ದಾವಣಗೆರೆ (Davangere Dist) : ಶಾಲೆಗೆ ಹೋಗಿದ್ದ ಮಗಳನ್ನು ಕರೆ ತರಲು ಹೋಗಿದ್ದ ವೇಳೆ ಇಲ್ಲಿನ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಮಹಿಳೆಯ ಚಿನ್ನದ ಸರಗಳನ್ನು ಕಿತ್ತುಕೊಂಡು ಹೋಗಿದ್ದ ಇಬ್ಬರು ಸರಗಳ್ಳರನ್ನು ಕೃತ್ಯ ಎಸಗಿದ 24 ಗಂಟೆಯಲ್ಲೇ ಬಂಧಿಸಿ, 1.78 ಲಕ್ಷ ರೂ., ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಬೈಕನ್ನು ಇಲ್ಲಿನ ವಿದ್ಯಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಚನ್ನಗಿರಿತಾ. ಕತ್ತಲಗೆರೆ ಗ್ರಾಮದ ವಾಸಿಗಳಾದ ಮೂಲತಃ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾ. ಹಲಗೇರಿ ಗ್ರಾಮದ ತುಮ್ಮನಕಟ್ಟೆ ರಸ್ತೆಯ ಎಪಿಎಂಸಿ ಸಮೀಪದ ವಾಸಿ ಬಿ..ಅರುಣಕುಮಾರ(23 ವರ್ಷ) ಹಾಗೂ ಬಿ.ಎಸ್.ರಮೇಶ(19) ಬಂಧಿತ ಆರೋಪಿಗಳು.
ನಗರದ ಹೊರ ವಲಯದ ಜೆ.ಎಚ್.ಪಟೇಲ್ ಬಡಾವಣೆ ವಾಸಿ ಕೆ.ವಿ.ಆಶಾ (33 ವರ್ಷ) ಸೆ.10ರಂದು ಮಧ್ಯಾಹ್ನ 1.52ರ ಸಮಯದಲ್ಲಿ ಪೋದಾರ್ ಶಾಲೆಯಿಂದ ಮಗಳನ್ನು ಕರೆ ತರುತ್ತಿದ್ದಾಗ ಹಿಂದಿನಿಂದ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಬೈಕ್ ಡಿಕ್ಕಿ ಹೊಡೆಸುವಂತೆ ಮಾಡಿ, ಹೆದರಿಸಿದ್ದಾರೆ. ನಂತರ ಆಶಾ ಕೊರಳಲ್ಲಿದ್ದ 1.05 ಲಕ್ಷ ಮೌಲ್ಯದ 15 ಗ್ರಾಂ ಶಾರ್ಟ್ ಚಿನ್ನದ ಸರ, 37 ಗ್ರಾಂನ ಚಿನ್ನದ ಮಾಂಗಲ್ಯ ಸರ ಒಟ್ಟು 1.40 ಲಕ್ಷ ಮೌಲ್ಯದ ಸುಮಾರು 20 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದರು. ಈ ಬಗ್ಗೆ ಆಶಾ ವಿದ್ಯಾನಗರ ಠಾಣೆಗೆ ಅದೇ ಸಂಜೆ ದೂರು ನೀಡಿದ್ದರು.
Read also : Davanagere news | ಆಟೋದಲ್ಲಿ ಮರೆತು ಹೋಗಿದ್ದ ಅಭರಣ ಹಿಂದಿರುಗಿಸಿದ ಪೊಲೀಸರು
ಎಎಸ್ಪಿಗಳಾದ ವಿಜಯಕುಮಾರ ಎಂ.ಸಂತೋಷ , ಜಿ.ಮಂಜುನಾಥ, ನಗರ ಡಿವೈಎಸ್ಪಿ ಮಲ್ಲೇಶ ದೊಡ್ಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆ ಇನ್ಸಪೆಕ್ಟರ್ ಪ್ರಭಾವತಿ ಸಿ.ಶೇತಸನದಿ ನೇತೃತ್ವದಲ್ಲಿ ಪಿಎಸ್ಐ ಹಾಗೂ ಸಿಬ್ಬಂದಿ ಹಾಗೂ ಜಿಲ್ಲಾ ಅಪರಾಧ ವಿಭಾಗದವರ ತಂಡವನ್ನು ರಚಿಸಿದ್ದು, ಈ ತಂಡವು ಆರೋಪಿಗಳು ಕೃತ್ಯ ಎಸಗಿದ 24 ಗಂಟೆಯಲ್ಲೇ ಸ್ವತ್ತು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹಲಗೇರಿ ಮೂಲದವನಾದ, ಹಾಲಿ ಕತ್ತಲಗೆರೆ ವಾಸಿ ಬಿ.ಅರುಣಕುಮಾರ ಹಾಗೂ ಕತ್ತಲಗೆರೆ ಬಿ.ಎಸ್.ರಮೇಶರನ್ನು ಪತ್ತೆ ಮಾಡಿ, 1.78 ಲಕ್ಷ ಮೌಲ್ಯದ ಚಿನ್ನದ ಸರ, ಮಾಂಗಲ್ಯ ಸರ, ಕೃತ್ಯಕ್ಕೆ ಬಳಸಿದ 50 ಸಾವಿರ ಮೌಲ್ಯದ ಹಿರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಜಪ್ತು ಮಾಡಲಾಗಿದೆ.
ವಿದ್ಯಾನಗರ ಠಾಣೆ ಪಿಎಸ್ಐಗಳಾದ ಜಿ.ಎನ್.ವಿಶ್ವನಾಥ, ಎಂ.ಪಿ.ವಿಜಯ್, ಸಿಬ್ಬಂದಿಯಾದ ಆನಂದ ಮುಂದಲಮನಿ, ಆರ್.ಲಕ್ಷ್ಮಣ, ಶಂಕರ ಜಾಧವ್, ಭೋಜಪ್ಪ ಕಿಚಡಿ, ಗೋಪಿನಾಥ ಬಿ.ನಾಯ್ಕ, ಜಿಲ್ಲಾ ಅಪರಾಧ ವಿ ಭಾಗದ ಸಿಬ್ಬಂದಿಯಾದ ಮಜೀದ್, ಆಂಜನೇಯ, ರಾಘವೇಂದ್ರ, ರಮೇಶ ನಾಯ್ಕ, ಬಾಲರಾಜ, ಜಿಲ್ಲಾ ಪೋಲೀಸ್ ಕಚೇರಿಯ ರಾಘವೇಂದ್ರ, ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್‍ನ ಮಾರುತಿ, ಸೋಮಪ್ಪ ರಾಮಜ್ಜಿ ಅವರನ್ನು ಒಳಗೊಂಡ ಅಧಿಕಾರಿ, ಸಿಬ್ಬಂದಿ ಯಶಸ್ವಿಯಾಗಿದ್ದಾರೆ.