ದಾವಣಗೆರೆ : ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಸಿದ್ದ ತಾಯಿ ಮತ್ತು ಮಗುವನ್ನು 112 ಹೊಯ್ಸಳ ಸಿಬ್ಬಂದಿ ರಕ್ಷಿಸಿದ ಘಟನೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಸೋಮವಾರ ವರದಿಯಾಗಿದೆ.
ಹೊನ್ನಾಳಿ ತಾಲ್ಲೂಕಿನವರೇ ಆದ ಸಂತ್ರಸ್ತೆಯು ಕೌಟಂಬಿಕ ಕಲಹದಿಂದ ಮನನೊಂದು ತನ್ನ ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ತುಂಗಭದ್ರಾ ಸೇತುವೆ ಬಳಿ ಓರ್ವ ಮಹಿಳೆ ತನ್ನ ಮಗುವಿನೊಂದೊಂದಿಗೆ ನದಿಗೆ ಹಾರಲು ಪ್ರಯತ್ನಿಸುತ್ತಿರುವುದನ್ನು ಕಂಡ ಸ್ಥಳೀಯರೊಬ್ಬರು ಕೂಡಲೇ 112ಕ್ಕೆ ಕರೆ ಮಾಡಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ 112 ಹೊಯ್ಸಳ ಅಧಿಕಾರಿ ಎಎಸೈ ಅಶೋಕ ರೆಡ್ಡಿ ಹಾಗೂ ವಾಹನ ಚಾಲಕ ಲೋಕೇಶ್ ಘಟನಾ ಸ್ಥಳಕ್ಕೆ ತೆರಳಿ ಸಂತ್ರಸ್ತೆ ಹಾಗೂ ಮಗುವನ್ನು ರಕ್ಷಿಸಿದ್ದಾರೆ. ನಂತರ ಹೊನ್ನಾಳಿ ಠಾಣೆಗೆ ಕರೆದೊಯ್ದು ಹೊನ್ನಾಳಿ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಬಳಿ ಹಾಜರುಪಡಿಸಿದ್ದು, ಸದರಿ ಮಹಿಳೆಗೆ ಸಾಂತ್ವನ ಹೇಳಿ, ಧೈರ್ಯ ತುಂಬಿ ತಾಯಿ-ಮಗುವನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.
112 ಹೊಯ್ಸಳ ಕರ್ತವ್ಯ ಅಧಿಕಾರಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಶ್ಲಾಘಿಸಿದ್ದು, ಯಾವುದೇ ತುರ್ತು ಸೇವೆಗಾಗಿ ಸಹಾಯವಾಣಿ 112ಕ್ಕೆ ಕರೆ ಮಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ.