ಲಡಾಯಿ ಪ್ರಕಾಶನ ಪ್ರಕಟಿಸಿರುವ ನವೀನ್ ಸೂರಿಂಜೆಯವರ “ನಡು ಬಗ್ಗಿಸದ ಎದೆಯ ದನಿ” ಮಹೇಂದ್ರ ಕುಮಾರ್ ಅವರ ಸಂಘಟನಾ ಬದುಕಿನ ಅನುಭವ ಕಥನ ಪುಸ್ತಕದಲ್ಲಿ ದಾಖಲಿಸಿರುವ ಅನುಭವಗಳು ,ದಲಿತ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ನನ್ನಂತವನ ಅನುಭವಗಳು ಕೂಡ ಹೌದು.
ವಿದ್ಯಾರ್ಥಿ ಯುವಜನ ಸಂಘಟನೆ ಯೊಂದಿಗೆ ಮೂರು ದಶಕಗಳ ಹಿಂದೆ ಆರಂಭಗೊಂಡ ನನ್ನ ಸಂಘಟನಾ ಪಯಣ ಸರ್ಕಾರಿ ನೌಕರರ ಸಂಘ ಹಾಗೂ ಶಾಲಾ ಶಿಕ್ಷಕರ ಸಂಘದಲ್ಲಿ ಮುಂದುವರೆದಿದೆ.
ಅಧಿಕಾರ ಹಿಡಿದಿರುವ ಹಾಗೂ ಅಧಿಕಾರದ ವಿವಿಧ ಮಜಲುಗಳನ್ನು ಅನುಭವಿಸುತ್ತಿರುವ ನಾಯಕರುಗಳಿಗೆ, ಸೈದ್ಧಾಂತಿಕ ಬದ್ಧತೆ ಹಾಗೂ ನಿಷ್ಠೆಯುಳ್ಳಂತಹ ಅನೇಕ ಹೋರಾಟಗಾರರು ‘ಸಾಯಲು ಹಾಗೂ ಸಾಯಿಸಲು ಕಾಲಾಳುಗಳು ಬೇಕೆ ವಿನಹ ನಾಯಕರಾಗುವುದು ಬೇಕಿಲ್ಲ’ ಎಂಬ ಮಾತು ನಮ್ಮಂತವರ ಸ್ವಾಭಿಮಾನವನ್ನು ಸ್ಪರ್ಶಿಸಿ ಜಾಗೃತಗೊಳಿಸಿದೆ.
ಯಾವ ಲಾಭವೂ ಇಲ್ಲದೆ ಸಮಾಜಮುಖಿಯಾಗಿ ತೊಡಗಿಸಿಕೊಂಡ ಜನ ಪ್ರಸ್ತುತ ಸಮಾಜಸೇವೆಯಲ್ಲಿ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ ಸೇವೆ ,ಹೋರಾಟದ ಹೆಸರಿನಲ್ಲಿ ಸಂಘಟನೆಗೆ ಇಳಿದಿರುವ ಕೆಲವರು ತಮ್ಮ ಸ್ವಾರ್ಥ ಹಾಗೂ ಸ್ವಹಿತಾ ಸಕ್ತಿಗಾಗಿ ,ರಾಜಕೀಯ ಲಾಭಕ್ಕಾಗಿ ಸಂಘಟನೆಗಳನ್ನ ಸೃಷ್ಟಿಸಿಕೊಳ್ಳಲಾಗಿದೆ ಎನ್ನುವ ಅನುಮಾನ ಇತ್ತೀಚಿಗೆ ಬಲವಾಗತೊಡಗಿದೆ.
ಮಹೇಂದ್ರ ಕುಮಾರ್ ಅವರ ಅನುಭವ ಕಥನದಲ್ಲಿ ನವೀನ್ ಸೂರಂಜಿಯವರು ಉಲ್ಲೇಖಿಸಿರುವಂತೆ ಈ ದೇಶಕ್ಕೆ ಬೇಕಿರುವುದು ಗಲಾಟೆಗಳು ಅಲ್ಲ ,ಜಗಳಗಳು ಅಲ್ಲ ,ಪರಸ್ಪರ ವೈಷಮ್ಯಗಳು ಅಲ್ಲ, ಈ ದೇಶಕ್ಕೆ ಬೇಕಿರೋದು ಪ್ರೀತಿಯ ಹೆಜ್ಜೆ, ಸೌಹಾರ್ದತೆಯ ಹೆಜ್ಜೆ ,ಸಮನ್ವತೆಯ ಕೂಗು ಆ ಧ್ವನಿಯೇ ನಮ್ಮ ಧ್ವನಿ ಹಾಗಾಗಿ ನಮ್ಮ ಧ್ವನಿ ಜೀವ ಪಥದೊಂದಿಗೆ ಎಂಬ ಮಾತು ಅಕ್ಷರಶಃ ಸತ್ಯ , ಅಧಿಕಾರ ಪಡೆದ ಅಥವಾ ಅಧಿಕಾರ ಹಿಡಿದ ಇಲ್ಲವೇ ಅಧಿಕಾರ ಹೊಡೆದುಕೊಂಡ ನಾಯಕರುಗಳು ಪರಸ್ಪರ ಒಬ್ಬರು ಮತ್ತೊಬ್ಬರ ಮಧ್ಯೆ ದ್ವೇಷಗಳನ್ನು ಜೀವಂತವಾಗಿರಿಸಿ ತಮ್ಮ ಸ್ಥಾನ ಪಲ್ಲಟವಾಗದಂತೆ ನೋಡಿಕೊಂಡು ಸ್ಥಾನ-ಮಾನಿಯಾಗಲು ಪ್ರಯತ್ನಿಸುವುದು ಈ ದೇಶದ ವ್ಯವಸ್ಥೆಯ ದುರಂತ.
ನ್ಯಾಯಪರ ಇರುವ ನಿಷ್ಠಾವಂತರನ್ನು ಸಮಾಜ ಹೊಡೆಯುವುದಕ್ಕೆ ,ಮನುಷ್ಯ- ಮನುಷ್ಯರ ನಡುವೆ ಕಂದಕಗಳನ್ನು ಸೃಷ್ಟಿ ಮಾಡೋದಕ್ಕೆ ,ಬಳಸಿಕೊಳ್ಳಲಾಗುತ್ತಿದೆ ,ಬದ್ಧತೆ ಹೊಂದಿರುವ ಜನಗಳನ್ನ ಒಂದು ರೀತಿಯ ಅಸ್ತ್ರವಾಗಿ ಮಾಡಿಕೊಳ್ಳಲಾಗುತ್ತಿದೆ,ಕೇವಲ ಅನುಕಂಪ ಹಾಗೂ ಲೊಚಗುಟ್ಟುವಿಕೆಯಿಂದ ಯಾರ ಭವಿಷ್ಯವು ಬದಲಾಗುವುದಿಲ್ಲ ಅದಕ್ಕೆ ಬದಲಾಗಿ ಪ್ರಾಂಜಲ ಮನಸಿನ ಬೆಂಬಲ ಇರಬೇಕಿದೆ ,ತಬ್ಬಲಿ ಸಮಾಜಗಳ ಜನರ ಬದ್ಧತೆ ಹಾಗೂ ಧೈರ್ಯಗಳಿಗೆ ನೈಜ ಮತ್ತು ಪ್ರಾಮಾಣಿಕ ಬೆಂಬಲದ ಕೊರತೆ ಎಲ್ಲಾ ರಂಗಗಳಂತೆ ಸಂಘಟನಾ ರಂಗವನ್ನು ಹೊಕ್ಕು ಹಾಳು ಮಾಡಿರುವುದು ಈ ವ್ಯವಸ್ಥೆಯ ದೌರ್ಬಲ್ಯವಲ್ಲದೆ ಬೇರೇನು ಅಲ್ಲ.
ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂಬ ನೈಜ ಕಾಳಜಿ ಇದ್ದರೆ ದ್ವೇಷಸೂಯೆ ಹಾಗೂ ಮತ್ಸರಗಳಿಂದ ಹೊರಬರಬೇಕೆಂಬ ಹಂಬಲವುಳ್ಳ ಜನರ ಕನಸುಗಳಿಗೆ ನೀರೆರಯಬೇಕಿದೆ.
ಸಂಘಟನಾ ಬದುಕಿನಲ್ಲಿ ಇರುವವರು ನ್ಯಾಯಪರ ನಾಗಿರುವುದರ ಜೊತೆಗೆ ನಿಷ್ಟುರವಾದಿಯಾಗಿರಬೇಕು*, ಲಾಭ ಬುಡುಕತನ ಮನಸ್ಥಿತಿ ಹೊಂದಿರುವ ಯಾವ ನಾಯಕನಿಂದ ಇದುವರೆಗೆ ಯಾವ ಕ್ರಾಂತಿಯು ಆಗಿಲ್ಲ, ಕ್ರಾಂತಿ ಎಂದರೆ ಭಗತ್ ಸಿಂಗ್ ಹೇಳಿದಂತೆ ಅವ್ಯವಸ್ಥೆಯ ಬುನಾದಿಯ ಮೇಲೆ ಕಟ್ಟಿದ ವ್ಯವಸ್ಥೆಯ ಬದಲಾವಣೆ ಆಗಬೇಕು ಅಲ್ಲದೆ ಯಾವ ಮದ್ದು ಗುಂಡುಗಳ ಆರಾಧನೆ ಅಲ್ಲಾ,ಅಂತೆಯೇ ಕ್ರಾಂತಿಯು ತ್ಯಾಗ ಹಾಗೂ ಬಲಿದಾನವನ್ನು ಕೇಳುತ್ತದೆ.ತನ್ನೊಳಗೆ ತಾನು ಬದಲಾವಣೆ ಆಗದವರು ಬೇರೆಯವರನ್ನಾಗಲಿ ಹಾಗೂ ವ್ಯವಸ್ಥೆಯ ಬದಲಾವಣೆಗೆ ಪ್ರಯತ್ನಿಸುವುದು ವ್ಯರ್ಥ ಪ್ರಯತ್ನ.
ಗೋಸುಂಬೆತನ,ಗುಳ್ಳೆ ನರಿ ಬುದ್ಧಿಯ ಹಾಗು ಮನಸು-ಮನಸುಗಳ ನಡುವೆ ಗೋಡೆ ಕಟ್ಟುವ ಜನಗಳ ಮಧ್ಯೆ ನಿಷ್ಠೆ ,ಪ್ರಾಮಾಣಿಕತೆ ,ಬದ್ಧತೆ ಹಾಗೂ ನಾವು ವಹಿಸಿಕೊಂಡಿರುವ ಜವಾಬ್ದಾರಿಯ ಹೊಳನೋಟದ ಅರಿವು ಇದ್ದರೆ ನಮ್ಮ ನಡುವೆ ಪ್ರೀತಿಯ ಬೆಸುಗೆ ಸದಾ ಇರುತ್ತದೆ.
“ನಡುಬಗ್ಗಿಸದ ಎದೆಯ ದನಿ” ಪುಸ್ತಕದೊಳಗೆ ಹೇಳಿರುವಂತೆ ಕಾನೂನು ಕೈಗೆ ತೆಗೆದುಕೊಳ್ಳುವುದು ಕ್ರಿಮಿನಲ್ ಕಿಡಿಗೇಡಿತನವಾದರೂ ಅದಕ್ಕೆ ಧೈರ್ಯ ಹಾಗೂ ಬದ್ಧತೆ ಬೇಕುಎನ್ನುವ ಮಾತು ಸಂಘಟನಾ ಬದುಕಿನ ಸುಧೀರ್ಘ ದಾರಿಯಲ್ಲಿ ನಡೆದು ಬಂದಿರುವ ನನ್ನಂಥವನ ಅನುಭವ ಮಹೇಂದ್ರಕುಮಾರ್ ಅವರ ಅನುಭವಕ್ಕಿಂತ ಹೊರತೇನಲ್ಲ.
ಬಸವರಾಜ ಸಂಗಪ್ಪನವರ್
ಹರಪನಹಳ್ಳಿ