ದಾವಣಗೆರೆ: ಸರ್ ಎಂ.ವಿ ಕಾಲೇಜು ಬೇರೆಡೆ ಸ್ಥಳಾಂತರಿಸಬೇಕೆಂದು ಶ್ರೀ ಶಿವಕುಮಾರ ಸ್ವಾಮಿ ಬಡಾವಣೆ ನಾಗರಿಕ ಹಿತ ರಕ್ಷಣಾ ಸಮಿತಿಯು ಒತ್ತಾಯಿಸಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಮಿತಿಯ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ಬುಧವಾರ ಮನವಿ ಸಲ್ಲಿಸಿದರು.
ಸುಮಾರು 30 ವರ್ಷಗಳಿಂದ ಬಡಾವಣೆಯಲ್ಲಿ ವಾಸವಾಗಿರುವ ನಾವುಗಳು ಯಾವುದೇ ರೀತಿಯ ಗಲಾಟೆ, ಜಗಳ, ಕಿರಿ ಕಿರಿ ಇಲ್ಲದ ಜೀವನ ಸಾಗಿಸುತ್ತಾ ಬಂದಿದ್ದೇವೆ. ಆದರೆ,ಈಗ ಸರ್ ಎಂ.ವಿ ಕಾಲೇಜು ಪ್ರಾರಂಭದಲ್ಲಿ ಆಡಳಿತ ಕಚೇರಿ ಮಾತ್ರ ಪ್ರಾರಂಭಿಸುತ್ತೇವೆ ಎಂದು ಬಾಡಿಗೆ ಪಡೆದು, ತದನಂತರ ಸುತ್ತಮುತ್ತಲಿನ ಮನೆಗಳು, ಕಟ್ಟಡಗಳನ್ನು ಬಾಡಿಗೆಗೆ ಪಡೆದಿದ್ದು ಸುಮಾರು 500 ವಿದ್ಯಾರ್ಥಿಗಳನ್ನು ಅಲ್ಲೇ ಅಕ್ಕಪಕ್ಕದ 500 ಮೀಟರ್ ವ್ಯಾಪ್ತಿಯಲ್ಲಿರುವ ಮನೆಗಳನ್ನು ಬಾಡಿಗೆ ಪಡೆದು ಅನಧಿಕೃತವಾಗಿ ಪಿಜಿ ನಡೆಸುತ್ತಿರುವುದು ಕಂಡುಬಂದಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಹಾಗು ವಿದ್ಯಾರ್ಥಿಗಳ ಹಾಸ್ಟೆಲ್, ಕಾಲೇಜು ಮತ್ತು ಊಡದ ವ್ಯವಸ್ಥೆ ಎಲ್ಲವನ್ನು ಸ್ಥಳೀಯ ವಾಸಿಗಳು ಓಡಾಡುವ 30 ಅಡಿ ರಸ್ತೆಯಲ್ಲಿ ಅಕ್ಕಪಕ್ಕದಲ್ಲಿ ರಸ್ತೆಗೆ ಹತ್ತಿಕೊಂಡು ಕಾಲೇಜನ್ನು ನಡೆಸುತ್ತಿದ್ದಾರೆ. ಸದರಿ ರಸ್ತೆಯ ಅಕ್ಕಪಕ್ಕದಲ್ಲಿ ಕಾಲೇಜಿನ ವಾಹನಗಳು ಮತ್ತು ವಿದ್ಯಾರ್ಥಿಗಳ ವಾಹನಗಳನ್ನು ನಿಲ್ಲಿಸಿಕೊಂಡು ತೊಂದರೆ ಮಾಡುತ್ತಿದ್ದಾರೆ ಇದರಿಂದ ಇಲ್ಲಿನ ಚಿಕ್ಕ ಮಕ್ಕಳು, ವೃದ್ಧರು ಸುರಕ್ಷಿತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಡಾವಣೆಗೆ ಅಂಟಿಕೊಂಡು ಮುಖ್ಯರಸ್ತೆಯಲ್ಲಿ ಎಸ್.ಬಿ.ಐ ಆಕ್ಸಿಸ್ ಕೇಂದ್ರ ಬ್ಯಾಂಕ್, ಮೋರ್ ಶಾಪ್, ವಿಶಾಲ್ ಶಾಪ್ ಮತ್ತು ನಂಜಪ್ಪ ಆಸ್ಪತ್ರೆ ಎಲ್ಲವೂ ಇದ್ದು, ಸದರಿ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಕಾಲೇಜಿನ ಅಕ್ಕಪಕ್ಕದಲ್ಲಿರುವ ಮನೆಯ ಮುಂದೆ, ಖಾಲಿ ಸೈಟುಗಳ ಮುಂದೆ ಓಡಾಡುವ ರಸ್ತೆ ಮುಂದೆ ಅಡ್ಡ ಅಡ್ಡವಾಗಿ ಕಾರುಗಳನ್ನು ನಿಲ್ಲಿಸಿ ಬೀಡಾ, ಜರ್ದಾ ಉಗಿದು, ಸಿಗರೇಟ್, ತಿನ್ನುವ ಪದಾರ್ಥಗಳ ಪಾಕೇಟುಗಳನ್ನು ಎಸೆಯುತ್ತಾರೆ ಅದನ್ನು ಪ್ರಶ್ನಿಸಿದವರ ಮೇಲೆಯೇ ಜಗಳಕ್ಕೆ ನಿಲ್ಲುತ್ತಾರೆ ಎಂದು ದೂರಿದರು.
ಆದ್ದರಿಂದ ಇಲ್ಲಿ ಪ್ರತಿದಿನವು ಗಲಾಟೆ, ಜಗಳ ನಡೆಯುತ್ತಿರುವುದರಿಂದ ಇಲ್ಲಿನ ನಿವಾಸಿಗಳ ನೆಮ್ಮದಿ ಹಾಳಾಗಿದ್ದು, ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.
ಸಮಿತಿಯ ಕೆ.ಹೆಚ್ ಲೋಕೇಶ್, ಡಿ.ರವೀಂದ್ರ , ದಿನೇಶ್, ಪಿ. ಆರ್. ರಾಮಚಂದ್ರ ಶ್ರೇಷ್ಠಿ, ನೀಲಕಂಠಪ್ಪ. ಕೆ.ಎ ರಾಹುಲ್, ರಾಜಣ್ಣ, ಅಂಕಿತ, ವಕೀಲ, ಹರೀಶ್, ನವೀನ್, ಚಂದನ್, ಡಿ.ಸುರೇಂದ್ರಪ್ಪ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.