ದಾವಣಗೆರೆ.ಮಾ.14 (Davanagere): ನಿವೇಶನ ಖಾತೆ ವರ್ಗಾವಣೆಗೆ ಲಂಚ ಪಡೆಯುತ್ತಿದ್ದ ಪಾಲಿಕೆ ವಲಯ ಕಚೇರಿ -2 ರ ಪ್ರಥಮ ದರ್ಜೆ ಸಹಾಯಕರೊಬ್ಬರು ಶುಕ್ರವಾರ ಲೋಕಾ ಬಲೆಗೆ ಬಿದ್ದಿದ್ದಾರೆ.
ಪಾಲನಾಯಕ ಲೋಕಾಯುಕ್ತ ಗಾಳಕ್ಕೆ ಬಿದ್ದ ನೌಕರ.
ಜಿ.ಯು.ಬಸವನಗೌಡ ಎನ್ನುವವರು ಆವರಗೆರೆ ವಾರ್ಡ್ ನಂ 30 ರಲ್ಲಿರುವ ಬಾಡಾ ಕ್ರಾಸ್(ಮೋತಿ ನಗರ)ದ ಖಾಲಿ ನಿವೇಶನ ಡೋರ್ ನಂಬರ್ 358/ 21 ರ 30*40 ಅಳತೆಯ ಸೈಟನ್ನು ತನ್ನ ತಂಗಿ ಶ್ರೀಮತಿ ಕಾವ್ಯ ಜಿ.ಯು.ಅವರಿಗೆ ಪಾಲು ವಿಭಾಗ ಯಾನೆ ಪಾರೀಖತ್ ಪತ್ರ ಮುಖಾಂತರ ನೋಂದಾವಣೆ ಮಾಡಿಸಿದ್ದರು.
ಈ ಸೈಟನ್ನು ತನ್ನ ತಂಗಿಯ ಹೆಸರಿಗೆ ಖಾತೆ ವರ್ಗಾವಣೆ ಮಾಡಿಕೊಡಲು ಪಾಲಿಕೆ ವಲಯ ಕಚೇರಿ- 2 ರಲ್ಲಿ ಅರ್ಜಿ ಸಲ್ಲಿಸಿದ್ದರು. ಖಾತೆ ವರ್ಗಾವಣೆ ಮಾಡಿಕೊಡಲು ಪಾಲನಾಯಕ 2500 ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಬಸವನಗೌಡ ಅವರಿಗೆ ಲಂಚದ ಹಣ ನೀಡಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಇಷ್ಟವಿಲ್ಲದ ಕಾರಣ ಪಾಲನಾಯಕ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಅನ್ವಯ ಶುಕ್ರವಾರ ಪ್ರಥಮ ದರ್ಜೆ ಸಹಾಯಕ ಪಾಲನಾಯಕ ಅವರು ತಮ್ಮ ಕಚೇರಿಯಲ್ಲಿ ಬಸವನಗೌಡ ಅವರಿಂದ 2500 ರೂ ಲಂದ ಹಣ ಪಡೆಯುತ್ತಿದ್ದಾಗ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ.
Read also : Davanagere | ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನ
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಪ್ರಭು ಬ.ಸೂರಿನ, ಮುಸ್ತಾಕ್ ಅಹಮದ್ ಮತ್ತು ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪಾಲನಾಯಕ ಅವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗಿದೆ.