ದಾವಣಗೆರೆ (Davanagere): ವಿಶ್ವ ಹಿಮೋಫಿಲಿಯಾ ದಿನ (World Hemophilia Day) ದಂಗವಾಗಿ ಏ.17ರಂದು ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯಿಂದ ರಾಜ್ಯದಾದ್ಯಂತ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ “ಮಹಿಳೆಯರು ಮತ್ತು ಹುಡುಗಿಯರಲ್ಲಿ ರಕ್ತಸ್ರಾವ” ಧ್ಯೇಯ ವಾಕ್ಯದೊಂದಿಗೆ ಅಂದು ನಗರದ ಜೆಜೆಎಂ ಕಾಲೇಜಿನ ಗ್ರಂಥಾಲಯ ಸಭಾಂಗಣದಲ್ಲಿ ಎಲ್ಲ ಮಹಿಳೆಯರ ಸಹಭಾಗಿತ್ವದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು, ಮಹಿಳಾ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಅರೆ ಸಿಬ್ಬಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮತ್ತಿತರರು ಆಗಮಿಸುವರೆಂದರು.
ಜತೆಗೆ, ಏ.21ರಂದು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಗೆ ತರಬೇತಿ, ಏ.29 ರಂದು ಜಿಲ್ಲೆಯ ಎಲ್ಲ ತಾಲೂಕು ವೈದ್ಯಾಧಿಕಾರಿ, ವೈದ್ಯಕೀಯ ಸಿಬ್ಬಂದಿಗೆ ಹಿಮೋಫಿಲಿಯಾ ಕುರಿತು ಅರಿವು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಜತೆಗೆ, ತುಮಕೂರು, ಬೆಂಗಳೂರಿನ ಯಲಹಂಕದಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅತೀವಿರಳ ನೂನ್ಯತೆಯಾದ ಹಿಮೋಫಿಲಿಯಾ 10 ಸಾವಿರಕ್ಕೆ ಒಬ್ಬರಿಗೆ ಇದ್ದು, ಪ್ರಪಂಚದಲ್ಲಿ 4 ಲಕ್ಷ ಜನರಿಗಿದೆ. ಭಾರತದಲ್ಲಿ 1 ಲಕ್ಷ ಜನರಿಗೆ ಈ ನೂನ್ಯತೆಯಿದ್ದು, ಅದರಲ್ಲಿ 25 ಸಾವಿರ ಜನರು ಮಾತ್ರ ಚಿಕಿತ್ಸೆಗೊಳ ಪಟ್ಟಿದ್ದಾರೆ. ಜತೆಗೆ, ಕರ್ನಾಟಕದಲ್ಲಿ ಆರೇಳು ಸಾವಿರ ಮಂದಿ ಇದ್ದು, ಅದರಲ್ಲಿ 2800 ಮಂದಿಯನ್ನು ಮಾತ್ರ ಗುರುತಿಸಲಾಗಿದೆ. ಅನೇಕರಿಗೆ ಈ ಕಾಯಿಲೆಯಿದ್ದರೂ ಸೂಕ್ತ ಚಿಕಿತ್ಸೆ, ಅರಿವಿನ ಕೊರತೆಯಿಂದ ಹಾಗೇ ಉಳಿದಿದ್ದಾರೆಂದರು.
ಸರ್ಕಾರ ಪ್ರಸ್ತುತ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಈ ನೂನ್ಯತೆಗೆ ಚಿಕಿತ್ಸೆ ಉಚಿತವಿದ್ದರೂ ಅನೇಕ ವೈದ್ಯರಿಗೆ ಈ ಕಾಯಿಲೆಗೆ ಚಿಕಿತ್ಸೆ ನೀಡುವ ಕುರಿತು ಅರಿವಿಲ್ಲ. ಹಾಗಾಗಿ, ಕಳೆದ 15 ವರ್ಷಗಳಿಂದ ಅಂತಹ ವೈದ್ಯರಿಗೆ ಸೊಸೈಟಿಯಿಂದ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
Read also : ಅನೈತಿಕ ಸಂಬಂಧದ ಶಂಕೆ: ನಡುರಸ್ತೆಯಲ್ಲೇ ಮಹಿಳೆ ಮೇಲೆ ಹಲ್ಲೆ
ಮುಂದಿನ ದಿನಗಳಲ್ಲಿ ಮನೆಮನೆ ಬಾಗಿಲಿಗೆ ಚಿಕಿತ್ಸೆ ಹಮ್ಮಿಕೊಳ್ಳಲಾಗಿದ್ದು, 150 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಿಯೇ ಹಿಮೋಫಿಲಿಯಾಯುಳ್ಳ ವ್ಯಕ್ತಿಗೆ ತುರ್ತು ಚಿಕಿತ್ಸೆ ಬೇಕಾದಲ್ಲಿ ತಕ್ಷಣ ಅವರ ಮನೆ ಬಾಗಿಲಿಗೆ ತೆರಳಿ ಚಿಕತ್ಸೆ ನೀಡಲಾಗವುದೆಂದರು.
ಸುದ್ದಿಗೋಷ್ಠಿಯಲ್ಲಿ ಸೊಸೈಟಿ ಉಪಾಧ್ಯಕ್ಷ ಡಾ.ಬಿ.ಟಿ. ಅಚ್ಯುತ್, ಮೀರಾ ಹನಗವಾಡಿ, ಅಭಿಷೇಕ್, ಮಹಾಂತೇಶ್, ಈಶ್ವರ್, ನವೀನ್ ಇದ್ದರು.