ಹರಿಹರ (Harihara) : ಅಕ್ರಮ ಮಣ್ಣು ಹಾಗೂ ಮರಳು ಗಣಿಗಾರಿಕೆಯಿಂದಾಗಿ ಒಂದೆರಡು ವರ್ಷಗಳಲ್ಲಿ ನದಿಯೇ ಇಲ್ಲದಂತಾಗಲಿದೆ. ಆದ್ದರಿಂದ ತಾಲ್ಲೂಕಿನ ಜನತೆ ತಮ್ಮ ಮಕ್ಕಳಿಗೆ ಈಗಲೇ ನದಿ ದಡ ಹಾಗೂ ನದಿಯ ಅಂತಿಮ ವೀಕ್ಷಣೆ ಮಾಡಿಸಿಕೊಂಡು ಬರಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮನವಿ ಮಾಡಿಕೊಂಡಿದ್ದಾರೆ.
ತಾಲ್ಲೂಕಿನಲ್ಲಿ ಹುಟ್ಟಿ ಬೆಳೆದ ಮಕ್ಕಳು ನದಿ ಇದ್ದರೂ ನದಿ ಮತ್ತು ನದಿ ದಡ ಹೇಗಿರುತ್ತದೆ ಎಂದು ಕೇಳುವಂತಾಗಬಾರದು, ಈಗಾಗಲೇ ಬಹುತೇಕ ಗ್ರಾಮಗಳ ಜನತೆಗೆ ನದಿ ದಡಕ್ಕೆ ಹೋಗದ ದುಸ್ಥಿತಿ ಇದೆ, ಉಳಿದ ಗ್ರಾಮಗಳಲ್ಲೂ ಈ ಸ್ಥಿತಿ ಒಂದೆರಡು ವರ್ಷಗಳಲ್ಲಿ ಬರಲಿದೆ. ಹೀಗಾಗಿ ಮಕ್ಕಳಿಗೆ ರಜಾ ದಿನದಂದು ತಪ್ಪದೆ ನದಿ ವೀಕ್ಷಣೆಗೆ ಕರೆದುಕೊಂಡು ಹೋಗಿ ಬರಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.
ಪ್ರಕೃತಿ ಸಾವಿರಾರು ವರ್ಷಗಳ ಪ್ರಕ್ರಿಯೆ ನಂತರ ನದಿ ದಡದಲ್ಲಿ ಮೆದು ಮಣ್ಣನ್ನು ಸೃಜಿಸಿರುತ್ತದೆ. ಈ ಮೆದು ಮಣ್ಣು ಇರುವ ಪಟ್ಟಾ ಜಮೀನು, ಸರ್ಕಾರದ ನದಿ ಖರಾಬು ಜಮೀನುಗಳ ಮೆದು ಮಣ್ಣನ್ನು ಇತ್ತೀಚಿನ ವರ್ಷಗಳಲ್ಲಿ ಅವ್ಯಾಹತವಾಗಿ ಸಾಗಿಸಲಾಗುತ್ತಿದೆ.
ಪರಿಣಾಮವಾಗಿ ನದಿ ದಡದ ಸಾವಿರಾರು ಎಕರೆ ಜಮೀನುಗಳಲ್ಲಿ ಈಗಾಗಲೆ 10 ರಿಂದ 20 ಅಡಿವರೆಗೆ ಕೊರೆದು ಮಣ್ಣು ಸಾಗಿಸಲಾಗಿದೆ. ಈ ಜಮೀನುಗಳಲ್ಲಿದ್ದ ಅಸಂಖ್ಯಾತ ಮರ,ಗಿಡಗಳ ಮಾರಣಹೋಮ ಮಾಡಲಾಗಿದೆ. ತಾಲ್ಲೂಕಿನ ನದಿ ದಡದ ರಸ್ತೆ, ರುದ್ರಭೂಮಿಗಳು ಮಾಯವಾಗುತ್ತಾ ಭೌಗೋಳಿಕ ರಚನೆ ಅಸ್ತವ್ಯಸ್ತವಾಗಿದೆ.
ಇನ್ನು ಮರಳು ಗಣಿಗಾರಿಕೆಯ ಹೆಸರಲ್ಲಿ ನದಿಯ ಒಡಲನ್ನು ಬಗೆಯಲಾಗಿದೆ. ಜಲಚರ ಪ್ರಾಣಿಗಳು, ಅವುಗಳನ್ನು ಆಶ್ರಯಿಸಿದ ಪಕ್ಷಿಗಳು ಅವಸಾನದ ಅಂಚಿಗೆ ತಲುಪಿವೆ. ನದಿಯಲ್ಲಿ 10 ರಿಂದ 20 ಅಡಿಗಳ ಆಳದವರೆಗೆ ಗುಂಡಿಗಳು ಸೃಷ್ಟಿಯಾಗಿವೆ. ನದಿಯಲ್ಲಿ ದನಕರುಗಳಿಗೆ ಮೈ ತೊಳೆಸಲು, ನದಿ ದಡದ ಜನರು ಮೈ ತೊಳೆಯಲು, ಬಟ್ಟೆ ತೊಳೆಯಲು, ಸಂಕ್ರಾಂತಿ ಹಾಗೂ ಇತರೆ ಹಬ್ಬ, ಹರಿದಿನಗಳಂದು ನದಿಗೆ ಕಾಲಿಡದಂತಾಗಿದೆ.
ಗುಂಡಿಗಳಿರುವುದು ತಿಳಿಯದೆ ನದಿಗೆ ಈಜಾಡಲು ತೆರಳಿದ 30ಕ್ಕೂ ಹೆಚ್ಚು ಜನರು, 70ಕ್ಕೂ ಹೆಚ್ಚು ದನಕರುಗಳು ನೀರು ಪಾಲಾಗಿದ್ದಾರೆ. ಈ ಪ್ರಕರಣಗಳಲ್ಲಿ ಕೆಲವು ಮಾತ್ರ ದಾಖಲಾಗಿದ್ದರೆ ಉಳಿದವನ್ನು ಮುಚ್ಚಿ ಹಾಕಲಾಗಿದೆ ಎಂದು ಅವರು ಆರೋಪಿಸಿದರು.
ಕೋಟಿಗಟ್ಟಲೆ ಖರ್ಚು ಮಾಡಿ ಚುನಾವಣೆ ನಡೆಸುವ ಹಲವು ರಾಜಕಾರಣಿಗಳು, ಹತ್ತಾರು ಲಕ್ಷ ಹಣ ಖರ್ಚು ಮಾಡಿ ವರ್ಗಾವಣೆ ಮಾಡಿಸಿಕೊಂಡು ಇಲ್ಲಿಗೆ ಬರುವ ಸಂಬಂಧಿತ ನಾಲ್ಕೈದು ಇಲಾಖೆಗಳ ಅಧಿಕಾರಿಗಳು ತಾವು ಹೂಡಿದ ಬಂಡವಾಳದ ಹಲವು ಪಟ್ಟು ವಾಪಸ್ ಪಡೆಯುವ ಮೂಲವಾಗಿ ಅಕ್ರಮ ಮಣ್ಣು ಮತ್ತು ಮರಳು ಗಣಿಗಾರಿಕೆಯನ್ನು ಆಶ್ರಯಿಸಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
Read also : DAVANAGERE | ಸಂಸದರ ಆಸರೆ : ಮಕ್ಕಳಿಗೆ ಸಂಸತ್ ವೀಕ್ಷಣೆ ಭಾಗ್ಯ