ದಾವಣಗೆರೆ (Davanagere): ಇಸ್ಲಾಂ ಧರ್ಮ, ಪ್ರವಾದಿ ಮಹಮ್ಮದ್ ಪೈಗಂಬರರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಅವಮಾನ ಮಾಡಿರುವ ಯತಿ ನರಸಿಂಹಾನಂದ ಅವರಿಗೆ ಕಠಿಣ ಶಿಕ್ಷೆ ಕೊಡಬೇಕೆಂದು ಒತ್ತಾಯಿಸಿ ದಾವಣಗೆರೆಯ ತಂಜಮೀಲ್ ಮುಸ್ಲಿಂಮೀನ್ ಫಂಡ್ ಅಸೋಸಿಯೇಷನ್ ನೇತೃತ್ವದಲ್ಲಿ ಧರ್ಮಗುರುಗಳು, ಮೌಲ್ವಿಗಳು, ಮುಸ್ಲಿಂ ಸಂಘ-ಸಂಸ್ಥೆಗಳ ಮುಖಂಡರು, ಹಾಗೂ ಮುಸ್ಲಿಂ ಸಮಾಜ ಬಾಂಧವರು, ತಂಜೀಮುಲ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಯತಿ ನರಸಿಂಹಾನಂದ ಸರಸ್ವತಿ ಸ್ವಾಮಿ ಅವರು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ನಿಂದಿಸಿ ಆಹೇಳನ ಮತ್ತು ಪ್ರಚೋದನಕಾರಿ ಭಾಷಣ ಮಾಡಿ ಕೋಮು ಭಾವನೆಗೆ ಧಕ್ಕೆ ತರಲು ಪ್ರಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಸಮಸ್ತ ಮುಸ್ಲಿಂ ಸಮಾಜಕ್ಕೆ ನೋವನ್ನುಂಟು ಮಾಡಿದೆ. ಪದೇ ಪದೇ ಇಂತಹ ಅವಹೇಳನಕಾರಿ ಭಾಷಣ ಮಾಡುತ್ತಿರುವ ನರಸಿಂಹಾನಂದ ಸ್ವಾಮಿಯ ಮೇಲೆ ಯುಎಪಿಎ ಕಾಯಿದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಕಠಿಣ ಶಿಕ್ಷೆ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.
ಯಾವುದೇ ಜಾತಿಯ, ಧರ್ಮದ ವ್ಯಕ್ತಿಯಾಗಲಿ ಯಾವುದೇ ಸಮುದಾಯದ ಧರ್ಮ ಗುರುಗಳ ಹಿರಿಯರ ಬಗ್ಗೆ ಅವಹೇಳನ ಮತ್ತು ಪ್ರಚೋದನಾಕಾರಿ ಭಾಷಣ ಮಾಡುವುದಾಗಲಿ, ನಿಂದಿಸುವುದಾಗಲಿ ಮಾಡಿದರೆ ಅವರು ಯಾವುದೇ ಧರ್ಮದ ಜಾತಿಯ ವ್ಯಕ್ತಿಯಾಗಿದ್ದರೂ, ಆತನ ಮೇಲೆ ನಿರ್ದಾಕ್ಷಣೆ ಕ್ರಮ ಜರುಗಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲು ಲೋಕಸಭಾ ಅಧಿವೇಶನದಲ್ಲಿ ಕಾಯ್ದೆ ಮಂಡಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಂಜಿಮಲ್ ಮುಸ್ಲಿಮೀನ್ ಅಂಡ್ ಅಸೋಸಿಯೇಷನ್ ಅಧ್ಯಕ್ಷ ದಾದಾಪೀರ್, ಉಪಾಧ್ಯಕ್ಷರಾದ ಅಮ್ಜದುಲ್ಲಾ, ಸೆಕ್ರೆಟರಿ ಶಬೀರ್ ಅಲಿಖಾನ್ ಮತ್ತು ಸದಸ್ಯರಾದ ಎ. ದಾದಾಪೀರ್, ಮೌಲಿಗಳಾದ ಹಫೀಝ್ ರಜಾ ಇತರ ಮುಖಂಡರು ಮೌಲಾನಗಳು, ನೂರಾರು ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು.
Read Also : Davanagere | ಆಟೋರಿಕ್ಷಾದಲ್ಲಿ ಮರೆತು ಹೋಗಿದ್ದ ಅಭರಣ ಹಿಂತಿರುಗಿಸಿದ ಪೊಲೀಸರು