ಕನಕಗಿರಿ : ಜನಸ್ಪಂದನ ಕಾರ್ಯಕ್ರಮದಲ್ಲಿ ಇವತ್ತು ಒಂದು ವಿಶಿಷ್ಟ ಘಟನೆ ನಡೆಯಿತು. ಹತ್ತು ವರ್ಷಗಳಿಂದ ಹುಡುಕಿದರೂ ಕನ್ಯೆ ಸಿಗುತ್ತಿಲ್ಲ ಆದಷ್ಟು ಬೇಗನೆ ಕನ್ಯೆ ಹುಡುಕಿ ಕೊಡಿ ಸರ್ ಎಂದು ಕನಕಗಿರಿಯ ಯುವಕನೋರ್ವ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕನಕಗಿರಿಯ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದಿದ್ದ ತಾಲೂಕ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿಯ ಸಂಗಪ್ಪ ಎನ್ನುವ ವ್ಯಕ್ತಿ ತಮಗೆ ಕನ್ಯಾ ಹುಡುಕಿಕೊಡಬೇಕು ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಅವರಲ್ಲಿ ಮನವಿ ಮಾಡಿಕೊಂಡರು.
Read Also: ವ್ಯಸನಮುಕ್ತ ಸಮಾಜ ನಿರ್ಮಿಸಿ, ದೇಶದ ಭದ್ರ ಬುನಾದಿಗೆ ಕಾರಣಿಭೂತರಾಗೋಣ
ಜಿಲ್ಲಾಧಿಕಾರಿಗಳು ಜನರಿಂದ ಹವಾಲು ಸ್ವೀಕರಿಸುತ್ತಿದ್ದಾಗ ವೇದಿಕೆಗೆ ಬಂದ ಸಂಗಪ್ಪ ನಾನು ರೈತ ಕುಟುಂಬದಿಂದ ಬಂದಿದ್ದೇನೆ, ಹತ್ತಾರು ವರ್ಷಗಳಿಂದ ಹುಡುಕಿದರು ಕನ್ಯೆ ಸಿಗುತ್ತಿಲ್ಲ, ನನ್ನಂತೆ ಕನಕಗಿರಿಯಲ್ಲಿ ನೂರಾರು ಜನ ಯುವಕರು ಕನ್ಯೆ ಸಿಗದೇ ಮಾನಸಿಕವಾಗಿ ಪರಿತಪಿಸುತ್ತಿದ್ದಾರೆ.
ಇದರಿಂದ ನಾನು ಸಹ ಬಹಳಷ್ಟು ನೊಂದಿದ್ದೇನೆ ಕಾರಣ ನಮ್ಮಂತಹ ಯುವಕರ ಬಾಳು ಬೆಳಗಲಿ ಎಂದು ಸರ್ಕಾರದಿಂದ ಒಂದು ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡು ನಮ್ಮ ರೈತರ ಮಕ್ಕಳು ಬಾಳು ಬೆಳಗಲಿ ಎಂದು ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.
ಯುವಕನ ಮನವಿಗೆ ತಕ್ಷಣವೇ ವೇದಿಕೆ ಮೇಲಿದ್ದವರೆಲ್ಲರೂ ನಗುವಂತಾಯಿತು. ನಂತರ ಮನವಿ ಪತ್ರ ಓದಿದ ಜಿಲ್ಲಾಧಿಕಾರಿಗಳು ಯುವಕನೊಂದಿಗೆ ಮಾತನಾಡಿ ತಹಶೀಲ್ದಾರರು ನಿಮಗೆ ಕನ್ಯೆ ಹುಡುಕಿ ಕೊಡುತ್ತಾರೆ ಎಂದು ಹಾಸ್ಯವಾಗಿ ಹೇಳಿದರು.