ದಾವಣಗೆರೆ : ಸಾತ್ವಿಕ ಶುದ್ಧ ಆಹಾರ ಪದಾರ್ಥಗಳ ಸೇವನೆಯಿಂದ ದೇಹದ ಆರೋಗ್ಯದ ಜೊತೆ ಮಾನಸಿಕ ಆರೋಗ್ಯ ಪಡೆಯಲು ಸಾಧ್ಯ ಎಂದು ಕಣ್ವಕುಪ್ಪಿ ಗವಿಮಠದ ಡಾ.ಶಾಂತಲಿಂಗ ಶಿವಾಚಾರ್ಯ ಶ್ರೀಗಳು ಹೇಳಿದರು.
ದಾವಣಗೆರೆಯ ಸುಶ್ರುತ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ಮಾನವ ವಿಕಾಸ ಫೌಂಡೇಶನ್, ಭಾರತ ವಿಕಾಸ ಪರಿಷತ್ ಗೌತಮ ಶಾಖೆ ಸಹಯೋಗದೊಂದಿಗೆ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ದಶಮಾನೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಾಲಿಗೆಯ ಕ್ಷಣಿಕ ರುಚಿಯ ಆಸೆಗಾಗಿ ನಾವು ದೇಹಕ್ಕೆ ಬೇಡವಾದ ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ ಇದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಾವು ಕುಗ್ಗುತ್ತಿದ್ದೇವೆ ಎಂದು ಹೇಳಿದರು.
ಹಿಂದೆ ಹಣ, ವಿದ್ಯೆ ವಸತಿ ಸಂಪರ್ಕ ಆಹಾರ ಧಾನ್ಯಗಳ ಕೊರತೆ ಇದ್ದಾಗಲೂ ಸಹ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು ಆದರೆ ಇಂದು ವಸತಿ ಸ್ಥಾನಮಾನ ಹಣ ಯಾವುದೇ ಕೊರತೆ ಇಲ್ಲದಿದ್ದರೂ ನೆಮ್ಮದಿ ಹಾಗೂ ಆರೋಗ್ಯವೇ ಇಲ್ಲದಂತ ಜೀವನ ಸಾಗಿಸುವಂಥಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿನಿತ್ಯ ಒಂದು ಗಂಟೆ ಯೋಗ ಧ್ಯಾನ ಮತ್ತು ಪ್ರಾಣಾಯಾಮಗಳಿಗೆ ಮೀಸಲಿಟ್ಟಾಗ ದೇಹದ ಅಂಗಾಂಗಗಳ ಶಕ್ತಿಯುತವಾಗುವುದರ ಜೊತೆಗೆ ಮಾನಸಿಕ ಏಕಾಗ್ರತೆ ಸಾಧ್ಯವಾಗುತ್ತದೆ ಎಂದರು.
ನಾವು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆಯದಿದ್ದರೂ ನಮ್ಮ ಪ್ರಾಚೀನ ಪದ್ದತಿಯಂತೆ ಜೀವನ ನಡೆಸುವುದು ಅವಶ್ಯಕವಾಗಿದೆ ಎಂದು ಹೇಳುವ ಮೂಲಕ ಎಲ್ಲರಿಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭ ಕೋರಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸವoತಪ್ಪನವರು ಮತ್ತು ಸಂಸ್ಥೆಯ ಕಾರ್ಯದ್ರಶಿಗಳಾದ ಡಾ. ಸತೀಶ್ ಬಿ. ಜಿ ಉಪಸ್ಥಿತರಿದ್ದರು.
ಕಾಲೇಜು ಅಧ್ಯಾಪಕರಾದ ಡಾ.ಸೌಮ್ಯ ಯೋಗ ಮತ್ತು ಪ್ರಾಣಾಯಾಮ ಕುರಿತು ವಿಶ್ಲೇಷಣೆ ಸಹಿತ ಮಾಡಿಸಲಾಯಿತು.
ನಿರೂಪಣೆಯನ್ನು ಡಾ. ಚಿನ್ಮಯಿ ಹಾಗೂ ಡಾ.ಸಹನಾ ಅವರು ಮಾಡಿದರು, ಪ್ರಾರ್ಥನೆಯನ್ನು ಕೃತಿಕಾ ಎಸ್ ಮತ್ತು ಸಂಗಡಿಗರು ಮಾಡಿದರು, ಸ್ವಾಗತವನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ.ಅಕ್ಬರ್ ಖಾನ್ ಮಾಡಿದರು, ಡಾ.ಸೌಮ್ಯ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಳಿಸಿದರು