ದಾವಣಗೆರೆ (Davangere) : ಸಮಸ್ತ ಜೀವಕೋಟಿಗಳಿಗೆ ಉಸಿರಾಟಕ್ಕೆ ಬೇಕಾಗುವ ಆಮ್ಲಜನಕವನ್ನು ಒದಗಿಸುವವನು ಹನುಮಂತದೇವರು. ಏಕೆಂದರೆ ಇವನು ಮಾರುತ (ಗಾಳಿಯ) ಅವತಾರ. ಆದ್ದರಿಂದಲೇ ಇವನನ್ನು ಮುಖ್ಯಪ್ರಾಣನೆಂತಲೂ ಕರೆಯುವರು. ಹೀಗಾಗಿ ನಾವು ಹನುಮಂತ ದೇವರನ್ನು ಎಷ್ಟು ಸ್ಮರಿಸಿದರೂ ಸಾಲದು ಎಂದು ನಾಡಿನ ಹಿರಿಯ ಪ್ರವಚನಕಾರರಾದ ಗೋಪಾಲಚಾರ್ ಮಣ್ಣೂರ್ ಅಭಿಪ್ರಾಯಪಟ್ಟರು.
ನಗರದ ದೇವರಾಜ ಅರಸು ಬಡಾವಣೆ ‘ಸಿ’ ಬ್ಲಾಕ್‍ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ.) ದಾವಣಗೆರೆಯ ಶ್ರೀ.ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗಚಿಕಿತ್ಸಾ ಕೇಂದ್ರದಲ್ಲಿ ಹನುಮಜಯಂತಿ ಪ್ರಯುಕ್ತ ಎರಡು ದಿವಸ ಆಯೋಜಿಸಲಾಗಿದ್ದ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಉಪನ್ಯಾಸ ನೀಡಿದರು.
ಭಾರತೀಯರಿಗೆ ಹನುಮಜಯಂತಿ ಎಂದರೆ ಒಂದು ವಿಶೇಷ ದಿನ. ಏಕೆಂದರೆ, ಆಂಜನೇಯ ಎಂದರೆ ಪ್ರತಿಯೊಬ್ಬರಿಗೂ ಬಹಳ ಅಚ್ಚುಮೆಚ್ಚಿನ ದೇವರು. ಜಾತಿ, ಮತ, ಪಂಥ, ಯಾವುದನ್ನೂ ನೋಡದೇ ಎಲ್ಲರೂ ಪೂಜಿಸುವ ಹನುಮಂತನ, ಶಕ್ತಿ, ಬಲ, ಧೈರ್ಯ, ವೇಗ, ಸಾಹಸ, ಅಪರಿಮಿತವಾದದ್ದು, ಹನುಮಂತನ ನಿಸ್ವಾರ್ಥಸೇವೆ, ಅವನಶಕ್ತಿ, ಉತ್ಸಾಹ, ಶ್ರೀರಾಮಭಕ್ತಿ ಇವುಗಳು ನಮಗೆ ಉತ್ತೇಜನಕಾರಿಯಾಗಿ ನಾವು ಅವನಂತೆ ಧೀರರೂ, ಶೂರರೂ, ರಾಮಭಕ್ತರೂ ಆಗುವಂತೆ ಪ್ರಚೋದಿಸುತ್ತದೆ ಎಂದು ಶ್ರೀಹನುಮದೇವರ ಹುಟ್ಟಿನಿಂದ ಹಿಡಿದು ಅವನ ಬದುಕಿನ ಕೊನೆಯವರೆಗೂ ಶ್ರೀರಾಮಭಕ್ತನಾಗಿ ಭಕ್ತಿಯ ಪರಾಕಾಷ್ಠೆಯಲ್ಲಿ ಏನೆಲ್ಲಾ ಸಾಹಸದಿಂದ ತೋರಿದ ಧೈರ್ಯ, ಸ್ಥೈರ್ಯ, ದುಷ್ಟರ ಹರಣ ಭಕ್ತಿಯಿಂದ ಬೇಡಿದವರ ಪಾಲಿಗೆ ಎಲ್ಲವನ್ನೂ ದಯಪಾಲಿಸುವ ದೇವರಾಗಿ ಇಂದಿಗೂ ಪ್ರಾತಃ ಸ್ಮರಣೀಯನಾಗಿ ದೈವನಂಬಿಕೆಯುಳ್ಳ ದೇವರಾಗಿ ಸಕಲರನ್ನು ಉದ್ಧಾರ ಮಾಡುವ ಹನುಮದೇವರ ಚರಿತೆ ಅಗಾಧವಾದದ್ದು ಎಂದರು.
ಗಾಯಕಿ ಸಂವೇದಿತಾ ಸುಭಾಷ್ ಕುಶಾಲನಗರ ಹನುಮಾನ್ ಚಾಲೀಸಾ ಹಾಗೂ ಭಕ್ತಿಸುಧೆ , ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಭರತನಾಟ್ಯ ನೃತ್ಯ ರೂಪಕ ಹಾಗೂ ವಿಶೇಷವಾಗಿ ಧೂಪಾರತಿ ನೃತ್ಯವು ಎಲ್ಲರೂ ಮೆಚ್ಚುಗೆಗೆ ಪಾತ್ರವಾಯಿತು.
Read also : ಪೌರ ಕಾರ್ಮಿಕರ ಕಾಯಂಗೆ ಹಣ ವಸೂಲಿ : ಕ್ರಮಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಆಗ್ರಹ
ಪ್ರತಿಷ್ಠಾನದ ಯೋಗ ಸಾಧಕರುಗಳಿಂದ ಹನುಮಜಯಂತಿ ಪ್ರಯುಕ್ತ ಶ್ರೀ.ಆಂಜನೇಯ ಶತನಾಮಾವಳಿಗಳೊಂದಿಗೆ ಒಂದು ಮಂಡಲ (48 ಸುತ್ತು) ಹನುಮ ನಮಸ್ಕಾರ ಯೋಗಪದ್ಧತಿಯನ್ನು ಸಾಮೂಹಿಕವಾಗಿ ಪ್ರದರ್ಶಿಸಿ ಭಕ್ತಿ, ಶ್ರದ್ಧೆಯಿಂದ ಹನುಮದೇವರಿಗೆ ಅರ್ಪಿಸಲಾಯಿತು.
ಅರುಣೋದಯ ಬಟ್ಟೆ ಅಂಗಡಿ ಮಾಲೀಕರಾದ ಪೂಜಾ ಸೋಳಂಕಿ ಮತ್ತು ಸಹೋದರರು, ಜಿಲ್ಲಾ ಕಛೇರಿಯ ಸಂತೋಷ್.ಹೆಚ್., ಶಿಕ್ಷಕರಾದ ಚಂದ್ರಶೇಖರ್ .ಹೆಚ್.ಎಂ. ಮತ್ತು ಅನಸೂಯದೇವಿ ಎನ್.ಕೆ. ಎ ಎನ್.ಕೆ. ಎರಡು ದಿನದ ಮಹಾಪ್ರಸಾದ ಸೇವೆ ಅರ್ಪಿಸಿದರು.
ಯೋಗ ಅಧ್ಯಯನ ವಿಭಾಗದ ರಾಹುಲ್ .ವಿ.ಕೆ. ಚೇತನ್.ಡಿ.ಎಸ್ ಜ್ಯೋತಿಲಕ್ಷ್ಮಿ ಇನ್ನಿತರರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ನೂತನ ವಧು-ವರರಾದ ನಿತಿನ್ ಮತ್ತು ಸವಿತಾ .ಎಸ್. ಇವರಿಗೆ ಪ್ರತಿಷ್ಠಾನದ ವತಿಯಿಂದ ಮಂತ್ರಾಕ್ಷತೆ ನೀಡಿ ಶಾಲು ಹೊದಿಸಿ ಆಶೀರ್ವದಿಸಲಾಯಿತು. ಪಾಲಿಕೆಯ ಮಹಂತೇಶ್, ಶ್ರೀಧರಮೂರ್ತಿ, ಯೋಗಶಿಕ್ಷಕ ಮಹಾಂತೇಶ್, ಚಂದ್ರ .ಎಸ್., ವೀರಭದ್ರಯ್ಯಸ್ವಾಮಿ, ಇತರರು ಇದ್ದರು.

ಸ್ನಾತಕೋತ್ತರ ಯೋಗ ವಿದ್ಯಾರ್ಥಿನಿ ಕಾವ್ಯ .ಟಿ. ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಯೋಗ ಗುರು ಡಾ||ರಾಘವೇಂದ್ರ ಗುರೂಜಿಯವರು ಸಹಕರಿಸಿದ ಎಲ್ಲರನ್ನು ವಂದಿಸಿದರು.
ಮಹಾಮಂಗಳಾರತಿ, ತೀರ್ಥ, ಮಹಾಪ್ರಸಾದದೊಂದಿಗೆ ಹನುಮಜಯಂತಿ ಸಂಪನ್ನಗೊಂಡಿತು.