ದಾವಣಗೆರೆ, ಜು.24- ಭಾರತದ ಎಲ್ಲಾ ನಾಗರೀಕರಿಗೆ ಸಂವಿಧಾನದಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳು ಮತ್ತು ಮಾನವ ಹಕ್ಕುಗಳು ಲೈಂಗಿಕ ಕಾರ್ಯಕರ್ತರಿಗೂ ಇದ್ದು ಅವನ್ನು ಅನುಭವಿಸುವ ಹಕ್ಕು ಅವರಿಗೂ ಇದೆ. ಇದರ ಬಗ್ಗೆ ಇಲಾಖೆಗಳು ಪೋಲಿಸರು ಮತ್ತು ಇತರೆ ಕಾನೂನು ಸಂಸ್ಥೆಗಳು ಸಂವೇದನಾ ಶೀಲರಾಗಿರಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಮಹಾವೀರ ಮ. ಕರೆಣ್ಣವರ ತಿಳಿಸಿದರು.
ನಗರದ ಪಿ.ಬಿ.ರಸ್ತೆಯಲ್ಲಿರುವ ಅಶೋಕ ಇನ್ ಹೊಟೇಲ್ನಲ್ಲಿ ಶ್ರೀ ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದಿಂದ ಏರ್ಪಸಿದ್ದ ಜಿಲ್ಲಾ ಮಟ್ಟದ ವಕಾಲತ್ತಿನ ಸಭೆಯ ಕಾರ್ಯಸೂಚಿಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಲೈಂಗಿಕ ಕಾರ್ಯಕರ್ತರನ್ನು ಘನತೆಯಿಂದ ನಡೆಸಿಕೊಳ್ಳಬೇಕು, ಅವರನ್ನು ಮೌಖಿಕವಾಗಿ ಮತ್ತು ದೈಹಿಕವಾಗಿ ನಿಂದಿಸಬಾರದು, ಹಿಂಸೆಗೆ ಒಳಪಡಿಸಬಾರದು ಎಂದು ಪ್ರತಿಪಾದಿಸಿದರು. 2022ರಲ್ಲಿ ಸುಪ್ರೀಂಕೋರ್ಟ್ ಲೈಂಗಿಕ ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಸಮಿತಿಯನ್ನು ಸ್ಥಾಪಿಸಿ ಆದೇಶಿಸಿರುವುದನ್ನು ನಾವೆಲ್ಲರೂ ಗಮನಿಸಬೇಕು. ಸುಪ್ರೀಂಕೋರ್ಟ್ ಸಮಿತಿ ಮಾಡಿದ ಕೆಲವು ಶಿಫಾರಸುಗಳಿಗೆ ಸರ್ಕಾರಗಳು ಒಪ್ಪಿಗೆಯನ್ನು ನೀಡಿವೆ. ಲೈಂಗಿಕ ಕಾರ್ಯಕರ್ತರು ತಮ್ಮ ಆರೋಗ್ಯ ಮತ್ತು ಸುರಕ್ಷತೆಗಾಗಿ ಬಳಸಿಕೊಳ್ಳುವ ಕ್ರಮಗಳನ್ನು ಅಪರಾಧವೆಂದು ಪರಿಗಣಿಸಬಾರದು.
ಎಲ್ಲಾ ಇಲಾಖೆಗಳಿಗೆ ಮತ್ತು ಸಾರ್ವಜನಿಕರಿಗೆ ಲೈಂಗಿಕ ಕಾರ್ಮಿಕರ ಸಮುದಾಯವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮತ್ತು ಅವರು ಅನುಭವಿಸುತ್ತಿರುವ ಕಿರುಕುಳ ಹಿಂಸೆಗಳ ಬಗ್ಗೆ ಸಮಾಜಕ್ಕೆ ಮನವರಿಕೆ ಮಾಡಲು ಮತ್ತು ಪರಿಹಾರ ದೊರಕಿಸಲು ಇಲಾಖೆಗಳು ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್. ಅರುಣ್ಕುಮಾರ್ ಅವರು ಮಾತನಾಡಿ,ಭಾರತ ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಘನತೆಯಿಂದ ಬದುಕುವ ಹಕ್ಕನ್ನು ಎಲ್ಲರಿಗೂ ನೀಡಿದ್ದು, ಸಮಾಜ ಲೈಂಗಿಕ ಕಾರ್ಮಿಕರನ್ನು, ಏಡ್ಸ್ ಪೀಡಿತರನ್ನು, ಮಂಗಳಮುಖಿಯರನ್ನು ಕೂಡ ಸಂವಿಧಾನದ ಆಶಯದಂತೆ ಸಮಾನತೆಯಿಂದ ಕಾಣಬೇಕು. ಮಲೈಂಗಿಕ ಕಾರ್ಯಕರ್ತರ, ಮಂಗಳಮುಖಿಯರ ಸಮಸ್ಯೆಗಳನ್ನು ಪರಿಹರಿಸುವ ಹೊಣೆ ಸರ್ಕಾರ ಮತ್ತು ಸಮುದಾಯಗಳ ಮೇಲಿದೆ ಹಾಗೂ ಅವರ ಹಕ್ಕುಗಳನ್ನು ರಕ್ಷಿಸುವುದು, ಪುನರ್ವಸತಿ ಕಲ್ಪಿಸುವುದು, ಸಮಾಜದಲ್ಲಿ ಉತ್ತಮ ಶಿಕ್ಷಣ ವನ್ನು ನೀಡಿ ಇತರರಂತೆ ಸಮಾಜದ ಮುಖ್ಯವಾಹಿನಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕಾಗಿದೆ. ಅವರು ಪ್ರಗತಿಹೊಂದಲು ಬೇಕಾದ ಯೋಜನೆಗಳನ್ನು ಜಾರಿಗೆ ತರುವ ಅಗತ್ಯ ಇದ್ದು, ಈ ಬಗ್ಗೆ ಸಂಘಟಿತವಾಗಿ ಹೋರಾಟದ ಮೂಲಕ ಸರ್ಕಾರಗಳಿಗೆ ಒತ್ತಾಯ ತರಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕರಾದ ಜಗದೀಶ್ ಎ.ಪಿ. ಅವರು ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿರುವ ಲೈಂಗಿಕ ಕಾರ್ಯಕರ್ತರು, ಏಡ್ಸ್ಪೀಡಿತರು ಮತ್ತು ಸಲಿಂಗಿಗಳ ಬಗ್ಗೆ ನಿರಂತರವಾದ ಅಧ್ಯಯನವನ್ನು ನಡೆಸುತ್ತಿದ್ದು, ಅವರ ಹಕ್ಕುಗಳ ಬಗ್ಗೆ ಮತ್ತು ಅವರ ಪರವಾಗಿರುವ ಕಾನೂನುಗಳು ಮತ್ತು ಯೋಜನೆಗಳ ಬಗ್ಗೆ ತಿಳಿಸುವ ಕೆಲಸವನ್ನು ಮತ್ತು ಶೋಷಣೆಯಿಂದ ರಕ್ಷಿಸುವ ಕಾರ್ಯವನ್ನು ನಿಯಂತ್ರಣ ಘಟಕದ ಅಡಿಯಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಂಘಟನೆಯ ಹುಚ್ಚೆಂಗೆಮ್ಮ ಅವರ ಪ್ರಾರ್ಥನೆಯಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಆಪ್ತ ಸಮಾಲೋಚಕರಾದ ಡಾ. ಗುರುಸವಣೂರು ಸ್ವಾಗತಿಸಿದರು. ಸಂಘಟನೆಯ ಸಮುದಾಯ ಮಹಿಳೆ ಶ್ರೀಮತಿ ಜ್ಯೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿರೂಪಣೆಯನ್ನು ಸಂಘಟನೆಯ ಸಮುದಾಯ ಮಹಿಳೆ ಶ್ರೀಮತಿ ರೇಣುಕಾ ನಿರ್ವಹಿಸಿದರು, ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂಜುಳ, ಸಂಘಟನೆಯ ರಾಜಶ್ರೀನಿವಾಸ್, ಮುಕ್ತಪೂಜಾರ್, ಶ್ರೀಮತಿ ವಿಜಯಲಕ್ಷ್ಮಿ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಕೀಲರು, ಲಾ ಕಾಲೇಜಿನ ವಿದ್ಯಾರ್ಥಿಗಳು,ಪೋಲಿಸ ಇಲಾಖೆಯವರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.