ಪಕ್ಷ ಕಟ್ಟೋದು ಅಂದ್ರೆ ಸುಮ್ಮನೆ ಅಲ್ಲ (Political analysis)
ಕಳೆದ ಶನಿವಾರ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿ ಬಿಜೆಪಿಯ ಸದಸ್ಯತ್ವ ಅಭಿಯಾನ ಸಭೆ ನಡೆದಿದೆ.ಈ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಥೇಟು ಬಬ್ರುವಾಹನನಂತೆ ಅಬ್ಬರಿಸಿದರಂತೆ. ‘ಪಕ್ಷ ಕಟ್ಟೋದು ಅಂದ್ರೆ ಸುಮ್ಮನೆ ಅಲ್ಲ.ಇವತ್ತು ಕರ್ನಾಟಕದಲ್ಲಿ ಪಕ್ಷ ಈ ಮಟ್ಟಕ್ಕೆ ಬೆಳೆಯಲು ಯಡಿಯೂರಪ್ಪ ಅವರು ಕಾರಣ. ಅಂದ ಹಾಗೆ ಯಡಿಯೂರಪ್ಪ ಅವರಿಗೆ ಒಂದಲ್ಲ,ಎರಡು ಸಲ ಸೆಂಟ್ರಲ್ ಮಿನಿಸ್ಟರ್ ಆಗುವ ಆಫರ್ ಬಂತು. ದೆಹಲಿ ನಾಯಕರ ಈ ಆಫರ್ ಅನ್ನು ಒಪ್ಪಿಕೊಂಡಿದ್ದರೆ ಕೇಂದ್ರದಲ್ಲಿ ಮಂತ್ರಿಯಾಗಿ ಯಡಿಯೂರಪ್ಪನವರು ಅರಾಮವಾಗಿರಬಹುದಿತ್ತು. ಆದರೆ ಅವರು ಆಫರ್ ಅನ್ನು ತಿರಸ್ಕರಿಸಿದರು.
ಅಷ್ಟೇ ಅಲ್ಲ,ಕರ್ನಾಟಕದಲ್ಲಿ ಶ್ರಮವಹಿಸಿ ಪಕ್ಷ ಸಂಘಟನೆ ಮಾಡಿದರು.ಒಂದಲ್ಲ,ಎರಡು ಸಲ ಬಿಜೆಪಿ ಅಧಿಕಾರ ಹಿಡಿಯಲು ಕಾರಣರಾದರು. ಇವತ್ತು ಅವರ ಬಗ್ಗೆ,ನನ್ನ ಬಗ್ಗೆ ಯಾರು ಅಪಸ್ವರ ಎತ್ತುತ್ತಿದ್ದಾರೋ? ಅವರಿಗೆ ಗೊತ್ತಿರಲಿ.ಪಕ್ಷ ಸಂಘಟನೆ ಮಾಡೋದು ಸುಲಭದ ಕೆಲಸ ಅಲ್ಲ.ಮಾತನಾಡುವುದು ಸುಲಭ.ಆದರೆ ಪಕ್ಷ ಕಟ್ಟೋದು ಕಷ್ಟ.ಹೀಗಾಗಿ ಇವತ್ತು ಯಾರು ಅಪಸ್ವರ ಎತ್ತುತ್ತಿದ್ದಾರೋ?ಅವರ ಬಗ್ಗೆ ನನಗೆ ಮರುಕವಿದೆ’ಅಂತ ವ್ಯಂಗ್ಯವಾಡಿದರು.
ಹೀಗೆ ವಿಜಯೇಂದ್ರ ಅವರು ಯಾರ ಬಗ್ಗೆ ವ್ಯಂಗ್ಯವಾಡಿದರು ಎಂಬುದು ರಹಸ್ಯವೇನಲ್ಲ.ಬಸವನಗೌಡ ಪಾಟೀಲ್ ಯತ್ನಾಳ್,ಸಿ.ಟಿ.ರವಿ ಸೇರಿದಂತೆ ಪಕ್ಷದ ಹಲವು ನಾಯಕರು ಯಡಿಯೂರಪ್ಪ ಕ್ಯಾಂಪಿನ ವಿರುದ್ದ ಗುಡುಗುತ್ತಲೇ ಇದ್ದಾರೆ. ಕುತೂಹಲದ ಸಂಗತಿ ಎಂದರೆ ಹಿಂದೆಲ್ಲ ಭಿನ್ನಮತೀಯ ನಾಯಕರು ತಮ್ಮನ್ನು ಟೀಕಿಸಿದರೆ ವಿಜಯೇಂದ್ರ ಸಹಿಸಿಕೊಂಡು ಸುಮ್ಮನಿರುತ್ತಿದ್ದರು.ಆದರೆ ಈ ಸಲ ಅಗ್ರೆಸಿವ್ ಆಗಿ ತಿರುಗಿ ಬಿದ್ದಿರುವುದಲ್ಲದೆ,ನನ್ನನ್ನು ಯಾರೇನೂ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಯಾವಾಗ ಅವರು ಇಂತಹ ಮೆಸೇಜು ರವಾನಿಸಿದರೋ?ಇದಾದ ನಂತರ ಅವರ ವಿರೋಧಿ ಪಡೆ ಎಚ್ಚೆತ್ತಿದೆ.ಅಷ್ಟೇ ಅಲ್ಲ,ವಿಜಯೇಂದ್ರ ಇಷ್ಟು ಬೀಡು ಬೀಸಾಗಿ ಮಾತನಾಡುವುದರ ಹಿಂದೆ ಯಾವ ಶಕ್ತಿ ಇದೆ ಅಂತ ಚೆಕ್ ಮಾಡಿದೆ. ಅದಕ್ಕೆ ಬಂದಿರುವ ಸಧ್ಯದ ಮಾಹಿತಿಯ ಪ್ರಕಾರ ವಿಜಯೇಂದ್ರ ಹೀಗೆ ಬಬ್ರುವಾಹನನ ಫೋಜು ಧರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಕೊಟ್ಟ ಟಾನಿಕ್ಕೇ ಕಾರಣ.
ಇತ್ತೀಚೆಗೆ ದಿಲ್ಲಿಗೆ ಬಂದು ತಮ್ಮನ್ನು ಭೇಟಿಯಾದ ವಿಜಯೇಂದ್ರ ಅವರಿಗೆ;’ನೀವು ಯಾವುದಕ್ಕೂ ಯೋಚನೆ ಮಾಡಬೇಡಿ. ಪಕ್ಷ ಕಟ್ಟಲು ಏನು ಮಾಡಬೇಕು ಅನ್ನಿಸುತ್ತದೋ ಅದನ್ನು ಮಾಡಿ. ಬಿಬಿಎಂಪಿ ಎಲೆಕ್ಷನ್ ಸಧ್ಯಕ್ಕೆ ನಿಮ್ಮ ಟಾರ್ಗೆಟ್ ಆಗಿರಲಿ.ಮೊದಲು ಕರ್ನಾಟಕದ ರಾಜಧಾನಿಯನ್ನು ವಶಪಡಿಸಿಕೊಂಡರೆ ನಂತರ ರಾಜ್ಯವನ್ನು ವಶಪಡಿಸಿಕೊಳ್ಳುವುದು ಸುಲಭ’ ಅಂತ ನಡ್ಡಾ ಹೇಳಿದರಂತೆ. ಅಂದ ಹಾಗೆ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ನಂತರ ಹೆಜ್ಜೆ ಹೆಜ್ಜೆಗೂ ನಡ್ಡಾ ಬ್ರೇಕ್ ಹಾಕುತ್ತಿದ್ದರು.
ಆದರೆ ಇತ್ತೀಚೆಗೆ ಕರ್ನಾಟಕದಿಂದ ಅವರಿಗೆ ಬರುತ್ತಿರುವ ವರದಿ ವಿಜಯೇಂದ್ರ ಅವರನ್ನು ತಾರೀಪು ಮಾಡುತ್ತಿದೆ. ವಿಜಯೇಂದ್ರ ಅವರಂತೆ ಪಕ್ಷ ಸಂಘಟಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಹೇಳುತ್ತಿವೆ. ಪರಿಣಾಮ?ಜಗತ್ ಪ್ರಕಾಶ್ ನಡ್ಡಾ ಅವರೀಗ ವಿಜಯೇಂದ್ರ ಅವರ ಬೆನ್ನಿಗೆ ನಿಂತಿದ್ದಾರೆ.ಫುಲ್ ಪ್ರೀಡಮ್ಮೂ ಕೊಟ್ಟಿದ್ದಾರೆ. ಹೀಗಾಗಿಯೇ ವಿಜಯೇಂದ್ರ ತಮ್ಮನ್ನು ಲೆಕ್ಕಿಸದೆ ಆಟ ಮುಂದುವರಿಸುತ್ತಿದ್ದಾರೆ ಎಂಬುದು ಬಿಜೆಪಿ ಭಿನ್ನರಿಗಿರುವ ಮಾಹಿತಿ.
ಸಿದ್ದು ಅಲ್ಲಾಡ್ತಿಲ್ಲ ಗವರ್ನರ್ ಬಿಡ್ತಿಲ್ಲ(Political analysis)
ಈ ಮಧ್ಯೆ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದದ ವಿಚಾರಣೆಗೆ ಅನುಮತಿ ನೀಡಿದ್ದ ಗವರ್ನರ್ ಗೆಹ್ಲೋಟ್ ಪುನ: ಸಿದ್ದು ವಿರುದ್ಧ ದಾಳ ಉರುಳಿಸತೊಡಗಿದ್ದಾರೆ
ಅದು ಅರ್ಕಾವತಿ ಬಡಾವಣೆಗೆ ಸಂಬಂಧಿಸಿದ ರೀ ಡೂ ಪ್ರಕರಣ ಇರಬಹುದು,ಮೂಡಾದಲ್ಲಿ ಸಿಎಂ ಮೌಖಿಕ ಆದೇಶದ ಮೇಲೆ ಆದ ಕೆಲಸಗಳೇನು?ಎಂಬುದೇ ಇರಬಹುದು.ಒಟ್ಟಿನಲ್ಲಿ ಈ ಕುರಿತು ಮಾಹಿತಿ ಕೇಳಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಗೆಹ್ಲೋಟ್ ಪತ್ರ ಬರೆದಿದ್ದಾರೆ.
ಇದೇ ರೀತಿ ಸರ್ಕಾರಕ್ಕೆ ತಾವು ಬರೆದ ಪತ್ರಗಳು ಯಾಕೆ ಸೋರಿಕೆಯಾಗುತ್ತಿವೆ ಎಂಬುದರಿಂದ ಹಿಡಿದು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಯಾವ ಅವಕಾಶಗಳನ್ನೂ ಗೆಹ್ಲೋಟ್ ಬಿಡುತ್ತಿಲ್ಲ.
ಅರ್ಥಾತ್,ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ದದ ವಿಚಾರಣೆಗೆ ತಾವು ಅನುಮತಿ ನೀಡಿದ ಬಗ್ಗೆ ಹೈಕೋರ್ಟ್ ಏನೇ ತೀರ್ಪು ನೀಡಲಿ.ಆದರೆ ಸಿದ್ಧರಾಮಯ್ಯ ಅವರಿಗೆ ಮುಜುಗರವಾಗುವ ಇನ್ನಷ್ಟು ಬೆಳವಣಿಗೆಗಳು ನಡೆಯುತ್ತಾ ಹೋಗುವುದು ಸ್ಪಷ್ಟವಾಗಿದೆ. ಹೀಗಾಗಿಯೇ ಕಾಂಗ್ರೆಸ್ ಪಾಳಯದಲ್ಲಿ ಸಿದ್ದು ಅಲುಗಾಡ್ತಿಲ್ಲ,ಗವರ್ನರ್ ಬಿಡ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಂದ ಹಾಗೆ ಇತ್ತೀಚೆಗೆ ಗುಲ್ಬರ್ಗಕ್ಕೆ ಹೋದ ಸಿದ್ಧರಾಮಯ್ಯ ಅವರು,’ನನ್ನನ್ನು ಅಲುಗಾಡಿಸುವುದು ಅಷ್ಟು ಸುಲಭವಲ್ಲ’ ಅಂತ ವಿರೋಧಿಗಳಿಗೆ ಸವಾಲು ಹಾಕಿದ್ದರು.
ಸಿದ್ಧರಾಮಯ್ಯ ಅವರು ಇಷ್ಟು ಗಟ್ಟಿ ಧ್ವನಿಯಲ್ಲಿ ಸವಾಲು ಹಾಕುತ್ತಿದ್ದಾರೆ ಎಂದರೆ ಏನರ್ಥ?ನಾಳೆ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ದ ರಾಜ್ಯಪಾಲರು ನೀಡಿದ ಅನುಮತಿಗೆ ಹೈಕೋರ್ಟ್ ಅಸ್ತು ಎಂದರೂ ಸಿದ್ಧರಾಮಯ್ಯ ಅವರು ಸಿಎಂ ಹುದ್ದೆಗೆ ರಾಜೀನಾಮೆ ಕೊಡುವುದಿಲ್ಲ ಅಂತ ತಾನೇ? ಹೀಗಾಗಿಯೇ ಗವರ್ನರ್ ಗೆಹ್ಲೋಟ್ ಹೊಸ ಹೊಸ ಅಸ್ತ್ರಗಳನ್ನು ಹುಡುಕಿಯೋ?ಇಲ್ಲವೇ ತುಕ್ಕು ಹಿಡಿದು ಮೂಲೆ ಸೇರಿದ್ದ ಅಸ್ತ್ರಗಳನ್ನೋ ಹೆಕ್ಕಿ ಹೆಕ್ಕಿ ಬಿಸಾಡುತ್ತಿದ್ದಾರೆ.
ಹೀಗಾಗಿ ಮೂಡಾ ಪ್ರಕರಣದ ವಿಷಯದಲ್ಲಿ ಹೈಕೋರ್ಟ್ ಸಿದ್ದರಾಮಯ್ಯ ಅವರಿಗೆ ರಿಲೀಫ್ ನೀಡಿದರೂ ಗವರ್ನರ್ ಗೆಹ್ಲೋಟ್ ಸುಮ್ಮನಿರುವುದಿಲ್ಲ ಎಂಬುದು ಕೈ ಪಾಳಯದ ಅನುಮಾನ.
ಇಂತಹ ಅನುಮಾನಗಳ ಬೆನ್ನಲ್ಲೇ ಕೈ ಪಾಳಯಕ್ಕೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಎದ್ದೆದ್ದು ಕಾಣುತ್ತಿರುವುದು ಮಾತ್ರ ಸುಳ್ಳಲ್ಲ.
ಆರ್.ಸಿ.ಬಿ ಗೆ ಈಶ್ವರಪ್ಪ ಕ್ಯಾಪ್ಟನ್ (Political analysis)
ಇನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ದ ಮುನಿಸಿಕೊಂಡು ಬಿಜೆಪಿ ಪಾಳಯ ತೊರೆದಿರುವ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಆರ್.ಸಿ.ಬಿ ಕ್ಯಾಪ್ಟನ್ ಆಗಲಿದ್ದಾರೆ. ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟುವ ಮೂಲಕ ಯಡಿಯೂರಪ್ಪ ಪಾಳಯವನ್ನು ನಡುಗಿಸಿದ್ದ ಈಶ್ವರಪ್ಪ ಅವರು,ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತು ಕೇಳಿ ಅದನ್ನು ಬರ್ಖಾಸ್ತು ಮಾಡಿದ್ದರು. ಆದರೆ ಈಗ ಬಿಜೆಪಿಯಿಂದ ಹೊರಗಿರುವ ಈಶ್ವರಪ್ಪ ಹೊಸ ಸಂಘಟನೆ ಕಟ್ಟುವ ತಯಾರಿಯಲ್ಲಿದ್ದಾರೆ. ಅಂದುಕೊಂಡಂತೆ ನಡೆದರೆ ನವೆಂಬರ್ ಇಪ್ಪತ್ತರಂದು ಬಾಗಲಕೋಟೆಯಲ್ಲಿ ಈಶ್ವರಪ್ಪ ಆರ್.ಸಿ.ಬಿ ಕ್ಯಾಪ್ಟನ್ ಆಗುವುದು ನಿಶ್ಚಿತ. ಅಂದ ಹಾಗೆ ಆರ್.ಸಿ.ಬಿ ಎಂದರೆ ರಾಯಣ್ಣ-ಚನ್ನಮ್ಮ ಬ್ರಿಗೇಡ್ ಎಂದರ್ಥ.
ಹೀಗೆ ರಾಯಣ್ಣ ಚನ್ನಮ್ಮ ಬ್ರಿಗೇಡ್ ಕಟ್ಟಲು ಈಶ್ವರಪ್ಪ ಅವರಿಗೆ ಪ್ರೇರಣೆ ನೀಡಿದವರು ಪಂಚಮಸಾಲಿ ಮಠಾಧೀಶರಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ.ಅವರ ಪ್ರಕಾರ,ಬಡವರು ಎಲ್ಲ ಸಮುದಾಯಗಳಲ್ಲೂ ಇದ್ದಾರೆ. ಹಿಂದುಳಿದವರು, ದಲಿತರು ಮಾತ್ರವಲ್ಲ,ಬ್ರಾಹ್ಮಣರು,ಲಿಂಗಾಯತರಲ್ಲೂ ಇದ್ದಾರೆ. ಹೀಗಾಗಿ ಎಲ್ಲ ಜಾತಿಗಳ ಬಡವರಿಗಾಗಿ ಆರ್.ಸಿ.ಬಿ ಕಟ್ಟಿ ಅಂತ ಸ್ವಾಮೀಜಿಗಳು ಹೇಳಿದ್ದಾರೆ. ಅವರು ಈ ಮಾತು ಹೇಳುವಾಗ ಈಶ್ವರಪ್ಪ ಅವರ ಜತೆಯಲ್ಲಿ ಬಿಜೆಪಿಯ ಭಿನ್ನಮತೀಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಕೂಡಾ ಇದ್ದುದು ವಿಶೇಷ. ಅರ್ಥಾತ್,ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ವಿರೋಧಿಸುವ ಶಕ್ತಿಗಳು ಒಂದು ದೊಡ್ಡ ವೇದಿಕೆಯನ್ನು ಸೃಷ್ಟಿಸಿಕೊಳ್ಳುತ್ತಿವೆ.
Read also : Karnataka State BJP | ಬಿಜೆಪಿಯಲ್ಲಿ ಬಾಲಭವನ ವರ್ಸಸ್ ವೃದ್ಧಾಶ್ರಮ
ಈ ವೇದಿಕೆಗೆ ದೊಡ್ಡ ಮಟ್ಟದ ಪವರ್ ಸಿಗಲಿದೆ ಅಂತ ಹೇಳಲು ಮತ್ತೊಂದು ಕಾರಣವೂ ಇದೆ.ಅದೆಂದರೆ ರಾಜ್ಯ ಬಿಜೆಪಿಯಲ್ಲಿ ನಡೆದ ಇತ್ತೀಚಿನ ಬೆಳವಣಿಗೆ.ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಬಿಜೆಪಿ ವರಿಷ್ಟರು ವಿಜಯೇಂದ್ರ ಅವರ ಬೆನ್ನಿಗೆ ನಿಂತಿದ್ದಾರೆ.ತಮ್ಮ ಸುತ್ತ ಆಪ್ತರನ್ನಷ್ಟೇ ಇಟ್ಟುಕೊಂಡು ವಿಜಯೇಂದ್ರ ಆಟವಾಡುತ್ತಿದ್ದಾರೆ ಅಂತ ಭಿನ್ನರು ಅದೆಷ್ಟೇ ಕಂಪ್ಲೇಂಟ್ ಕೊಡಲಿ,ಪಕ್ಷದ ವರಿಷ್ಟರು ಕ್ಯಾರೇ ಅನ್ನುತ್ತಿಲ್ಲ.ಬದಲಿಗೆ ವಿಜಯೇಂದ್ರ ವಿರುದ್ಧ ಧ್ವನಿ ಎತ್ತಬೇಡಿ ಅಂತ ಫರ್ಮಾನು ಹೊರಡಿಸುತ್ತಿದ್ದಾರೆ. ಪರಿಣಾಮ?ವಿಜಯೇಂದ್ರ ವಿರುದ್ದ ಹೋರಾಡಲು ಬಿಜೆಪಿಯ ಅತೃಪ್ತರಿಗೆ ಒಂದು ದೊಡ್ಡ ವೇದಿಕೆ ಬೇಕಾಗಿದೆ.ರಾಯಣ್ಣ-ಚನ್ನಮ್ಮ ಬ್ರಿಗೇಡ್ ಯಾಕೆ ಬಲಿಷ್ಟವಾಗಲಿದೆ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿ. ಹೀಗಾಗಿ ಈ ನಾಯಕರ ಬೆಂಬಲದೊಂದಿಗೆ ನವೆಂಬರ್ ಇಪ್ಪತ್ತರಂದು ತಲೆ ಎತ್ತಲಿರುವ ಆರ್.ಸಿ.ಬಿ ಬಿಜೆಪಿ ವರಿಷ್ಟರ ಪಾಲಿಗೆ ತಲೆನೋವು ತರುವುದಂತೂ ಗ್ಯಾರಂಟಿ.
ಮಿತ್ರಕೂಟದ ವಿರುದ್ದ ನಾಲ್ಕನೇ ಶಕ್ತಿ? (Political analysis)
ಇನ್ನು ಸೆಪ್ಟೆಂಬರ್ 22 ರ ಭಾನುವಾರ ಬೆಂಗಳೂರಿನ ಏಟ್ರಿಯಾ ಹೋಟೆಲಿನಲ್ಲಿ ವಿವಿಧ ಪಕ್ಷ ಮತ್ತು ಸಂಘಟನೆಗಳ ಮುಖಂಡರು ಮಹತ್ವದ ಸಭೆ ನಡೆಸಿದ್ದಾರೆ. ಜೆಡಿಎಸ್ ನಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ,ಕನ್ನಡ ಚಳವಳಿ ನಾಯಕ ನಾರಾಯಣಗೌಡ, ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್,ಬಹುಜನ ಸಮಾಜ ಪಕ್ಷದ ಗೋಪಿ ಸೇರಿದಂತೆ ಹಲ ಪ್ರಮುಖರು ಭಾಗವಹಿಸಿದ್ದ ಈ ಸಭೆಯಲ್ಲಿ ಹೊಸ ರಾಜಕೀಯ ಪಕ್ಷದ ಸ್ಥಾಪನೆ ಬಗ್ಗೆ ಒಲವು ವ್ಯಕ್ತವಾಗಿದೆ.
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಲ ಕ್ಷೀಣಿಸುತ್ತಿದ್ದು ಬಿಜೆಪಿ-ಜೆಡಿಎಸ್ ಮಿತ್ರಕೂಟದ ಶಕ್ತಿ ಹೆಚ್ಚಾಗುತ್ತಿದೆ.ಈ ಹಿನ್ನೆಲೆಯಲ್ಲಿ ಅದನ್ನು ತಡೆಯಲು ಕಾಂಗ್ರೆಸ್ ಪಕ್ಷವೊಂದರಿಂದ ಸಾಧ್ಯವಿಲ್ಲ.
ಹೇಗಿದ್ದರೂ ಕನ್ನಡ ಪರ ಸಂಘಟನೆ,ರೈತ ಸಂಘಟನೆಗಳಲ್ಲೇ ಒಂದು ಕೋಟಿಯಷ್ಟು ಸದಸ್ಯರಿದ್ದಾರೆ.ಉಳಿದಂತೆ ಎಲ್ಲರೂ ಸೇರಿದರೆ ರಾಜ್ಯದ ಎಪ್ಪತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು.ಹೀಗಾಗಿ ಹೊಸ ಪಕ್ಷ ಕಟ್ಟೋಣ ಅಂತ ಸಭೆಯಲ್ಲಿದ್ದ ನಾಯಕರು ಹೇಳಿದ್ದಾರೆ. ಮೂಲಗಳ ಪ್ರಕಾರ,ಈ ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಅಕ್ಟೋಬರ್ ತಿಂಗಳಲ್ಲಿ ಮತ್ತೊಂದು ಸಭೆ ನಡೆಸಲಿದ್ದಾರೆ. ಈ ಸಭೆಯ ನಂತರ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮಿತ್ರಕೂಟದ ಶಕ್ತಿ ಕುಗ್ಗಿಸಲು ನಾಲ್ಕನೇ ಶಕ್ತಿ ತಲೆ ಎತ್ತಲಿದೆ.
ಲಾಸ್ಟ್ ಸಿಪ್ (Political analysis)
ಈ ಮಧ್ಯೆ ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಪಕ್ಷದ ಉಸ್ತುವಾರಿ ಹೊಣೆ ಹೊತ್ತಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ್ದರಂತೆ. ಈ ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಚರ್ಚಿಸುತ್ತಾ,ಸಚಿವ ಸಂಪುಟ ಪುನರ್ರಚನೆಯ ಬಗ್ಗೆ ಈ ನಾಯಕರು ಕೇಳಿದ್ದಾರೆ.
‘ಸಾರ್,ವರಿಷ್ಟರು ಹೇಳಿದ ಪ್ರಕಾರ ಈಗಾಗಲೇ ಸಂಪುಟ ಪುನರ್ರಚನೆ ಪ್ರಕ್ರಿಯೆ ಮುಗಿಯಬೇಕಿತ್ತು.ಇನ್ ಫ್ಯಾಕ್ಟ್ ಸಿದ್ದರಾಮಯ್ಯ ಅವರ ಸಂಪುಟದಲ್ಲಿರಬೇಕಿದ್ದ ಮಿನಿಮಮ್ ಎರಡು ಡಜನ್ ನಷ್ಟು ನಾಯಕರು ಹೊರಗಿದ್ದಾರೆ.ಈಗ ಸಂಪುಟದಲ್ಲಿರುವ ಹಲವರು ನಿಷ್ಕ್ರಿಯರಾಗಿದ್ದಾರೆ.ಹೀಗಾಗಿ ಸರ್ಕಾರಕ್ಕೆ ಇಮೇಜು ಬರಬೇಕೆಂದರೆ ಅರ್ಹರಿಗೆ ಮಂತ್ರಿಗಿರಿ ಸಿಗಬೇಕು ಸಾರ್ ಎಂದಿದ್ದಾರೆ. ಈ ನಾಯಕರಾಡಿದ ಮಾತನ್ನು ಮೌನವಾಗಿ ಕೇಳಿಸಿಕೊಂಡ ಸುರ್ಜೇವಾಲ:ನೀವು ಹೇಳಿದ್ದು ನಿಜ.ಆದರೆ ಮುಖ್ಯಮಂತ್ರಿಗಳ ವಿರುದ್ದ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ ಪ್ರಕರಣ ಜೀವಂತವಾಗಿದೆ.ಅದು ಇತ್ಯರ್ಥವಾಗದೆ ಸಂಪುಟ ಪುನರ್ರಚನೆಯಂತಹ ಕೆಲಸಕ್ಕೆ ಕೈ ಹಾಕುವುದು ಹೇಗೆ?ಎಂದಿದ್ದಾರೆ.
ಹಾಗೆಯೇ ಮುಂದುವರಿದು,ಹೇಗಿದ್ದರೂ ಮಹಾರಾಷ್ಟ್ರದ ವಿದಾನಸಭೆ ಚುನಾವಣೆ ಬರುತ್ತಿದೆ.ಕರ್ನಾಟಕದಲ್ಲೂ ಮೂರು ಕ್ಷೇತ್ರಗಳ ಉಪಚುನಾವಣೆ ಇದೆ.ಅಲ್ಲಿಯವರೆಗೆ ಏನು ಮಾಡಲು ಸಾಧ್ಯ?ಹೀಗಾಗಿ ಡಿಸೆಂಬರ್ ತನಕ ಸಂಪುಟ ಪುನರ್ರಚನೆ ಕಷ್ಟ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಯಾವಾಗ ಸುರ್ಜೇವಾಲಾ ಈ ಮಾತು ಹೇಳಿದರೋ?ಇದಾದ ನಂತರ ಈ ನಾಯಕರು:ಸಿದ್ರಾಮಯ್ಯ ಪ್ರಕರಣ ಇತ್ಯರ್ಥವಾದರೂ ಅಷ್ಟೇ.ಆಗದಿದ್ದರೂ ಅಷ್ಟೇ.ಸಂಪುಟ ಪುನರ್ರಚನೆ ಮಾತ್ರ ಗಗನ ಕುಸುಮವೇ ಸೈ ಅಂತ ಹೇಳತೊಡಗಿದ್ದಾರೆ.
ಆರ್.ಟಿ.ವಿಠ್ಠಲಮೂರ್ತಿ