ಹರಿಹರ: ಜಲ, ವಾಯು, ಅರಣ್ಯ ಸಂರಕ್ಷಣೆಗೆ ಕಟಿಬದ್ಧರಾಗಬೇಕೆಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.
ಹರಿಹರ ಸಮೀಪದ ಅಮರಾವತಿಯ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಮಂಗಳವಾರ ನೂತನವಾಗಿ ಆರಂಭಿಸಿರುವ ಸೇಂಟ್ ಅಲೋಶಿಯಸ್ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ಸಂತ ಅಲೋಶಿಯಸ್ ಗೊಂಜಾಗರವರ 457ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷು ಹಾಗೂ ಜೀವರಾಶಿಯ ಉಳಿವಿನ ರಹಸ್ಯ ಅಡಗಿರುವುದು ಜಲ, ವಾಯು, ಅರಣ್ಯದಲ್ಲಿ, ಈ ಅಂಶಗಳ ಉಳಿವಿಗೆ ನಾವು ಶಕ್ತಿ ಮೀರಿ ಪ್ರಯತ್ನಿಸಬೇಕಿದೆ ಎಂದ ಅವರು, ಪ್ರಾಣಿ, ಪಕ್ಷಿಗಳು ಸಹಜವಾಗಿ ಬದುಕುವ, ಅರಳುವ ವಾತಾವರಣ ನಿರ್ಮಿಸಬೇಕಿದೆ ಎಂದರು.
ಬಹು ಹಿಂದೆಯೆ ಭಾರತ ಶಿಕ್ಷಣ, ಜ್ಞಾನದ ವಿಷಯದಲ್ಲಿ ಜಗತ್ತಿನ ಗುರುವಾಗಿತ್ತು, ನಳಂದ, ತಕ್ಷಶಿಲಾ, ವಿಶ್ವಶಿಲಾ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಮಾಡಲು ವಿದ್ಯಾರ್ಥಿಗಳು ವಿಶ್ವದೆಲ್ಲೆಡೆಯಿಂದ ಆಗಮಿಸುತ್ತಿದ್ದರು. ಗತ ಕಾಲದ ವೈಭವ ಮರಳಿಸಲು ಪ್ರಧಾನಿ ಮೋದಿಯವರ ಮುಖಂಡತ್ವದಲ್ಲಿ ಭಾರತ ಸರ್ಕಾರವು ಈಗ ನಳಂದ ವಿಶ್ವವಿದ್ಯಾನಿಲಯದ ಪರಿಸರದಲ್ಲಿಯೆ ನಳಂದ ವಿಶ್ವವಿದ್ಯಾಲಯವನ್ನು ಆರಂಭಿಸುವ ಕಾರ್ಯಕ್ಕೆ ಮುನ್ನುಡಿ ಇಟ್ಟಿದೆ ಎಂದರು.
ಸಂತ ಅಲೋಶಿಯಸ್ ಗೊಂಜಾಗ ಬಲಹೀನರ ಸೇವೆಗೆ ಜೀವನ ಮುಡುಪಾಗಿಟ್ಟಿದ್ದರು, ಅವರ ಹೆಸರಲ್ಲಿ ಆರಂಭಿಸಿರುವ ಈ ಶಿಕ್ಷಣ ಸಂಸ್ಥೆಯು ಕಳೆದ 500 ವರ್ಷಗಳಿಂದ ಜಗತ್ತಿನ 105 ದೇಶಗಳಲ್ಲಿ ಶಿಕ್ಷಣ ಪ್ರಸಾರದ ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಕಾರ್ಯ, ಈ ಸಂಸ್ಥೆಯು ಬಡವರ್ಗದವರಿಗೆ ಶಿಕ್ಷಣ ಸೌಲಭ್ಯವನ್ನು ನೀಡುತ್ತಿದೆ ಎಂದರು.
ರಾಜ್ಯಪಾಲರು ಸಂತ ಅಲೋಶಿಯಸ್ ಗೊಂಜಾಗ ಇವರ ಮೂರ್ತಿ ಹಾಗೂ ಶಾಲೆಯ ನಾಮಫಲಕ ಅನಾವರಣ ಮಾಡಿದರು.
ಶಿವಮೊಗ್ಗ ಧರ್ಮಕ್ಷೇತ್ರದ ಬಿಷಪ್ ರೆವೆರೆಂಡ್ ಡಾ.ಫ್ರಾನ್ಸಿಸ್ ಸೆರಾವೊ ಎಸ್.ಜೆ. ಇವರು ಮಾತನಾಡಿ, ಗುಣಮಟ್ಟದ ಹಾಗೂ ಸಮಾಜಮುಖಿ ಶಿಕ್ಷಣ ನೀಡಲು ಖ್ಯಾತವಾಗಿರುವ ಈ ಸಂಸ್ಥೆ ಅಂತರಾಷ್ಟ್ರೀಯ ಗುಣಮಟ್ಟದೊಂದಿಗೆ ಆರಂಭಿಸುವ ಶಾಲೆಯಿಂದಾಗಿ ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿದೆ ಎಂದರು.
ಶಾಸಕ ಬಿ.ಪಿ.ಹರೀಶ್ ಮಾತನಾಡಿ, ರಾಜ್ಯಪಾಲರು ಬಹು ಹಿಂದೆ ಹರಿಹರ ಸಮೀಪದ ಬಿರ್ಲಾ ಕಂಪನಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದವರು, ಆ ಹಳೆಯ ನೆನಪುಗಳ ಜೊತೆಗೆ ಅವರು ಹರಿಹರಕ್ಕೆ ಬಂದಿದ್ದಾರೆ, ಆ ಕಾರ್ಖಾನೆಯ ಅಧಿಕಾರಿಗಳನ್ನು ಭೇಟಿ ಮಡುವ ಹಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ಈಗ ಶಿಕ್ಷಣವೆಂಬುದು ವ್ಯಾಪಾರೀಕರಣವಾಗಿದೆ. ಸ್ರೀಮತರಿಗಷ್ಟೆ ಶಿಕ್ಷಣ ಪಡೆಯಲು ಸಾಧ್ವಯ ಎಂಬ ವಾತಾವರಣ ಸೃಷ್ಟಿಯಾಗಿದೆ. ಬಡವರ ಶಿಕ್ಷಣಕ್ಕೆ ಮಹತ್ವ ನೀಡುವ ಈ ವಿದ್ಯಾಸಂಸ್ಥೆಯು ಈ ಭಾಗದಲ್ಲಿ ಶಾಲೆ ಆರಂಭಿಸಿರುವುದು ಸೂಕ್ತವಾಗಿದೆ, ತಾಂತ್ರಿಕ ಶಿಕ್ಷಣದ ಕೋರ್ಸ್‍ಗಳನ್ನು ಆರಂಭಿಸುವತ್ತ ಈ ಸಂಸ್ಥೆಯ ಮುಖ್ಯಸ್ಥರು ಆಧ್ಯತೆ ನೀಡಬೇಕೆಂದು ಸಲಹೆ ನೀಡಿದರು.
ರೆವೆರೆಂಡ್ ಫಾ.ಡಯಾನೀಶಿಯಸ್ ವಜ್ ಎಸ್.ಜೆ. ರವರು ಮಾತನಾಡಿ, ನಮ್ಮದು ಮೂಲವಾಗಿ ಧಾರ್ಮಿಕ ಸಂಸ್ಥೆಯಾದರೂ ಶಿಕ್ಷಣ ಪ್ರಸಾರ ಕಾರ್ಯದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ್ದೇವೆ, ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡುವ ಹಂಬಲದೊಂದಿಗೆ ಈ ಶಾಲೆಯನ್ನು ಆರಂಭಿಸಿದ್ದೇವೆ ಎಂದರು.
ರಾಯಚೂರು- ಮಾನ್ವಿ ಭಾಗದಲ್ಲಿ ದಲಿತರು, ದೇವದಾಸಿಯರು, ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸೇವೆಗೈದ ಹಿರಿಯರಾದ ಫಾ.ಮ್ಯಾಕ್ಸಿಮ್ ರಸ್ಕೀನ ಎಸ್.ಜೆ. ಹಾಗೂ 12 ಜನ ವಿದ್ಯಾಭಿಮಾನಿಗಳು, ಪೋಷಕರನ್ನೂ ಗೌರವಿಸಲಾಯಿತು.
ಸಂತ ಅಲೋಶಿಯಸ್ ಮಾತೃ ಸಂಸ್ಥೆ ಮಂಗಳೂರು ಇದರ ರೆಕ್ಟರ್ ಆಗಿರುವ ವಂದನೀಯ ಫಾದರ್ ಮೆಲ್ವಿನ್ ಪಿಂಟೋ ಎಸ್.ಜೆ., ಕಾಲೇಜು ವಿಭಾಗದ ನಿರ್ದೇಶಕ ಫಾ.ಎರಿಕ್ ಮಥಾಯಸ್, ಫಾ.ಮೆಲ್ವಿನ್ ಪಿಂಟೊ, ಬೆಂಗಳೂರಿನ ಸಂತ ಜೋಸೆಫ್ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಚಂದ್ರಕಾಂತ್, ಶಾಲೆಯ ಪ್ರಾಂಶುಪಾಲೆ ರೀನಾ ಪಿಂಟೋ, ಬ್ಯಾಪ್ಟಿಸ್ಟ್ ಸನ್ನಿ ಗುಡಿನೋ, ಉಪನ್ಯಾಸಕರಾದ ಅಬ್ದುಲ್ ರಹಮಾನ್ ಶಮೀಮ್ ಬಾನು, ಹಣಕಾಸು ಅಧಿಕಾರಿ ಫಾ.ವಿನೋದ್ ಎ.ಜೆ., ವಸತಿ ನಿಲಯದ ನಿರ್ದೇಶಕ ಫಾ.ಜೋನ್ ಬ್ಯಾಪ್ಟಿಸ್ಟ್, ಕಾಲೇಜು ಪ್ರಾಂಶುಪಾಲೆ ಪುಷ್ಪಲತಾ ಅರಸ್, ಉಪ ಪ್ರಾಂಶುಪಾಲೆ ಮೌಸಿನ್ ಉಲ್ಲಾ, ಪಾಸ್ಕಲ್ ಫೆನಾರ್ಂಡಿಸ್, ಮಂಜುನಾಥ್ ಟಿ.ಎಸ್ ಇತರರು ಇದ್ದರು.