಮ್ಮೆ ಜಿಲ್ಲಾಧಿಕಾರಿ, ನಗರ ಪಾಲಿಕೆ ಆಯುಕ್ತರು ಸಮ್ಮುಖದಲ್ಲಿ ಸಂತ್ರಸ್ತರ ಕುಂದುಕೊರತೆ ಸಭೆ ಆಯೋಜಿಸಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.
ಇದೇ ವೇಳೆ ಮಾತನಾಡಿದ ನೆರಳು ಬೀಡಿ ಕಾರ್ಮಿಕರ ಸಂಘಟನೆಯ ಅಧ್ಯಕ್ಷೆ ಜಬೀನಾ ಖಾನಂ, ಎತ್ತಂಗಡಿಗೊಂಡ ರಾಮಕೃಷ್ಣ ಹೆಗಡೆ ನಗರದಲ್ಲಿ ಮತ್ತು ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಕಳೆದ ಮಾರ್ಚ್ ನಲ್ಲಿ ರಾಮಕೃಷ್ಣ ಹೆಗಡೆ ನಗರ ಸಂತ್ರಸ್ತ ನಿವಾಸಿಗಳು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ ಧರಣಿಯನ್ನು ಕೈಗೊಂಡು ತಮಗೆ ಮನವಿಯನ್ನು ಸಲ್ಲಿಸಲಾಗಿತ್ತು. ಆದರೆ 2024 ರ ಲೋಕಸಭೆ ಚುನಾವಣೆಯ ಮಾದರಿ ನೀತಿಸಂಹಿತೆ ಜಾರಿಗೊಂಡಿದ್ದರಿಂದ ಇದರ ಬಗ್ಗೆ ಮತ್ತೆ ಗಮನಕ್ಕೆ ತರಲಾಗಿರಲಿಲ್ಲ. ಆದರೆ, ಮಾರ್ಚ್ ನಿಂದ ಮೂರು ತಿಂಗಳ ಕಾಲ ಶೇ.40 ಡಿಗ್ರಿ ಬಿಸಿಲಿನಲ್ಲಿ ಜನರು ಬಹಳಷ್ಟು ತೊಂದರೆಯನ್ನು ಅನುಭವಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚ್ಚಿಗೆ ಮಳೆ/ಗಾಳಿಯಿಂದ ಹಲವಾರು ಶೆಡ್ಗಳ ತಗಡಿನ ಶೆಡ್ಗಳು ಹಾರಿ ಹೋಗಿವೆ. ನೀರು, ಬಿಸಿಲು, ಮಳೆ, ಗಾಳಿಯಿಂದ ತೊಂದರೆಯನ್ನು ನೂರಾರು ಕುಟುಂಬಗಳು ಅನುಭವಿಸುತ್ತಿದ್ದಾರೆ. ಮಳೆಗಾಲ ಶುರುವಾದರೆ ಈ ಜನರು ಇನ್ನು ಹೆಚ್ಚಿನ ಸಂಕಷ್ಠ ಪ್ರಾಣ ಹಾನಿಯನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ, ತಕ್ಷಣ ಮನೆ, ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮತ್ತು ಮನೆ ನಿರ್ಮಾಣ ಆಗುವವರೆಗೆ ಪಾಲಿಕೆಯಿಂದ ಕನಿಷ್ಠ ಮನೆ ಬಾಡಿಗೆಯನ್ನಾದರೂ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಮುಖಂಡ ಆವರಗೆರೆ ಚಂದ್ರು, ಎಂ. ಕರಿಬಸಪ್ಪ, ಹೆಗ್ಗೆರೆ ರಂಗಪ್ಪ, ನೂರ್ ಫಾತೀಮಾ, ಶಿರಿನ್ ಬಾನು ಮತ್ತಿತರರಿದ್ದರು.