ದಾವಣಗೆರೆ : ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ಬಂಧಿಸಲು ಜಿಲ್ಲಾ ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ.
ಈ ಹಿಂದೆ ಕಲಬುರಗಿ ಮಹಿಳಾ ಅಧಿಕಾರಿಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಈಗ ಮತ್ತೆ ರಾಜ್ಯದ ಉನ್ನತ ಹುದ್ದೆಯಲ್ಲಿರುವ ಮಹಿಳಾ ಅಧಿಕಾರಿ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿ ನಾಲಗೆ ಹರಿಬಿಟ್ಟಿದ್ದಾರೆ. ಪದೇ ಪದೆ ಇಂತಹ ತಪ್ಪು ಮಾಡುವ ಮನುವಾದಿ ಸಂಸ್ಕೃತಿಯನ್ನು ಹೊಂದಿರುವ ಎಂಎಲ್ಸಿ ರವಿಕುಮಾರ್ ಅವರನ್ನು ಕೂಡಲೇ ಬಂಧಿಸಬೇಕು. ಅವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ರಾಜ್ಯಪಾಲರಲ್ಲಿ ಒತ್ತಾಯಿಸಿದ್ದಾರೆ.
ನ್ಯಾಯಾಲಯ ಸಹ ಮಧ್ಯ ಪ್ರವೇಶಿಸಿ ಪದೇ ಪದೆ ಮಹಿಳಾ ಸಮುದಾಯವನ್ನು ನಿಂದಿಸುತ್ತಿರುವ ಇವರಿಗೆ ನ್ಯಾಯಾಲಯ ತಕ್ಕ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಬಾಯಿ, ಮಂಗಳಾ, ಆರ್.ಮಂಜಮ್ಮ, ಮೆಹಬೂಬ್, ಸಲ್ಮಾಬಾನು ಅವರು ಡಿಸಿ, ಎಸ್ಪಿ, ಸಿಇಒಗೆ ಮನವಿ ಸಲ್ಲಿಸಿದರು. ದೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ ಇದ್ದರು.