ದಾವಣಗೆರೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ವತಿಯಿಂದ ಎಸ್‍ಡಿಪಿಐ ಜಿಲ್ಲಾ ಕಚೇರಿ ಯಲ್ಲಿ 16ನೇ ವರ್ಷದ ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ಮಾಡಿ ಜಿಲ್ಲಾಧ್ಯಕ್ಷ ಯಾಹಿಯ ಮಾತನಾಡಿದರು.
ಈ ದೇಶದ ದಮನಿತ, ಶೋಷಿತ, ಅಲ್ಪಸಂಖ್ಯಾತ ಮತ್ತು ಅನ್ಯಾಯಕ್ಕೊಳಗಾದ ಯಾವುದೇ ವ್ಯಕ್ತಿ ಅಥವಾ ಸಮುದಾಯ ತನ್ನ ಪರವಾಗಿ ಧ್ವನಿಯಾಗಲು ಯಾರೂ ಇಲ್ಲ ಎಂಬ ಭಾವನೆ ಇಲ್ಲದಾಗಿದೆ. ಏಕೆಂದರೆ ಎಲ್ಲಿ ಏನೇ ಅನ್ಯಾಯವಾದರೂ ಅದರ ವಿರುದ್ಧ ಒಂದು ಪ್ರಬಲ ಧ್ವನಿ ಇದ್ದೇ ಇರುತ್ತದೆ ಎಂಬ ಭರವಸೆಯನ್ನು ಜನರಲ್ಲಿ ಮೂಡಿಸಲು ಹುಟ್ಟಿಕೊಂಡ ರಾಜಕೀಯ ಚಳುವಳಿಯೇ ಎಸ್.ಡಿ.ಪಿ.ಐ ಪಕ್ಷ. ಭ್ರಷ್ಟಾಚಾರ ರಹಿತ ಸ್ವಚ್ಛ ಆಡಳಿತದ ಮೂಲಕ ಹಸಿವು ಮುಕ್ತ, ಭಯ ಮುಕ್ತ ಸಮಾಜ ನಮ್ಮ ಗುರಿ ಯಾಗಿದೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಒಬ್ಬ ಮಹಿಳೆಯ ಜಮೀನನ್ನು ಉಳ್ಳವರು ಕಬಳಿಸಿದ್ದಾಗ ಅದನ್ನು ತಮಗೆ ಮರಳಿ ಕೊಡಿಸಲು ಅಂಬೇಡ್ಕರ್ ರವರಲ್ಲಿ ಆ ಮಹಿಳೆ ಆಗ್ರಹಿಸುತ್ತಾಳೆ. ಆಗ ಅನ್ಯಾಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ಕೊಡಿಸಲು ಅಂಬೇಡ್ಕರ್ ಬೆಳಗಾವಿ ಭೇಟಿ ಕೊಟ್ಟಾಗ ಅಲ್ಲಿ ಸವರ್ಣಿಯರು ಅವರ ಮೇಲೆ ಚಪ್ಪಲಿ ಬೀಸಾಡುತ್ತಾರೆ. ಇದರಿಂದ ಕೋಪಿತಗೊಂಡ ಅಂಬೇಡ್ಕರ್ ಅನುಯಾಯಿಗಳು ಅವರನ್ನು ತಡೆಯಲು ಮುಂದಾಗುತ್ತಾರೆ ಇದನ್ನರಿತ ಅವರು ಆ ಸಮಯದಲ್ಲಿ ಏನು ಮಾಡದಂತೆ ತಡೆಯುತ್ತಾರೆ. ಕ್ರಿಯೆಗೆ ಪ್ರತಿಕ್ರಿಯಾಗಿ ಅಲ್ಲಿನ ಅವರ ಅನುಯಾಯಿಗಳು ಆ ಚಪ್ಪಲಿ ಎಸೆದವನ ಅಂಗಡಿಯ ಮುಂದೆ ಚಪ್ಪಲಿಯ ರಾಶಿಯನ್ನು ಹಾಕಿ ಆಗಿನ ಬೆಳಗಾವಿ ಆಡಳಿತಕ್ಕೆ ಚಪ್ಪಲಿಯನ್ನು ತೆಗೆಯದಂತೆ ಮನವಿ ಪತ್ರ ನೀಡಿ ತಮ್ಮ ಪ್ರತಿಭಟನೆಯನ್ನು ದಾಖಲಿಸುತ್ತಾರೆ ಎಂದರು.
ಎಷ್ಟೋ ದಿನಗಳು ಕಳೆದರು ಚಪ್ಪಲಿಗಳ ರಾಶಿ ಹಾಗೆ ಬಿದ್ದಿರುತ್ತೆ ಇದನ್ನು ಅರಿತ ಆ ವ್ಯಕ್ತಿ ಕ್ಷಮೆ ಕೇಳಿ ಚಪ್ಪಲಿಯ ರಾಶಿಗಳನ್ನು ತೆಗೆಯುವಂತೆ ಮನವಿ ಮಾಡಿಕೊಳ್ಳುತ್ತಾನೆ . ಈ ಘಟನೆಯಿಂದ ಆ ವ್ಯಕ್ತಿಗೆ ಪಶ್ಚಾತಾಪದ ಜೊತೆಗೆ ಆ ವ್ಯಕ್ತಿ ಮಾಡಿದ ಮಾಡಿದ ತಪ್ಪಿನ ಅರಿವು ಅವನಲ್ಲಿ ಆಗುತ್ತದೆ ಎಂದು ಘಟನೆ ಬಗ್ಗೆ ವಿವರಿಸಿದರೂ ಈ ರೀತಿಯಾಗಿಯೂ ಅನ್ಯಾಯಕ್ಕೆ ಒಳಗಾದ ಜನರಿಗೆ ಯಾವುದೇ ಪ್ರಮಾದ ಆಗದಂತೆ ನ್ಯಾಯ ಪಡೆಯಬಹುದು ಎಂದು ತಿಳಿಸಿದರು.
ನಾವು ಕೂಡ ಪಕ್ಷವನ್ನು ಅಂಬೇಡ್ಕರ್ ಮಾದರಿಯಲ್ಲೇ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸೋಣ ಎಂದು ಕರೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಝ್ ಅಹಮದ್ , ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್ , ಜಿಲ್ಲಾ ಸಮಿತಿ ಸದಸ್ಯರಾದ ಫರೀದ್ ಖಾನ್ , ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.