ದಾವಣಗೆರೆ ಏಪ್ರಿಲ್ 15 (Davanagere): ನ್ಯಾಮಮೂರ್ತಿ ಹಾಗೂ ಉಪಲೋಕಾಯುಕ್ತರಾದ ಬಿ.ವೀರಪ್ಪ ಅವರು ಏ.22 ರಿಂದ 26 ರವರೆಗೆ ಐದು ದಿನಗಳ ಕಾಲ ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಏ, 24 ರಂದು ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಸಾರ್ವಜನಿಕರಿಂದ ನೇರವಾಗಿ ದೂರು ಅರ್ಜಿಗಳನ್ನು ಸ್ವೀಕರಿಸುವರು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್ ತಿಳಿಸಿದರು.
ಮಂಗಳವಾರ ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಪಲೋಕಾಯುಕ್ತರ ಭೇಟಿ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಏ, 23 ರಂದು ವಿವಿಧ ಸ್ಥಳಗಳ ವೀಕ್ಷಣೆ ಹಾಗೂ ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು.
ಏ.24 ರಂದು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮ.1.30 ಹಾಗೂ ಮ.2.30 ರಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರಿಂದ ದೂರು ಹಾಗೂ ಅಹವಾಲು ಸ್ವೀಕರಿಸಿ ನೇರವಾಗಿ ವಿಚಾರಣೆ ನಡೆಸುವರು. ಏ.25 ರಂದು ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ತುಂಗಭದ್ರಾ ಸಭಾಂಗಣದಲ್ಲಿ ಲೋಕಾಯುಕ್ತದಲ್ಲಿ ಬಾಕಿ ಇರುವ ಬಾಕಿ ಪ್ರಕರಣಗಳನ್ನು ದೂರುದಾರರ ಸಮಕ್ಷಮದಲ್ಲಿ ನೇರವಾಗಿ ವಿಚಾರಣೆ ನಡೆಸುವರು.
Read also : World Hemophilia Day | ವಿಶ್ವ ಹಿಮೋಫಿಲಿಯಾ ದಿನ : ರಾಜ್ಯದಾದ್ಯಂತ ಹತ್ತು ಹಲವು ಕಾರ್ಯಕ್ರಮ
ಸಾರ್ವಜನಿಕರು ಸರ್ಕಾರಿ ಇಲಾಖೆಗಳಲ್ಲಿ ಸಲ್ಲಿಸಿದ ಅರ್ಜಿಗಳನ್ನು ವಿಲೆಮಾಡದೇ ಬಾಕಿ ಇಟ್ಟಿರುವ ಬಗ್ಗೆ ಮತ್ತು ದುರಾಡಳಿತ, ಕರ್ತವ್ಯ ನಿರ್ವಹಣೆಯಲ್ಲಿ ವಿಫಲತೆ, ಯೋಜನೆಗಳು ಮತ್ತು ಸೌಲಭ್ಯಗಳನ್ನು ತಲುಪಿಸುವಲ್ಲಿ ವಿಫಲತೆ ಮತ್ತು ಅವ್ಯಹಾರಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಬಹುದು. ದೂರು ನೀಡಲು ಆಗಮಿಸುವ ಸಾರ್ವಜನಿಕರಿಗೆ ಪ್ರತ್ಯೇಕ ಕೌಂಟರ್‍ಗಳನ್ನು ಸ್ಥಾಪಿಸಿ ಸ್ವೀಕರಿಸಲಾಗುತ್ತದೆ. ಮತ್ತು ಸಾರ್ವಜನಿಕರಿಗೆ ಊಟ, ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಯಾವುದೇ ಆತಂಕವಿಲ್ಲದೆ ತಮ್ಮ ಕುಂದುಕೊರತೆ ಅರ್ಜಿಗಳನ್ನು ನೀಡಬಹುದಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಂ.ಎಸ್.ಕೌಲಾಪೊರೆ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಮತಾ ಹೊಸಗೌಡರ್ ಉಪಸ್ಥಿತರಿದ್ದರು.