ಶಾಂತಕವಿಯೆಂದು ಹೆಸರು ಮಾಡಿದ್ದ ಸಕ್ರಿ ಭಾಳಾಚಾರ್ಯರು ಕನ್ನಡ ನಾಟಕ ಬರೆದು ತಾಲೀಮು ಮಾಡಿಸುವುದನ್ನು ತಪ್ಪಿಸಲು ಬ್ರಿಟಿಷ್ ಸರ್ಕಾರ ಅವರನ್ನು ಒಂಭತ್ತು ಮೈಲಿ ದೂರದ ಶಾಲೆಗೆ ವರ್ಗ ಮಾಡಲಾಗುತ್ತದೆ.ಆದರೆ ಅವರು ಒಂದು ಎಮ್ಮೆಯ ಮೇಲೆ ಕುಂತು ದಿನಾ ಸವಾರಿ ಮಾಡಿಕೊಂಡು ಬಂದು ಕನ್ನಡ ನಾಟಕದ ತಾಲೀಮು ಮುಂದುವರೆಸುತ್ತಾರೆ!.
ಇದನ್ನು ತಿಳಿದ ಶರೀಫಜ್ಜ,
“ಇದು ಸಕ್ರಿಯಪ್ಪ…ನಿಜವಾದ ಸಕ್ರಿ”
ಎಂದು ಶಬಾಸ್ ಗಿರಿ ಹೇಳುತ್ತಾರೆ.
ಈ ಘಟನೆ ನೆನಪಾಗಲು ಕಾರಣವಾದ ವೀರಣ್ಣ ಮಡಿವಾಳರ ಎಂಬ ಕವಿ,ತನ್ನ ಹಡದಿ ಹಾಸುವ ಹುಡುಗನ ನೋವುನಲಿವುಗಳ ಕಾವ್ಯದ ಮೂಲಕವೇ ನಾಡಿಗೆ ಚಿರಪರಿಚಿತರಾದವರು. ವಯಸ್ಸಿಗೆ ಮೀರಿದ ಅನುಭವ ಮತ್ತು ಅತ್ಯುತ್ಸಾಹವೇ ಅನೇಕ ಬಾರಿ ಅವರನ್ನು ಅಗ್ನಿಪರೀಕ್ಷೆಗೆ ದೂಡಿರುವುದುಂಟು.
ಯಾವ ಸಾಹಿತ್ಯಿಕ ಹಿನ್ನೆಲೆಯೂ ಇರದ ವೀರಣ್ಣ,
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಎಂಬ ಸಣ್ಣ ಹಳ್ಳಿಯ ಬಡತನದ ಕುಟುಂಬದಿಂದ ಬಂದವರು.
ಈಗಿನ ಸರ್ಕಾರಿ ಶಾಲೆಗೂ ಮುಂಚೆ ಹಾವೇರಿಯ ಮೆಳ್ಳಾಗಟ್ಟಿ ಎಂಬ ಊರಿನಲ್ಲಿ ಮೇಷ್ಟ್ರು ಆಗಿದ್ದವರು.ಅಲ್ಲಿನ ಬಡ ಕೂಲಿಕಾರ್ಮಿಕರ ಮಕ್ಕಳೊಂದಿಗೆ ಮಕ್ಕಳಾಗಿ,ಮೇಷ್ಟ್ರಾಗಿ,ಅಲ್ಲಿ ನಿರ್ಭಯವಾಗಿ ಆಡಿಕೊಂಡಿದ್ದ ನವಿಲುಗಳೊಂದಿಗೆ ಸಂವಾದ ನಡೆಸುವಷ್ಟು ಭಾವುಕನಾಗಿ ಕವಿಯಾಗಿ ಅರಳಿದವರು.
ವೀರಣ್ಣ ಬರವಣಿಗೆಯಲ್ಲಿ ಸದ್ದು ಮಾಡಿದಷ್ಟೇ ಬದುಕಿನಲ್ಲೂ ಸದಾ ಸದ್ದು ಮಾಡುತ್ತಲೇ ಬಂದಿದ್ದಾರೆ. ವೈಯಕ್ತಿಕವು ಸಾಮಾಜಿಕವೂ ಹೌದೆಂದು ಬದುಕುವವರ ಪಟ್ಟಿಯಲ್ಲಿ ಇವರ ಹೆಸರೂ ಮೊದಲು ಇರುತ್ತದೆ. ಇಂತಹ ವೀರಣ್ಣ ಚಿಕ್ಕೋಡಿ ತಾಲೂಕಿನ ನಿಡಗುಂದಿಯ ಅಂಬೇಡ್ಕರ್ ನಗರದ ಶಾಲೆಯಲ್ಲಿ ಅನೇಕ ಮೂಲಭೂತ ಸೌಕರ್ಯಗಳನ್ನು ತನ್ನ ಮಿತಿಯಲ್ಲಿ ಮಾಡಿಕೊಂಡು,ಸರ್ಕಾರಿ ಶಾಲೆಯ ಮಕ್ಕಳು ಸಂಖ್ಯೆಯನ್ನು ಎತ್ತರಿಸಿದ್ದಾರೆ.
ಸರ್ಕಾರಿ ಶಾಲೆಗಳು ಉಸಿರಾಡುವುದಕ್ಕೂ ಕಷ್ಟಪಡುತ್ತಿರುವ ಈ ಕಾಲದಲ್ಲಿ ವೀರಣ್ಣ ಕೇಳಿರುವ ಶಾಲೆಗಾಗಿ ನಾಲ್ಕು ಕೊಠಡಿಗಳು ನಿರ್ಮಾಣಕ್ಕೆ ಅಧಿಕಾರಿಗಳು ಸ್ಪಂದಿಸಬೇಕಿತ್ತು. ಅನುದಾನದ ಕೊರತೆಯೋ ಅಸಹಾಯಕತೆಯನ್ನು ಹೇಳಿ ಕಳಿಸಬಹುದಿತ್ತು.ಅದು ಬಿಟ್ಟು ಅನಾಗರಿಕರಂತೆ ಬೆದರಿಸುವುದು ಅಮಾನತುಗೊಳಿಸಿರುವುದು ಸರಿಯಲ್ಲ.
ಹದಿನೈದು ಕಿ.ಮೀ.ದೂರದ ಕಾಲ್ನಡಿಗೆಗೆ ಬೆದರಿದ ಅಧಿಕಾರಿಗಳು ವೀರಣ್ಣನನ್ನು ಅಮಾನತುಪಡಿಸಿರುವುದನ್ನು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ. ವೀರಣ್ಣನ ಮೌನ ಪ್ರತಿಟನೆಯ ಆಳದಲ್ಲಿ ಬಾಬಾಸಾಹೇಬರು , ಲೋಹಿಯಾ , ಗಾಂಧಿ,ಮಾರ್ಕ್ಸ್,ಇದ್ದಾರೆ.
ಹಾಗೆಂದೇ ಸರ್ಕಾರದ ಘನತೆಯನ್ನು ಹೆಚ್ಚಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.ಅಮಾನತುಗೊಳಿಸಿ ನೀಡಲಾದ ನೋಟೀಸಿನಲ್ಲಿಯೂ ಸಹ ಅಕ್ಷರ ಕಲಿಸುವ ಗುರುವನ್ನು ಹೀನಾಯವಾಗಿ ಕಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಶಾಲಾ ಸಾಕ್ಷರತಾ ಇಲಾಖೆಯಲ್ಲಿ ಸುಧಾರಣೆಯಾಗುವ ಕೆಲಸ ಕೂಡ ಬಹಳಷ್ಟಿವೆ.
ಒಂದು ಶಾಲೆಯಲ್ಲಿ ನೂರೈವತ್ತು ಮಕ್ಕಳಿದ್ದಾರೆ ಎಂದರೆ ಆ ಮಕ್ಕಳಿಗೆ ಶೌಚಾಲಯವಿಲ್ಲ,ತರಗತಿ ಕೊಠಡಿ ಇರುವುದಿಲ್ಲ.ಅಷ್ಟಕ್ಕೂ ಮಕ್ಕಳ ಬಗ್ಗೆ,ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಡಾಕ್ಟರುಗಳನ್ನು ಕರೆಸಿ ಆರೋಗ್ಯ ತಪಾಸಣೆ ಮಾಡಿಸಿ,ಮಕ್ಕಳು ಅಪೌಷ್ಟಿಕತೆಯ ಕುರಿತು ಹೇಳಿದರೆನ್ನಿ.
ಆಗ ಪೋಷಕರೇ ಶಾಲೆಗೆ ಬಂದು,”ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳಿಸೋದು ಓದಲಿಕ್ಕೆ,ಬರಿಯಲಿಕ್ಕೆ …ಅದನ್ನು ಮಾತ್ರ ಕಲಿಸಿ,ನಮ್ ಹುಡುಗಿಯ ಹಲ್ಲು ಸರಿಯಿಲ್ಲ,ಅಪೌಷ್ಟಿಕ ಅದಾಳ ಅಂತೆಲ್ಲ ತಲೆಹರಟೆ ಮಾಡಬ್ಯಾಡ್ರಿ ಹಿಂಗೆಲ್ಲಾ ಮಾಡಿದರೆ ನಾಳೆ ನಾವು ಮದುವೆ ಮಾಡಿಕೊಡೋದಾದರೂ ಹೆಂಗೆ?’ಎಂದು ಗದರುವ ಪೋಷಕರೂ ಇದ್ದಾರೆ.
ಇಂತವರ ನಡುವೆ ಶಿಕ್ಷಕರು ಕೆಲಸ ಮಾಡಬೇಕು.ಜನರ,ಪೋಷಕರ ಮನ ಓಲೈಸಬೇಕು.ಅಷ್ಟೇ ಅಲ್ಲದೆ ಮನೆ ಬಿಟ್ಟು ಶಾಲೆಗೆ ಬರಲು ಅಳುವ ಮಕ್ಕಳನ್ನು ಆಕರ್ಷಿಸಬೇಕು.ಮನೆಗಿಂತಲೂ ಹೆಚ್ಚು ಆಕರ್ಷಣೀಯವೂ ಮನರಂಜನಾತ್ಮಕವೂ ಆಹ್ಲಾದಕರವಾಗಿಯೂ ಕಾಣುವ ಶಾಲೆ ಮಾಡಿರುವ ವೀರಣ್ಣ ಮಾಡಿರುವ ತಪ್ಪಾದರೂ ಏನು? ನಾನು ಯಾವಾಗಲೋ ಓದಿ ಮರೆತಿದ್ದ ಕೆಲವು ವಿಷಯಗಳು ಇಂದು ನೆನಪಿಗೆ ಬಂದವು.
ಶಿಕ್ಷಣ ಇಲಾಖೆಯ ಶುಷ್ಕ ಅಧಿಕಾರಿಗಳ ಗಮನಕ್ಕೆ ಇರಲಿ ಎಂದು ನಾಲ್ಕು ಘಟನಾವಳಿಗಳನ್ನು ಉದ್ಧರಿಸಲಾಗಿದೆ.ಆ ಮೂಲಕವಾದರೂ ಶಿಕ್ಷಣ ಸಚಿವರು,ಅಧಿಕಾರಿಗಳ ಕಣ್ಣು ತೆರೆಯಲಿ.
ಕನ್ನಡ ಸಾಲಿ ತೆರೆದ ವಾಲ್ಟರ್ ಎಲಿಯಟ್
ಕಿತ್ತೂರು ರಾಣಿ ಚೆನ್ನಮ್ಮ ಮೊದಲ ಬಾರಿ ಯುದ್ಧದಲ್ಲಿ ಗೆದ್ದಾಗ ಸೆರೆಯಾಳಾಗಿದ್ದ ವಾಲ್ಟರ್ ಎಲಿಯಟ್ ಎಂಬ ಬ್ರಿಟಿಷ್ ಅಧಿಕಾರಿ, ಹೊರಬಂದ ಮೇಲೆ ಮಾಡಿದ ಮೊಟ್ಟಮೊದಲ ಕೆಲಸವೆಂದರೆ ತನ್ನ ಸಂಬಳದಲ್ಲಿಯೇ ಕನ್ನಡ ಶಾಲೆಯನ್ನು ನಡೆಸಿದ್ದು.ಈ ಪ್ರಾಂತದ ಭಾಷೆ ಕನ್ನಡವೇ ಆಗಿದ್ದರಿಂದ ಕನ್ನಡವೇ ಶಿಕ್ಷಣ ಮಾಧ್ಯಮವಾಗಿರಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ.
ರಸೆಲ್ ಸಾಹೇಬರು
1865 ರಷ್ಟೊತ್ತಿಗೆ ಧಾರವಾಡ ಭಾಗದ(ಮುಂಬೈ ಪ್ರಾಂತ್ಯದ)ಶಿಕ್ಷಣಾಧಿಕಾರಿಯಾಗಿ ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಎಂ.ಎ.ಪದವಿ ಪಡೆದಿದ್ದ ವಿಲಿಯಂ ಆಲನ್ ರಸೆಲ್ ಎಂಬ ವ್ಯಕ್ತಿ ನೇಮಕವಾಗುತ್ತಾನೆ.ಧಾರವಾಡದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರ್ನಾಕ್ಯುಲರ್ ಶಾಲೆಗಳಲ್ಲಿ ಕನ್ನಡಬಲ್ಲ ಶಿಕ್ಷಕರಿಲ್ಲದ್ದನ್ನು ನೋಡಿ ಕನ್ನಡಿಗರ ನಿರಾಸಕ್ತಿಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಆ ನಂತರ ವ್ರತ ಹಿಡಿದವನಂತೆ ಆತ ಕನ್ನಡ ಪುಸ್ತಕಗಳು,ಕನ್ನಡ ಶಿಕ್ಷಕರ ತರಬೇತಿ ಮಾತ್ರವಲ್ಲ,ಕನ್ನಡ ಮುದ್ರಣದ ಅಕ್ಷರಗಳುಳ ಮೊಳೆಗಳನ್ನು ತಯಾರು ಮಾಡುವ,ಮಾಡಿಸುವ ಕೆಲಸದಲ್ಲಿ ತೊಡಗುತ್ತಾನೆ.
ಬುಟ್ಟಿಯಲ್ಲಿ ಹೊತ್ತು ಮಾರಿದ ಗಳಗನಾಥರು
ಸಾಮಾನ್ಯ ಸಾಲಿ ಮಾಸ್ತರರಾಗಿದ್ದ ವೆಂಕಟೇಶ್ ತಿರಕೋ ಕುಲಕರ್ಣಿ ಹಾವೇರಿ ಜಿಲ್ಲೆಯ ತುಂಗಭದ್ರೆಯ ತಟದಲ್ಲಿರುವ ಗಳಗನಾಥ ಊರಿನವರು. ಕನ್ನಡ ಸೇವೆಗೆಂದೇ ಮಾಸ್ತರ ನೌಕರಿಯನ್ನೂ ತ್ಯಜಿಸಿ,ಪೂರ್ಣಪ್ರಮಾಣದ ಕನ್ನಡದ ಪರಿಚಾರಿಕೆ ಗಾಡಿ ಟೊಂಕಕಟ್ಟಿ ನಿಂತ ಮಹಾನುಭಾವರು. 1898 ರಲ್ಲಿ, ‘ಪ್ರಬುದ್ಧ ಪದ್ಮನಯನೆ’ ಎಂಬ ತಮ್ಮ ಚೊಚ್ಚಲ ಕಾದಂಬರಿಯನ್ನು ಪ್ರಕಟಿಸಿದ ವೆಂಕಟೇಶ್ ತಿರಕೋ ಕುಲಕರ್ಣಿಯವರು ಮುಂದೆ ಗಳಗನಾಥ ಎಂಬ ಹೆಸರಿನಿಂದಲೇ ಬರೆದು ಪ್ರಸಿದ್ಧರಾದವರು.
1907 ರಲ್ಲಿ,ಹಾವೇರಿಯ ಅಂಗಡಿಯಲ್ಲಿ ‘ಸದ್ಭೋದ ಚಂದ್ರಿಕೆ’ಎಂಬ ಮಾಸ ಪತ್ರಿಕೆಯನ್ನು ತೆರೆದ ಗಳಗನಾಥರು,ಅದುವರೆಗೂ ಸಮೂಹ ಸಂವಹನ ಮಾಧ್ಯಮಗಳ ವೈಜ್ಞಾನಿಕ ಕಲ್ಪನೆ ಕೂಡ ಇಲ್ಲದ ಆ ಕಾಲದಲ್ಲಿ ಜನರಲ್ಲಿ ವಾಚನಾಭಿರುಚಿಯನ್ನು ಮೂಡಿಸಿದರು. ಕರ್ನಾಟಕವು ಗಳಗನಾಥರನ್ನು ಕೇವಲ ಕಾದಂಬರಿ ಪಿತಾಮಹ ಎಂದರೆ ಸಾಲದು.ತಮ್ಮ ಇಳಿವಯಸ್ಸಿನಲ್ಲೂ ಕಾಲ್ನಡಿಗೆಯಲ್ಲಿ ಪುಸ್ತಕಗಳನ್ನು ಹೊತ್ತು ಮನೆ ಮನೆಗೆ ತಲುಪಿಸಿದ ಗಳಗನಾಥರು ನಿಜವಾದ ಕನ್ನಡ ಪರಿಚಾರಕರಾಗಿದ್ದಾರೆ ಎಂಬುದನ್ನು ಯಾರೂ ಮರೆಯುವಂತಿಲ್ಲ.
ಕುವೆಂಪು ಬಂದರು ತಳುಕಿಗೆ
ಎಪ್ಪತ್ತರ ದಶಕದಲ್ಲಿ ಎಸ್.ನಿಜಲಿಂಗಪ್ಪನವರದು ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಬಹುದೊಡ್ಡ ಹೆಸರಾಗಿತ್ತು.ಅಂತಹ ಘನ ವ್ಯಕ್ತಿಯನ್ನು ಅವಿರೋಧ ಆಯ್ಕೆ ಮಾಡಿ ಕಳುಹಿಸಬೇಕೆಂದು ಇಡೀ ರಾಷ್ಟ್ರದ ಕಾಂಗ್ರೆಸ್ಸಿನ ಬಹುತೇಕರು ತೀರ್ಮಾನಿಸಿದ್ದರು. ಅದರಂತೆ ಅವರನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಅವಿರೋಧ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಲು ತೀರ್ಮಾನಿಸಲಾಯಿತು.
ಈ ಮಾಹಿತಿಯನ್ನು ಅರಿತ ಕುವೆಂಪು,ಇದು ಪ್ರಜಾಪ್ರಭುತ್ವಕ್ಕೆ ಶೋಭೆಯ ವಿಚಾರವಲ್ಲ ಎಂದು ಸಮಾಜವಾದಿ ವಿಚಾರಗಳ ಒಲವಿದ್ದ ಮಾನಸ ಗಂಗೋತ್ರಿಯಲ್ಲಿದ್ದ ತನ್ನ ಶಿಷ್ಯ ಮೊಳಕಾಲ್ಮೂರಿನ ಅಂಜಿನಪ್ಪ ಎಂಬ ವಿದ್ಯಾರ್ಥಿಯನ್ನು ಕರೆದು,ನಿಜಲಿಂಗಪ್ಪನವರ ವಿರುದ್ಧ ಮೊಳಕಾಲ್ಮೂರು ವಿಧಾನಸಭಾ ಚುನಾವಣೆಯಲ್ಲಿ ನೀವು ಸ್ಪರ್ಧಿಸಬೇಕು ಎಂದು ಹೇಳುತ್ತಾರೆ.ಅದರಂತೆ ಅಂಜಿನಪ್ಪ ನಿಜಲಿಂಗಪ್ಪನವರ ವಿರುದ್ಧ ಸ್ಪರ್ಧಿಸುತ್ತಾರೆ.
ತನ್ನ ಸಮಾಜವಾದಿ ವಿದ್ಯಾರ್ಥಿಯ ಪರ ಚುನಾವಣಾ ಪ್ರಚಾರದ ನೆಪದಲ್ಲಿ ,ತನ್ನ ಗುರುಗಳಾದ ತ.ಸು.ವೆಂಕಣ್ಣಯ್ಯರ ತಳುಕು ಎಂಬ ಊರನ್ನು ಈ ನೆಪದಲ್ಲಾದರೂ ಕಣ್ತುಂಬಿಕೊಳ್ಳಬಹುದು ಎಂಬ ದೂರದ ಆಸೆ ಕುವೆಂಪು ಅವರದಾಗಿತ್ತು. ಮಾನಸ ಗಂಗೋತ್ರಿಯಲ್ಲಿ ಪ್ರೊಫೆಸರ್ ,ಕುಲಪತಿಗಳೂ ಆಗಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ಕುವೆಂಪು ಎಂದಿಗೂ ಸರ್ಕಾರದ,ರಾಜಕಾರಣಿಗಳ ಮರ್ಜಿಗೆ ಒಳಗಾಗಲಿಲ್ಲ ಎಂಬುದು ಈ ಕ್ಷಣಕ್ಕೂ ರೋಮಾಂಚನಗೊಳಿಸುವಂತಿದೆ.
ವೀರಣ್ಣ ಮಡಿವಾಳರ ಎಂಬ ಕವಿ,ವೀರಣ್ಣ ಮ.ತಿ.ಎಂಬ ಶಿಕ್ಷಕನೊಬ್ಬ ಸಾಂವಿಧಾನಿಕವಾಗಿ ಪ್ರತಿರೋಧವನ್ನು ದಾಖಲಿಸಿದ್ದಾರೆ,ವೀರಣ್ಣ ಗಣಾಚಾರಿ ಎಂಬ ಸೋಷಿಯಲ್ ಮೀಡಿಯಾದ ವಾಚಕ,ವೀರಣ್ಣ ಕಲಕೇರಿ ಎಂಬ ಊರ ಮಣ್ಣಿನ ಮೇಷ್ಟ್ರುವಿನ ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಅಷ್ಟೇ ಅಲ್ಲ,ಇಡೀ ರಾಜ್ಯದ ಶಾಲೆಗಳ ಸುಧಾರಣೆಗೆ ಕನ್ನಡದ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಲಿ.
ಬಿ.ಶ್ರೀನಿವಾಸ ದಾವಣಗೆರೆ.