ದಾವಣಗೆರೆ (Davanagere): ಮಾದಕ ವಸ್ತುಗಳನ್ನು ಅಪ್ರಾಪ್ತರು, ಯುವಕರು ಬಳಸಿ, ಕೊಲೆ, ದರೋಡೆ ಮಾಡುವುದು, ಜನರಿಗೆ ತೊಂದರೆ ನೀಡುವುದನ್ನು ಮಾಡುತ್ತಿದ್ದು, ಅಂತಹ ಮಾದಕ ವಸ್ತು ಸಾಗಾಟ, ಮಾರಾಟ, ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಚನ್ನಗಿರಿ ತಾ. ನಲ್ಲೂರು ಗ್ರಾಮದ ತಂಜೀಮ್ ಉಲ್ ಮುಸ್ಲಿಮೀನ್ ಸಮಿತಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿದೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತರನ್ನು ಭೇಟಿ ಮಾಡಿದ್ದ ನಲ್ಲೂರು ಗ್ರಾಮದ ತಂಜೀಮ್ ಉಲ್ ಮುಸ್ಲಿಮೀನ್ ಸಮಿತಿ ಪದಾಧಿಕಾರಿಗಳು, ಸಮಾಜದ ಮುಖಂಡರು, ನಲ್ಲೂರು ಭಾಗದಲ್ಲಿ ಮಾದಕ ವಸ್ತುಗಳ ಹಾವಳಿ, ಅಪಾಯ, ಅನಾಹುತಗಳನ್ನು ತಡೆಯುವಂತೆ ಮನವಿ ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ಸಮಿತಿ ಕಾರ್ಯದರ್ಶಿ ಅಫ್ರೋಜ್ ಬೇಗ್, ಚನ್ನಗಿರಿ ಪಟ್ಟಣ ಹಾಗೂ ನಲ್ಲೂರು ಗ್ರಾಮಗಳ ಭಾಗದಲ್ಲಿ ದಿನದಿನಕ್ಕೂ ಮಾದಕ ವ್ಯಸನಿಗಳ ಹಾವಳಿ ಹೆಚ್ಚುತ್ತಿದೆ. ಅಪ್ರಾಪ್ತ ಮಕ್ಕಳು, ಯುವಕರು ಮಾದಕ ವಸ್ತುಗಳನ್ನು ಬಳಸಿಕೊಂಡು, ಕೊಲೆ, ದರೋಡೆ, ಸುಲಿಗೆ, ಜನ ಸಾಮಾನ್ಯರಿಗೆ ತುಂಬಾ ತೊಂದರೆ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ನಲ್ಲೂರಿನಲ್ಲಿ ಏ.2ರಂದು ಮಾದಕ ವಸ್ತುಗಳನ್ನು ಉಪಯೋಗಿಸಿ, ಅಮಾಯಕ ಯುವಕ ಮೊಹಮ್ಮದ್ ಜಾವಿದ್‌ನನ್ನು ಕೊಲೆ ಮಾಡಲಾಗಿದೆ. ಮೊಹಮ್ಮದ್ ಜಾವಿದ್‌ನನ್ನು ಹತ್ಯೆ ಮಾಡಿದ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು, ಮಾದಕ ವಸ್ತುಗಳನ್ನು ಸೇವಿಸಿ, ಕೊಲೆ ಮಾಡಿರುವುದಾಗಿ ಪೊಲೀಸರ ಸಮಕ್ಷಮ ಒಪ್ಪಿಕೊಂಡಿದ್ದಾರೆ. ಇಂತಹ ಘಟನೆಯಿಂದಾಗಿ ಗ್ರಾಮಸ್ಥರು ತೀವ್ರ ಭಯದಲ್ಲೇ ದಿನ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದರು.
ಚನ್ನಗಿರಿ ಪಟ್ಟಣ, ನಲ್ಲೂರು ಗ್ರಾಮ ಸೇರಿದಂತೆ ಇಡೀ ತಾಲೂಕಿನಲ್ಲಿ ಯಾರೇ ಮಾದಕ ವಸ್ತುಗಳನ್ನು ಬಳಸುವವರು, ಸಾಗಾಟ ಮಾಡುವವರು, ಪೂರೈಸುವವರು, ಮಾರಾಟ ಮಾಡುವವರು ಯಾರೇ ಆಗಿದ್ದರೂ ಅಂತಹವರನ್ನು ಪತ್ತೆ ಮಾಡಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮಾದಕ ವಸ್ತುಗಳನ್ನು ಸೇವಿಸಿ, ಮೈಮೇಲೆ ಪ್ರಜ್ಞೆ ಇಲ್ಲದವರಂತೆ ಅಪರಾಧ ಕೃತ್ಯಗಳನ್ನು ಎಸಗುವ ದುಷ್ಕರ್ಮಿಗಳನ್ನು ಮಟ್ಟ ಹಾಕಬೇಕು ಎಂದು ಅವರು ಒತ್ತಾಯಿಸಿದರು.
ದಿನದಿನಕ್ಕೂ ನಲ್ಲೂರು ಗ್ರಾಮ, ಚನ್ನಗಿರಿ ತಾಲೂಕಿನಲ್ಲಿ ಮತ್ತು ಬರುವ ಪದಾರ್ಥಗಳು, ಮಾದಕ ವಸ್ತುಗಳನ್ನು ಬಳಸಿ, ನಶೆಗೆ ವಿದ್ಯಾರ್ಥಿ, ಯುವ ಜನರು, ಅಪ್ರಾಪ್ತ ಮಕ್ಕಳು ತಮ್ಮ ಬದುಕು, ಆರೋಗ್ಯ, ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಲ್ಲೂರು ಗ್ರಾಮದ ಯುವ ಮೊಹಮ್ಮದ್ ಜಾವೀದ್ ಹತ್ಯೆಯೂ ಸಹ ಮಾದಕ ವಸ್ತುಗಳನ್ನು ಸೇವಿಸಿದ್ದ ದುಷ್ಕರ್ಮಿಗಳಿಂದಲೇ ಆಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮಾದಕ ವಸ್ತುಗಳ ನಿರ್ಮೂಲನೆಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
Read also : ವಕ್ಫ್ ಆಸ್ತಿಗಳ ಮೇಲಿನ ಸಮುದಾಯದ ಹಕ್ಕನ್ನು ಕಿತ್ತೆಸೆಯುವ ಪ್ರಯತ್ನ : ತಾಹೀರ್ ಸಮೀರ್
ತಂಜೀಮ್ ಉಲ್ ಮುಸ್ಲಿಮೀನ್ ಸಮಿತಿ ಪದಾಧಿಕಾರಿಗಳು, ಮಸ್ಲಿಂ ಸಮಾಜದ ಮುಖಂಡರಾದ ಖಾಜಿ ತಬ್ರೇಜ್, ವಸೀಂ ಅಹಮ್ಮದ್, ರಹಮತ್ತುಲ್ಲಾ, ಅಸ್ಲಂ ಶಾಮಿಯಾನ, ಜಬೀವುಲ್ಲಾ, ಫಯಾಜ್ ಅಹಮ್ಮದ್ ಸೇರಿದಂತೆ ನಲ್ಲೂರು ಗ್ರಾಮಸ್ಥರು, ವಿದ್ಯಾರ್ಥಿ, ಯುವ ಜನರು ಇದ್ದರು.