ದಾವಣಗೆರೆ : 7ನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೆ ತರುವಂತೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರರ ಸಂಘದಿಂದ ಬೈಕ್ ರ್ಯಾಲಿ ನಡೆಸಿದರು.
ಇಲ್ಲಿನ ಸರಕಾರಿ ನೌಕರರ ಸಮುದಾಯ ಭವನದ ಎದುರಿನಿಂದ ಬೈಕ್ ರ್ಯಾಲಿ ಆರಂಭಿಸಿದ ನೌಕರರು, ಜಿಲ್ಲಾ ಉಸ್ತುವಾರಿ ಸಚಿವರ ನಿವಾಸಕ್ಕೆ ತೆರಳಿ ಜಿಲ್ಲಾ ಮಂತ್ರಿ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್. ಒಡೇನಪುರ ಮಾತನಾಡಿ, 6ನೇ ವೇತನ ಆಯೋಗ ರಚನೆಯಾಗಿ 9 ತಿಂಗಳಲ್ಲಿಯೇ ಆ ಆಯೋಗದ ವರದಿಯನ್ನು ಜಾರಿಗೊಳಿಸಲಾಗಿತ್ತು. ಆದರೆ, 7ನೇ ವೇತನ ಆಯೋಗ ಸರಕಾರಕ್ಕೆ ವರದಿ ಸಲ್ಲಿಸಿ, 19 ತಿಂಗಳಾಗಿದ್ದರೂ ಸಹ ಆ ವರದಿಯ ಶಿಫಾರಸುಗಳನ್ನು ಇನ್ನೂ ಜಾರಿಗೊಳಿಸದ ಕಾರಣ ನೌಕರರಿಗೆ ಅನ್ಯಾಯವಾಗಿದೆ. ಆದ್ದರಿಂದ ತಕ್ಷಣವೇ 7ನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೆ ತರಬೇಕಾಗಿದೆ ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಗುರುಮೂರ್ತಿ ಸೇರಿದಂತೆ ನೌಕರರು ಇದ್ದರು.