ಹರಿಹರ: ಎಸ್‍ಎಸ್‍ಎಲ್‍ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಪುನರ್ಬಲನ ತರಗತಿಗಳನ್ನು ಮೇ 15ರ ಬದಲು ಮೇ 29 ರಿಂದ ಆರಂಭಿಸುವಂತೆ ಒತ್ತಾಯಿಸಿ ತಾಲೂಕು ಪ್ರೌಡಶಾಲಾ ಸಹ ಶಿಕ್ಷಕರ ಸಂಘ ದಿಂದ ಕ್ಷೇತ್ರಶಿಕ್ಷಣಾಧಿಕಾರಿ ಎಂ.ಹನುಮಂತಪ್ಪನವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಾಲೂಕು ಪ್ರೌಡಶಾಲಾ ಸಹ ಶಿಕ್ಷಕರ ಸಂಘ ಅಧ್ಯಕ್ಷ ಈಶಪ್ಪ ಬೂದಿಹಾಳ್ ಪುನರ್ಬಲನ ತರಗತಿಗಳನ್ನು ತೆಗೆದುಕೊಳ್ಳಲು ಸಹಶಿಕ್ಷಕರು ಶಾಲಾ ಕರ್ತವ್ಯಕ್ಕೆ ಹಾಜರಾಗಬೇಕೆಂದು ಆದೇಶಿಸಿರುವುದು ಗಮನಕ್ಕೆ ಬಂದಿದ್ದು, ಈ ವಿಚಾರವು ಶಿಕ್ಷಕರ ಸಮುದಾಯದಲ್ಲಿ ತೀವ್ರ ಅಸಮಾಧಾನ, ಆಕ್ರೋಶಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದರು.
ಶಿಕ್ಷಣ ಇಲಾಖೆ ರಜಾ ಸಹಿತ ಇಲಾಖೆಯಾಗಿದ್ದರೂ ಸಹಶಿಕ್ಷಕರು ರಜೆ ಅವಧಿಯಲ್ಲಿ ಏಪ್ರಿಲ್ ತಿಂಗಳು ಬಹುತೇಕ ಅವಧಿಯಲ್ಲಿ ಎಸ್.ಎಸ್.ಎಲ್.ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಳಿಸಿರುತ್ತಾರೆ. ಅಲ್ಲದೆ ಚುನಾವಣಾ ಕರ್ತವ್ಯಗಳು ಚೆಕ್ ಪೋಸ್ಟ್, ಸೆಕ್ಟರ್, ಮಾಸ್ಟರ್ ಟ್ರೈನರ್ ಐ.ಎಲ್.ಓ ನಿಯೋಜನೆ ಹೀಗೆ ಹಲವಾರು ನಿಯೋಜನೆ ಕರ್ತವ್ಯಗಳಲ್ಲಿಯೂ ರಜಾ ಅವಧಿಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಅಲ್ಲದೆ ಶೈಕ್ಷಣಿಕ ಅವಧಿಯಲ್ಲಿಯೂ ಶಿಕ್ಷಕರು ಪಾಠಬೋಧನೆ ಪರೀಕ್ಷೆಗಳ ಆಯೋಜನೆ ಪ್ರತಿ ದಿನ ವಿಶೇಷ ತರಗತಿ, ಗುಂಪು ಅಧ್ಯಯನ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಗಮನ ನೀಡುವುದು. ಪಾಸಿಂಗ್ ಪ್ಯಾಕೇಜ್ ಅಭ್ಯಾಸ ಮಾಡಿಸುವುದು, ಮಕ್ಕಳ ಮನೆ ಭೇಟಿ, ಪೋಷಕರ ಸಭೆಗಳು, ಪೋಷಕರ ಹಾಗೂ ತಾಯಂದಿರ ಸಭೆಗಳು, ವಿಷಯವಾರು ತಜ್ಞರಿಂದ ತರಬೇತಿಗಳನ್ನು ಕೈಗೊಳ್ಳುತ್ತೇವೆ ಎಂದರು.
ವಿದ್ಯಾಥಿಗಳು ಉತ್ತೀರ್ಣರಾಗಲು ಸಹಶಿಕ್ಷಕರು ಪ್ರಯತ್ನ ಪಟ್ಟಿದ್ದರೂ ಸ್ವಲ್ಪವೂ ಶಿಕ್ಷಕರ ಮೇಲೆ ಗೌರವ ಮಾನವೀಯತೆ ಇಲ್ಲ ಎಂಬುದು ಈ ಆದೇಶ ದಿಂದ ಎದ್ದು ಕಾಣುತ್ತದೆ. ಉತ್ತಮ ಶಿಕ್ಷಣ ನೀಡುವ ಮನಸ್ಥಿತಿಯಲ್ಲಿರುವ ಶಿಕ್ಷಕರ ಹೃದಯವನ್ನು ಕದಡುತ್ತಿದ್ದು ಇಂತಹ ಆದೇಶಗಳು ಬಹುತೇಕ ಶಿಕ್ಷಕರು ಭ್ರಮನಿರಸನಗೊಂಡು ಸ್ವಯಂ ನಿವೃತ್ತಿಗೆ ಆಲೋಚನೆ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದರು.
ಶಿಕ್ಷಕರುಗಳಿಂದ ನಿರಂತರ ಮಾನಸಿಕ ಒತ್ತಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುತ್ತಾರೆ ಬಿಇಒ, ಡಿಡಿಪಿಐ ಮೂಲಕ ಶಿಕ್ಷಕರನ್ನು ರಜಾ ಅವಧಿಯಲ್ಲಿಯೂ ಒತ್ತಾಯಪೂರ್ವಕವಾಗಿ ಕರ್ತವ್ಯಕ್ಕೆ ಹಾಜರಾಗಲೂ ಹೇಳುತ್ತಿರುವುದು ಶಿಕ್ಷಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನಲೆಯಲ್ಲಿ ಮೇ 15 ರ ಬದಲು ಎಸ್‍ಎಸ್‍ಎಲ್‍ಸಿ ಪುನರ್ಬಲನ ತರಗತಿಗಳನ್ನು ಮೇ 29 ರಿಂದ ಜೂನ್ 06 ರವರೆಗೆ 10 ದಿನಗಳ ಅವಧಿಗೆ ಆಯೋಜಿಸುವುದು ಮತ್ತು ಶಿಕ್ಷಣ ಇಲಾಖೆಯನ್ನು ರಜಾ ರಹಿತ ಇಲಾಖೆ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ತಾಲೂಕು ಪ್ರೌಡಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಡಿ.ಧನ್ಯಕುಮಾರ್, ರಾಜ್ಯ ಪರಿಷತ್ ಸದಸ್ಯ ಡಿ.ಎಂ.ಮಂಜುನಾಥಯ್ಯ, ಜಿಲ್ಲಾ ಪ್ರತಿನಿಧಿ ಎಂ.ಇ.ಲಿಂಗರಾಜ್, ಮುಖ್ಯೊಪಾಧ್ಯಯ ಸಂಘದ ಬಿ.ರೇವಣನಾಯ್ಕ್ ಇದ್ದರು.