ದಾವಣಗೆರೆ : ಗುರು ಮಹಿಮೆ ಅಪಾರವಾದದ್ದು, ಕಲಿಯುಗದಲ್ಲಿ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಭಕ್ತಿ ಮಾರ್ಗವು ಸುಲಭವಾದ ದಾರಿ ಅರ್ಥಾತ್ ನಮಗೆ ಸದಾ ದಾರಿ ದೀಪವಾಗಿ ಸರಿದಾರಿಗೆ ಕೊಂಡೊಯ್ಯುವ ಗುರುವಿನ ಮಾರ್ಗದರ್ಶನ ಅತ್ಯಗತ್ಯವಾಗಿದೆ. ಆದ್ದರಿಂದ ನಾವು ಸದಾ ಗುರುಭಕ್ತಿಯನ್ನು ಹೊಂದಬೇಕು. ನಮಗೆ ಗುರುಕಾರುಣ್ಯವು ಒಂದಿದ್ದರೆ ಸಾಕು ನಮ್ಮ ಜೀವನ ಸಾರ್ಥಕವಾಗುವುದು ಎಂದು ಕುಶಾಲನಗರದ ಉದಯೋನ್ಮುಖ ಹಿನ್ನೆಲೆ ಗಾಯಕಿ, ರಂಗಕರ್ಮಿ, ಯೋಗ ಮತ್ತು ಭರತನಾಟ್ಯ ಕಲಾವಿದೆ ಕು|| ಸಂವೇದಿತಾ ಸುಭಾಷ್ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.
ನಗರದ ದೇವರಾಜ್ ಅರಸ್ ಲೇಔಟ್ ‘ಸಿ’ ಬ್ಲಾಕ್‍ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರ ದಾವಣಗೆರೆ ಇಲ್ಲಿ ಗುರುಪೂರ್ಣಿಮಾ ಪೂಜಾ ಮಹೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ‘ಗುರುಭಜನೆ-ಭಕ್ತಿ ಸುಧೆ’ ಸಂಗೀತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಗುರು ಎಂದರೆ ನಮ್ಮೊಳಗಿರುವ ಕತ್ತಲೆಯನ್ನು ದೂರಗೊಳಿಸಿ ಹೊಸ ಬೆಳಕಿನೊಂದಿಗೆ ಚೈತನ್ಯವನ್ನು ಕರುಣಿಸುವ ಕರುಣಾಸಾಗರ. ನಾವು ಭಕ್ತಿ, ಶ್ರದ್ಧೆ, ನಂಬಿಕೆ, ಶಿಸ್ತು ಇವೆಲ್ಲವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಗುರುತೋರಿದ ಸನ್ಮಾರ್ಗದಲ್ಲಿ ನಡೆದರೆ ನಮಗೆ ಖಂಡಿತವಾಗಿಯೂ ಯಶಸ್ಸು ಸಿಗುವುದು. ಇದು ಗುರುಮಹಿಮೆಯ ಶಕ್ತಿ ಎಂದು ಗುರುಪೂರ್ಣಿಮಾದ ವಿಶೇಷತೆಯ ಬಗ್ಗೆ ತಿಳಿಸಿದರು.
Read also : ಭದ್ರಾ ಜಲಾಶಯದಲ್ಲಿ 173 ಅಡಿ ನೀರು : ಭರ್ತಿಗೆ ಕೆಲವೇ ದಿನ ಬಾಕಿ
ಪ್ರಾರಂಭದಲ್ಲಿ ಅಗ್ನಿಹೋತ್ರ ಹೋಮವನ್ನು ಶಾಸ್ತ್ರೋಕ್ತವಾಗಿ ಮಂತ್ರ ಪಠಣಗಳೊಂದಿಗೆ ಸಾಮೂಹಿಕವಾಗಿ ಮಾಡಲಾಯಿತು. ಹಿರಿಯ ಪುರೋಹಿತರಾದ ಪೂಜ್ಯ ಶ್ರೀ ಗುರುನಾಥ ಭಟ್ ಇವರ ಮಾರ್ಗದರ್ಶನದೊಂದಿಗೆ ಗುರು ಪಾದುಕಾಪೂಜೆಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.
ನಂತರ ಉದಯೋನ್ಮುಖ ಹಿನ್ನೆಲೆ ಗಾಯಕಿ ಕು|| ಸಂವೇದಿತಾ ಸುಭಾಷ್ ಇವರಿಂದ ‘ಗುರುಭಜನೆ-ಭಕ್ತಿ ಸುಧೆ’ ಸಂಗೀತ ಕಾರ್ಯಕ್ರಮ ನಡೆಯಿತು. ದಾವಣಗೆರೆ ವಿ.ವಿ. ಸ್ನಾತಕೋತ್ತರ ಯೋಗ ವಿಜ್ಞಾನ ವಿಭಾಗದ ವಿದ್ಯಾರ್ಥಿ ರಾಹುಲ್ ವಿ.ಕೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶ್ರೀಮತಿ ಜ್ಯೋತಿಲಕ್ಷ್ಮೀ ವಾಸುದೇವ್ ಮತ್ತು ಸಂಧ್ಯಾ ಮಂಗಳೂರು ಇನ್ನಿತರರು ಸಹಕರಿಸಿದ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಮಹಂತೇಶ್, ಚಂದ್ರ ಎಸ್., ಜಿಲ್ಲಾಧಿಕಾರಿ ಕಛೇರಿಯ ಉದ್ಯೋಗಿ ಸಂತೋಷ್ ಹೆಚ್., ಪ್ರತಿಷ್ಠಾನದ ಯೋಗ ಸಾಧಕರು ಇನ್ನಿತರರು ಭಾಗವಹಿಸಿದ್ದ ಕಾರ್ಯಕ್ರಮದ ಕೊನೆಯಲ್ಲಿ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಗುರುಪೂರ್ಣಿಮಾ ಮಹೋತ್ಸವ ಸಂಪನ್ನಗೊಂಡಿತು.