ದಾವಣಗೆರೆ (Davanagere) : ಜಾನಪದ, ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯಬೇಕಾದ ಅಗತ್ಯವಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ಹೇಳಿದರು.
ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶ್ರೀ ವಾಲ್ಮೀಕಿ ಪ್ರತಿಷ್ಠಾನ ಹಾಗೂ ಸಾರ್ವಜನಿಕ ವಾಲ್ಮೀಕಿ ಜಯಂತ್ಯೋತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಭಜನೆ, ಕೋಲಾಟ ಮತ್ತು ಸೋಬಾನೆ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಕಲಾವಿದರು ಆಗಮಿಸಿರುವುದನ್ನು ಗಮನಿಸಿದರೆ ಜನಪದ ಕಲೆಗಳ ಮಹತ್ವ ಇನ್ನೂ ನಮ್ಮ ನಡುವೆ ಹಾಸು ಹೊಕ್ಕಾಗಿದೆ ಈ ಕಲೆಗಳನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಕೆಲಸವಾಗಬೇಕಿದೆ. ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಬೇಕೆಂದರು.
ಕಲಾ ಪ್ರದರ್ಶನ ವೀಕ್ಷಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಈ ರೀತಿಯ ಗ್ರಾಮೀಣ ಕಲಾ ಪ್ರದರ್ಶನಗಳನ್ನು ಇದೇ ಮೊದಲ ಬಾರಿಗೆ ವೀಕ್ಷಿಸಿದ್ದು, ಮನಸಿಗೆ ತುಂಬಾ ಸಂತೋಷವಾಯಿತು. ಈ ರೀತಿಯ ಕಲೆಗಳನ್ನು ಸ್ಪರ್ಧೆಗಳ ಇರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಗ್ರಾಮೀಣ ಸೊಗಡಿನ ಕಲೆಗಳನ್ನು ಉಳಿಸಿ, ಬೆಳೆಸುವ ಸಲುವಾಗಿ ಮುಕ್ತ ಸ್ಪರ್ಧೆ ನಡೆಯುತ್ತಿರುವುದು ಶ್ಲಾಘನೀಯ. ಸೋಲು-ಗೆಲುವು ಮುಖ್ಯವಲ್ಲ. ಸ್ಪರ್ಧೆ ಅತ್ಯಂತ ಮುಖ್ಯ ಎಂದರು.
ಸಮಿತಿ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಎಲ್ಲ ಜಾತಿ, ಜನಾಂಗದವರು ಸೇರಿ ವಾಲ್ಮೀಕಿ ಜಯಂತಿ ಆಚರಿಸಬೇಕೆನ್ನುವುದೇ ಕಾರ್ಯಕ್ರಮದ ಉದ್ದೇಶವಾಗಿದ್ದು, ಅದಕ್ಕಾಗಿಯೇ ಭಜನೆ, ಸೋಬಾನೆ, ಕೋಲಾಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಕಲಾವಿದರು ಆಗಮಿಸಿದ್ದಾರೆ. 20 ಕ್ಕೂ ಹೆಚ್ಚು ಸೋಬಾನೆ ತಂಡಗಳು ಆಗಮಿಸಿವೆ. ಬರುವ ವರ್ಷದಿಂದ ಸೋಬಾನೆ ಸ್ಪರ್ಧೆಗಾಗಿಯೇ 1 ದಿನ ಮೀಸಲಿಟ್ಟು ಪ್ರಶಸ್ತಿಯ ಮೊತ್ತ 50 ಸಾವಿರ ನಿಗಧಿಪಡಿಸಲು ನಿರ್ಧರಿಸಲಾಗಿದೆ ಎಂದರು.
Read also : Davanagere | ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ
ತಹಶೀಲ್ದಾರ್ ಅಶ್ವಥ್, ಎಪಿಎಂಸಿ ತರಕಾರಿ ದಲ್ಲಾಳರ ಸಂಘದ ಅಧ್ಯಕ್ಷ ಎನ್.ಎನ್.ತಿಪ್ಪೇಸ್ವಾಮಿ ಮಾತನಾಡಿದರು
ಉದ್ಯಮಿ ಪಾಮೇನಹಳ್ಳಿ ಗೌಡರ ಮಂಜುನಾಥ್, ಕಾವೇರಿ ಬೇಕರಿ ಮಾಲಿಕ ರವಿಚಂದ್ರ, ಸಮಿತಿಯ ಪದಾಧಿಕಾರಿಗಳಾದ ಎಲೋದಹಳ್ಳಿ ರವಿಕುಮಾರ್, ಆಲೂರು ಪರಶುರಾಮ್, ಹೂವಿನ ಮಡು ನಾಗರಾಜ್, ಚಿಕ್ಕಮಲ್ಲನಹೊಳೆ ಚಿರಂಜೀವಿ, ರಾಜನಹಟ್ಟಿ ರಾಜು, ಕರಿಯಪ್ಪ ನಾಯಕ, ಕುರ್ಕಿ ಹನುಮಂತ, ಕೋಗಲೂರು ಕುಮಾರ, ಉಪ್ಪನಾಯಕನಹಳ್ಳಿ ಉಮೇಶ, ಇತರರು ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಖಾದರ್, ಬಿ.ಎಚ್.ಪ್ರಕಾಶ್ ಮತ್ತು ಉಮೇಶ್ ನಾಯ್ಕ ಕಾರ್ಯನಿರ್ವಹಿಸಿದರು.
ಮಹಿಳಾ ಸೋಬಾನೆ ಸ್ಪರ್ಧೆ ವಿಜೇತರು: ರಾಜ್ಯ ಪ್ರಶಸ್ತಿ ಪುರಸ್ಕೃತ ಚಿತ್ರದುರ್ಗ ಜಿಲ್ಲೆ ಸಿದ್ದಮ್ಮನಹಳ್ಳಿಯ ಇಂದಿರಮ್ಮ ಮತ್ತು ಸಂಗಡಿಗರು ತಂಡಕ್ಕೆ ಮೊದಲ ಬಹುಮಾನ, ಅಕ್ಕಮಹಾದೇವಿ ಹವ್ಯಾಸ ಮಂಡಳಿ ಶಿಕಾರಿಪುರ ತಂಡಕ್ಕೆ ಎರಡನೇ ಬಹುಮಾನ, ಮೂರನೇ ಬಹುಮಾನ ದುರ್ಗಮ್ಮ ಮತ್ತು ಸಂಗಡಿಗರು ಅಬ್ಬೆನಹಳ್ಳಿ ಚಿತ್ರದುರ್ಗ, ಸಮಾಧಾನಕರ ಬಹುಮಾನ ಪುರುಷರ ವಿಭಾಗದಲ್ಲಿ ದೇವರಾಜ್ ಸಂಗಡಿಗರು, ಪ್ರಗತಿ ಯುವತಿ ಮಂಡಳಿ ಶಿಕಾರಿಪುರ, ಹನುಮಂತ ಮತ್ತು ಸಂಗಡಿಗರು ಚಿಕ್ಕಮಲ್ಲನಹೊಳೆ ತಂಡಕ್ಕೆ ಸಮಾಧಾನಕರ ಬಹುಮಾನ ಲಭಿಸಿದೆ.