ದಾವಣಗೆರೆ (Davanagere): ರಾಜ್ಯ ಸರ‍್ಕಾರ ಹೊಸ ಆಯೋಗ ನೆಪದಲ್ಲಿ ಕಾಲಹರಣ ಮಾಡದೆ ಮೂರು ತಿಂಗಳಲ್ಲಿ ನಿಗಧಿತ ಸಮಯದಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಆಗ್ರಹಿಸಿದರು.
ಭಾನುವಾರ ಇಲ್ಲಿನ ಶಿವಯೋಗಾಶ್ರಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಶಕಗಳಿಂದ ಮಾದಿಗ ಸಮುದಾಯ ಒಳಮೀಸಲಾತಿ ಜಾರಿಗೆ ಹೋರಾಟ ನಡೆಸಿಕೊಂಡು ಬರುತ್ತಿದೆ. ಸದಾಶಿವ ಆಯೋಗವು ನಿಖರವಾದ ದತ್ತಾಂಶಗಳನ್ನು ನೀಡಿದ ನಂತರ ಸುಪ್ರೀಂ ಕೋರ್ಟ್ ಇತ್ತೀಚಿಗೆ ಒಳ ಮೀಸಲಾತಿ ಜಾರಿಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಆದೇಶ ಅನುಷ್ಠಾನಗೊಳಿಸಲು ಮೀನಾಮೇಷ ಎಣಿಸುತ್ತಿದ್ದು, ಮೂರು ತಿಂಗಳ ಗಡುವು ತೆಗೆದುಕೊಂಡು ಈಗ ಆಯೋಗ ರಚನೆ ಮಾಡಿದೆ. ಉಳಿದ ಎರಡೂವರೆ ತಿಂಗಳಲ್ಲಿ ಸರ್ಕಾರ ಕೊಟ್ಟ ಮಾತಿನಂತೆ ಒಳಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಶ್ರೀಗುರು ರಾಮದಾಸ್ವಾಮಿ ಆಧ್ಯಾತ್ಮಿಕ ಸೇವಾ ಟ್ರಸ್ಟ್ ವತಿಯಿಂದ ಡಿ.15ರಂದು ನಗರದ ಆದಿ ಕರ್ನಾಟಕ ವಿದ್ಯಾರ್ಥಿ ನಿಲಯದ ಮೈದಾನದಲ್ಲಿ ಹಮ್ಮಿಕೊಂಡಿರುವ ಶ್ರೀಗುರು ರಾಮದಾಸರ 66ನೇ ವರ್ಷದ ಹಾಗೂ ಶ್ರೀ ಕೊಂಡಯ್ಯ ಸ್ವಾಮಿಗಳ 18ನೇ ವರ್ಷದ ಪುಣ್ಯಾರಾಧನೆ ಮತ್ತು 33ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಇದೇ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಮಾದಿಗ ಸಮಾಜದ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾಜ ಬಂಧುಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಹಿರಿಯೂರು ಷಡಾಕ್ಷರಿಮುನಿ ಸ್ವಾಮೀಜಿ ಮಾತನಾಡಿ, ಮಾದಿಗ ಸಮುದಾಯ ಕೇವಲ ಸಾಮಾಜಿಕ ಮಾತ್ರವಲ್ಲ ರಾಜಕೀಯ, ಆರ್ಥಿಕ, ಔದ್ಯೋಗಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿಯೂ ತುಳಿತಕ್ಕೊಳಗಾಗಿದ್ದು, ಸಮುದಾಯ ಈ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆಬರಬೇಕೆAದರೆ ಶಿಕ್ಷಣ ಒಂದೇ ಪರಿಹಾರ ಎಂದು ತಿಳಿಸಿದರು.
ಕಳೆದ ಮರ‍್ನಾಲ್ಕು ದಶಕಗಳಿಂದ ನಮ್ಮ ಮಾದಿಗ ಸಮುದಾಯ ಒಳಮೀಸಲಾತಿಗಾಗಿ ಹೋರಾಟ ನಡೆಸುತ್ತಲೇ ಬಂದಿದೆ. ಈಗ ಸವೋಚ್ಛ ನ್ಯಾಯಾಲಯವು ಒಳ ಮೀಲಸಾತಿಗೆ ಜಾರಿಗೆ ತೀರ್ಪು ನೀಡಿದ್ದು, ಇಲ್ಲಿನ ರಾಜ್ಯ ಸರ್ಕಾರ ಮೂರು ತಿಂಗಳ ಕಾಲಾವಕಾಶ ನೀಡಿದೆ. ಈಗಾಗಲೇ ಮೂರು ದಶಕಗಳ ಕಾಲ ಕಾದಿರುವ ನಮ್ಮ ಸಮುದಾಯ ಇನ್ನೂ ಮೂರು ತಿಂಗಳನ್ನು ಸಹನೆಯಿಂದ ಕಾಯಬೇಕು. ಮತ್ತು ಸರ್ಕಾರವೂ ಕೊಟ್ಟ ಮಾತಿಗೆ ತಪ್ಪಬಾರದು ಎಂದು ಹೇಳಿದರು.
Read also : Davanagere | ಕನ್ನಡ ಉಳಿಸಿ ಬೆಳೆಸಲು ನಾವೆಲ್ಲರೂ ಶ್ರಮಿಸೋಣ: ಗಡಿಗುಡಾಳ್ ಮಂಜುನಾಥ್ ಕರೆ
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಅಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ, ಎಲ್.ಎಂ. ಹನುಮಂತಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ್, ಬಿ.ಎಂ. ರಾಮಸ್ವಾಮಿ, ಎಸ್.ಎಸ್. ಮಲ್ಲಿಕಾರ್ಜುನ ಮತ್ತಿತರರು ಇದ್ದರು.
ರಾಜ್ಯ ಸರ್ಕಾರ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಆದೇಶ ಹೊರಡಿಸಿರುವುದು ಸರಿಯಷ್ಟೇ, ಈಗಲೇ ನೇಮಕಾತಿ ಮಾಡಿಕೊಂಡರೆ ಪರಿಶಿಷ್ಟ ಜಾತಿಯವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ಒಳಮೀಸಲಾತಿ ಜಾರಿಗೊಳಿಸಿದ ತರುವಾಯ ನೇಮಕಾತಿ ಮಾಡಿಕೊಳ್ಳಬೇಕು.
– ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಚಿತ್ರದುರ್ಗ