ದಾವಣಗೆರೆ .ಜ.14 (Davanagere): ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಿದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಅವರು ಕಾಯಕ ನಿಷ್ಠರಾಗಿದ್ದರು. ಅನುಭವ ಮಂಟಪದ ಧೃವತಾರೆ. ವಚನಗಳ ಮೂಲಕ ಜಗತ್ತಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಮೇಯರ್ ಕೆ.ಚಮನ್ ಸಾಬ್ ಹೇಳಿದರು.
ಜಿಲ್ಲಾಡಳಿತ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಲಾದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಜಾತೀಯತೆ, ಆಚಾರ-ವಿಚಾರ ಎಂಬ ಮನೋಭಾವ ಬಿಟ್ಟು ನಾವೆಲ್ಲರೂ ಮನುಷ್ಯರು ಹಾಗೂ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಪಾಲಿಸಬೇಕೆಂದರು.
ಜಿಲ್ಲಾ ಬೋವಿ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಜಯಣ್ಣ ಎಚ್. ಮಾತನಾಡಿ ನಮ್ಮ ಸಮಾಜಕ್ಕೆ ಸರ್ಕಾರದ ಸವಲತ್ತು ಹೆಚ್ಚಾಗಿ ಸಿಗಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಪಿ. ಎನ್.ಲೋಕೇಶ್ ಮಾತನಾಡಿ, ಜಯಂತಿಯ ಆಚರಣೆಯಿಂದ ಸಮುದಾಯದ ಜನ ಒಂದೇ ವೇದಿಕೆಯಲ್ಲಿ ಸೇರಲಿ ಎಂಬ ದೃಷ್ಟಿಯಿಂದ, ಸಮಾನತೆ, ಸಹೋದರತ್ವ, ಬೆಳೆಯಲಿ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಂಘಟಿತರಾಗಿ ಎಂದು ತಿಳಿಸಿದರು.
ಚಿತ್ರದುರ್ಗ ಕಲಾ ಕಾಲೇಜಿನ ಉಪನ್ಯಾಸಕಿ ಡಾ. ಲತಾ ಉಪನ್ಯಾಸ ನೀಡಿ, ಸಿದ್ಧರಾಮೇಶ್ವರರು ಲೋಕೋಪಯೋಗಿ, ಜನಹಿತ ಕಾರ್ಯಗಳಿಂದ ಶರಣ ಸಿದ್ದರಾಮರು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಯಾವ ವ್ಯಕ್ತಿ ಜನಸಮುದಾಯದಲ್ಲಿ ಉಳಿಯುತ್ತಾರೆ, ಆ ವ್ಯಕ್ತಿಯ ನಡೆ-ನುಡಿ ಸತ್ಯವಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು.
ಶಿವಯೋಗಿ ಸಿದ್ಧರಾಮರು ಕಾಯಕದ ಜೊತೆಗೆ ಹಲವಾರು ವಚನಗಳನ್ನು ರಚನೆ ಮಾಡಿದ್ದಾರೆ. ಕೆರೆ-ಕಟ್ಟೆ, ಬಾವಿ ನಿರ್ಮಾಣ, ರಸ್ತೆ ನಿರ್ಮಾಣ ಸೇರಿದಂತೆ ಸಿದ್ಧರಾಮರು ಹೇಳಿದ ಕಾಯಕವನ್ನು ಇಂದಿಗೂ ಸಮಾಜ ಮುಂದುವರೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಜಯಂತಿ ಅಂಗವಾಗಿ ಸುಭಾಸ್ ಮತ್ತು ತಂಡದವರು ಗೀತಗಾಯನ ಪ್ರಸ್ತುತ ಪಡಿಸಿದರು.
ಸಂಕಿರಣ ನೃತ್ಯವಿದ್ಯಾಲಯದ ವಿದ್ಯಾರ್ಥಿಗಳು ನೃತ್ಯ ಮಾಡಿದರು,ಸೌಭಾಗ್ಯ ಕಾರ್ಯಕ್ರಮ ನಿರೂಪಿಸಿದರು.
ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಯೋಜನಾಧಿಕಾರಿ ಆನಂದ್, ಜಿಲ್ಲಾ ಬೋವಿ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಜಯಣ್ಣ ಎಚ್, ಜಿಲ್ಲಾ ಬೋವಿ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ್, ಜಿಲ್ಲಾ ಬೋವಿ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾದ ಎಚ್ ಮಂಜುನಾಥ್, ಬಸವರಾಜ್ , ವೆಂಕಟೇಶಯ್ಯ ,ಜಿಲ್ಲೆಯ ಸಮಾಜದ ಮುಖಂಡರು ಭಾಗವಹಿಸಿದ್ದರು.
Read also : ಸ್ಮಶಾನದಲ್ಲಿ ಅಕ್ರಮ ಮಣ್ಣು ಸಾಗಾಟ : ಕಠಿಣ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ